Site icon Vistara News

Congress Guarantee: ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರದ ಕೊಕ್ಕೆ!: ಗ್ಯಾರಂಟಿ ಫೇಲ್‌ ಮಾಡಲು ಷಡ್ಯಂತ್ರ ಎಂದ ಸಿಎಂ ಸಿದ್ದರಾಮಯ್ಯ

Chief Minister Siddaramaiah

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಈ ಯೋಜನೆಯನ್ನು ಸೋಲಿಸಲು ರಾಜಕೀಯ ನಿರ್ಧಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ವಿಶೇಷ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಈಗಾಗಲೆ ಒಂದು ಗ್ಯಾರಂಟಿ ಯೋಜನೆ ಜಾರಿಯಾಗಿದೆ. ಎರಡನೆಯದಾಗಿ, ಬಡತನ ರೇಖೆಗಿಂತ ಕೆಳಗಿರುವವರಿಗೆ ತಲಾ 10 ಕೆ.ಜಿ. ಆಹಾರಧಾನ್ಯವನ್ನು ಪ್ರತಿ ತಿಂಗಳೂ ಕೊಡುತ್ತೇವೆ ಎಂದು ಹೇಳಿದ್ದೆವು. ಅನ್ನಭಾಗ್ಯ ಯೋಜನೆಯನ್ನು ಜುಲೈ 1ರಿಂದ ಜಾರಿ ಮಾಡಲಾಗುತ್ತದೆ.

ಈಗ ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತಿದೆ. ಇದಕ್ಕೆ ಹೆಚ್ಚುವರಿ 5 ಕೆ.ಜಿ. ನೀಡಿ ಒಟ್ಟು 10 ಕೆ.ಜಿ. ನೀಡಬೇಕಾಗಿದೆ. ಜೂನ್‌ 8ನೇ ತಾರೀಖು ಸಂಪುಟ ಸಭೆ ನಂತರ ಈ ಮಾಹಿತಿ ನೀಡಲಾಗಿದೆ. ನಮಗೆ ಪ್ರತಿ ತಿಂಗಳು ಒಟ್ಟು 2.28 ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗುತ್ತದೆ.

ಈ ಬಗ್ಗೆ ಭಾರತೀಯ ಆಹಾರ ನಿಗಮದ ಜತೆಗೆ ಮಾತನಾಡಲಾಗಿದೆ. ನಮ್ಮ ಬಳಿ ಸ್ಟಾಕ್‌ ಇದೆ, ಕೊಡುತ್ತೇವೆ ಎಂದು ಎಫ್‌ಸಿಐನವರು ಹೇಳಿದ್ದಾರೆ. ಅದಾದ ನಂತರ ಎಫ್‌ಸಿಐ ಉಪ ಪ್ರಧಾನ ವ್ಯವಸ್ಥಾಪಕರನ್ನು ಕರೆದು ಮಾತನಾಡಲಾಗಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಅವರೂ ಮಾತನಾಡಿದ್ದರು. ನೀವು ಒಪ್ಪಿಕೊಂಡಮೇಲೆ ತಪ್ಪಿಸಬಾರದು ಎಂದು ಹೇಳಿದೆವು. ಇದಕ್ಕೆ ಅವರು ಒಪ್ಪಿದ್ದಾರೆ. ಎಫ್‌ಸಿಐನಲ್ಲಿ 7 ಲಕ್ಷ ಟನ್‌ ಅಕ್ಕಿ ಇದೆ ಎಂದು ಹೇಳಿದ್ದರು.

34 ರೂ. ಪ್ರತಿ ಕೆ.ಜಿ. ಜತೆಗೆ 2.60 ರೂ. ಸಾರಿಗೆ ವೆಚ್ಚ ಸೇರಿ 36.60 ರೂ.ಗೆ ಅಕ್ಕಿ ನೀಡುತ್ತೇವೆ ಎಂದು ಒಪ್ಪಿದ್ದರು. ಒಪ್ಪಿದ ನಂತರ 12ನೇ ತಾರೀಖು ನಮಗೆ ಎರಡು ಪತ್ರ ಬರೆದಿದ್ದರು. ಮೊದಲನೆಯದು, 2,೦8,425.750 ಮೆಟ್ರಿಕ್‌ ಟನ್‌ ಜುಲೈನಲ್ಲಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯವು 2,08,275 ಮೆಟ್ರಿಕ್‌ ಟನ್‌ಗೆ ಬೇಡಿಕೆ ಇಟ್ಟಿದ್ದು, 34 ರೂ. ಪ್ರತಿ ಕೆ.ಜಿ.ಯಂತೆ ನೀಡಲಾಗುತ್ತದೆ. ಇದನ್ನು ಷಣ್ಮುಗ ಪ್ರಿಯ ಎನ್ನುವವರು ಬರೆದಿದ್ದಾರೆ. ಅದೇ ರೀತಿ ಇನ್ನೊಂದು ಪತ್ರವನ್ನು 13,819 ಮೆಟ್ರಿಕ್‌ ಟನ್‌ ಆಹಾರ ಧಾನ್ಯ ನೀಡುವ ಕುರಿತು ಮತ್ತೊಂದು ಪತ್ರ ಬರೆದಿದ್ದರು.

ಇದಾದ ನಂತರ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡಿದೆ. ಜೂನ್‌ 13ರಂದು ಎಫ್‌ಸಿಐ ಪತ್ರ ಬರೆದಿದೆ. ಕೇಂದ್ರ ಗ್ರಾಹಕ ಸಚಿವಾಲಯ ಪತ್ರ ಬರೆದಿದೆ. ಗೋಧಿ ಹಾಗೂ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ (ಓಪನ್‌ ಮಾರ್ಕೆಟ್‌ ಸೇಳ್ಸ್‌ ಸ್ಕೀಂ) ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುವುದನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಈ ಯೋಜನೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಇ ಹರಾಜಿಗೆ ಮುಂದೆ ಎಫ್‌ಸಿಐ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ ಎಂದೂ ಹೇಳಿದ್ದಾರೆ.

ಅಂದರೆ ರಾಜಕೀಯ ನಿರ್ಧಾರ ಮಾಡಿದ್ದಾರೆ. ಮೊದಲಿಗೆ ಅಕ್ಕಿ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದರು. ಅದರ ಆಧಾರದಲ್ಲಿ ನಾವು ಜುಲೈ 1ರಿಂದ ಕೊಡಲು ಘೋಷಣೆ ಮಾಡಿದ್ದೆವು. ಕರ್ನಾಟಕದಲ್ಲಿ ಅಕ್ಕಿ ಸಿಗುವುದಿಲ್ಲವಾದ್ಧರಿಂದ ಎಫ್‌ಸಿಐ ಮೇಲೆ ಭರವಸೆ ಇಟ್ಟಿದ್ದೆವು. ಒಪ್ಪಿಕೊಂಡ ಒಂದೇ ದಿನದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಮಾಡಿ ಅಕ್ಕಿ ಕೊಡಬಾರದು ಎಂದು ತಿಳಿಸಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ, ಕಾಂಗ್ರೆಸ್‌ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದಕ್ಕಾಗಿ ನಾವು ಛತ್ತೀಸ್‌ಗಢ ಸರ್ಕಾರವನ್ನು ಸಂಪರ್ಕಿಸಿದ್ದೇವೆ, ತೆಲಂಗಾಣ ಸರ್ಕಾರವನ್ನು ಸಂಪರ್ಕ ಮಾಡಿದ್ದೇವೆ. ಆ ರಾಜ್ಯಗಳಿಂದ ಎಷ್ಟೆಷ್ಟೆ ಅಕ್ಕಿ ಸಿಗುತ್ತದೆ ಎಂದು ಕೇಳುತ್ತಿದ್ದೇವೆ. ಇವರೊಂದಿಗೆ ಮತ್ತೊಮೆ ಮಾತನಾಡುತ್ತೇವೆ. ಖಾಸಗಿಯವರೊಂದಿಗೆ ಟೆಂಡರ್‌ನಲ್ಲಿ ಭಾಗವಹಿಸಿ ಖರೀದಿಸಿದರೆ ದರ ಹೆಚ್ಚಳ ಆಗುತ್ತದೆ. ಮತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಇದ್ದೇ ಇರುತ್ತದೆ. ಆದರೆ ಈ ರೀತಿ ಮೋಸ ಮಾಡಿದೆ ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ. ಇದೆಲ್ಲ ಏನೇ ಇದ್ದರೂ ಮಾಸಿಕ 840 ಕೋಟಿ ರೂ. ವೆಚ್ಚವಾಗುವ ಈ ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ. ಆದರೆ ಇದರಲ್ಲಿ ಏಣಾದರೂ ವಿಳಂಬ ಆದರೆ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Free Bus ಅಭಿಮತ: ʼನಾಲ್ಕು ಗೋಡೆ ಒಳಗೆ ಇರೋಳಿಗೆ…ʼ ಅನ್ನುವ ಮಾತು ಮತ್ತು ಫ್ರೀ ಬಸ್ ಪಾಸ್

Exit mobile version