Site icon Vistara News

Congress Guarantee : ಎಲ್ಲರಿಗೂ ಫ್ರೀ ಫ್ರೀ ಫ್ರೀ… ಐದು ಗ್ಯಾರಂಟಿ ಯೋಜನೆಗಳ ಕಂಡೀಷನ್‌, ವೇಳಾಪಟ್ಟಿ ವಿವರ ಇಲ್ಲಿದೆ

congress guarantee schemes details and time table

#image_title

ಬೆಂಗಳೂರು: ಕಾಂಗ್ರೆಸ್‌ ಸರ್ಕಾರವು ತನ್ನ ಪ್ರಣಾಳಿಕೆಯ ಪ್ರಮುಖ ಘೋಷಣೆಯಾದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ವಿಧಾನಸೌಧದಲ್ಲಿ ವಿಶೇಷ ಸಂಪುಟ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಈ ಘೋಷಣೆಗಳನ್ನು ಮಾಡಿದರು. ಎಲ್ಲ ಯೋಜನೆಗಳನ್ನೂ ಜಾರಿ ಮಾಡಲಾಗುತ್ತದೆಯಾದರೂ ಎಲ್ಲವೂ ಈಗಿನಿಂದಲೇ ಜಾರಿ ಆಗುವುದಿಲ್ಲ. ಎಲ್ಲದಕ್ಕೂ ಕೆಲವು ನಿಬಂಧನೆಗಳು ಹಾಗೂ ಜಾರಿಯ ಸಮಯವನ್ನು ನಿಗದಿಪಡಿಸಲಾಗಿದೆ. ಅದರ ವಿವರ ಇಲ್ಲಿದೆ.

1. ಗೃಹಜ್ಯೋತಿ ಯೋಜನೆ: ಪ್ರತಿ ಮನೆಯು ಹಿಂದಿನ 12 ತಿಂಗಳಲ್ಲಿ ಎಷ್ಟು ವಿದ್ಯುತ್‌ ಬಳಸಿದೆ ಎಂಬ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅಷ್ಟೂ ತಿಂಗಳ ವಿದ್ಯುತ್‌ ಬಳಕೆಯ ಸರಾಸರಿ ಪಡೆದುಕೊಳ್ಳಲಾಗುತ್ತದೆ. ಅದಕ್ಕೆ ಶೇ.10 ಸೇರಿಸಸಲಾಗುತ್ತದೆ. ಅಂದರೆ ಉದಾಹರಣೆಗೆ ಯಾವುದಾದರೂ ಮನೆಯೆ ವಾರ್ಷಿಕ ಸರಾಸರಿ ವಿದ್ಯುತ್‌ ಬಳಕೆ ಮಾಸಿಕ 170 ಯೂನಿಟ್‌ ಆಗಿದ್ದರೆ ಅದಕ್ಕೆ ಶೇ.10 ಅಂದರೆ 17 ಯೂನಿಟ್‌ ಸೇರಿಸಲಾಗುತ್ತದೆ. ಅಲ್ಲಿಗೆ ಒಟ್ಟು ಸರಾಸರಿ ಯೂನಿಟ್‌ 187 ಆಗುತ್ತದೆ. ಆ ಮನೆಯವರು ಬಿಲ್‌ ಕಟ್ಟುವಂತಿಲ್ಲ. ಆದರೆ ಯಾವುದಾದರೂ ಒಂದು ತಿಂಗಳು ಆ ಮನೆಯ ವಿದ್ಯುತ್‌ ಬಿಲ್‌ ಇದ್ದಕ್ಕಿದ್ದಂತೆ 187 ಯೂನಿಟ್‌ ಮೀರಿದರೆ ಆ ತಿಂಗಳು ಬಿಲ್‌ ಕಟ್ಟಬೇಕಾಗುತ್ತದೆ. ಜುಲೈವರೆಗೆ ಬಾಕಿ ಉಳಿಸಿಕೊಂಡಿರುವವರು ಅವರೇ ಕಟ್ಟಬೇಕು ಎಂದರು. ಜುಲೈ ತಿಂಗಳ ಬಿಲ್‌ನಿಂದ ಈ ಯೋಜನೆ ಜಾರಿಯಾಗುತ್ತದೆ. ಅಂದರೆ ಆಗಸ್ಟ್‌ನಲ್ಲಿ ಬರುವ ಬಿಲ್‌ ಮೊತ್ತ 199 ಯೂನಿಟ್‌ ಒಳಗಿದ್ದರೆ ಅಂಥವರು ಪಾವತಿ ಮಾಡಬೇಕಾಗಿಲ್ಲ.

2. ಗೃಹಲಕ್ಷ್ಮೀ ಯೋಜನೆ: ಮನೆ ಯಜಮಾನಿಯ ಖಾತೆಗೆ ಮಾಸಿಕ 2 ಸಾವಿರ ರೂ. ಕೊಡಲಾಗುತ್ತದೆ. ಆದ್ಧರಿಂದ ಅದಕ್ಕೆ ತಕ್ಕಂತೆ ಆಧಾರ್‌ ಕಾರ್ಡ್‌, ಖಾತೆ ವಿವರ, ಅರ್ಜಿ ಕೊಡಬೇಕು. ಜೂನ್‌ 15ರಿಂದ ಜುಲೈ 15ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಅದಾದ ನಂತರ ಆಗಸ್ಟ್‌ 15ರೊಳಗೆ ಪ್ರಕ್ರಿಯೆ ಮಾಡಿ, ಆಗಸ್ಟ್‌ 15ರಂದು ಜಾರಿ ಮಾಡುತ್ತೇವೆ. ಯಾರು ಯಜಮಾನಿ ಎನ್ನುವ ಮಾಹಿತಿಯನ್ನು ಅವರೇ ಕೊಡಬೇಕು. 18 ವರ್ಷ ತುಂಬಿರುವ ಯಜಮಾನಿಗೆ ನೀಡುತ್ತೇವೆ. ಇದು ಎಪಿಎಲ್‌ ಹಾಗೂ ಬಿಪಿಎಲ್‌ ಇಬ್ಬರಿಗೂ ಸಿಗುತ್ತದೆ. ಅತ್ತೆ-ಸೊಸೆ ಯಾರು ಬೇಕಾದರೂ ಇರಲಿ, ಮನೆಯ ಯಜಮಾನಿ ಎಂದು ಯಾರನ್ನು ಹೇಳುತ್ತಾರೆಯೋ ಅವರಿಗೆ ನೀಡಲಾಗುತ್ತದೆ ಎಂದಯ ಸಿದ್ದರಾಮಯ್ಯ ಹೇಳಿದರು.

ಈಗಾಗಲೆ ಅಂಗವಿಕಲ ಪಿಂಚಣಿ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿ ಬೇರೆ ಬೇರೆ ಸಾಮಾಜಿಕ ಪಿಂಚಣಿ ಪಡೆಯುತ್ತಿರುವವರಿಗೆ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈ ರೀತಿಯ ಯಾವುದೇ ನಿಬಂಧನೆ ಇಲ್ಲ. ಈಗಾಗಲೆ ಯಾವುದೇ ಸಾಮಾಜಿಕ ಪಿಂಚಣಿ ಪಡೆಯುತ್ತಿರುವವರಿಗೂ ಮಾಸಿಕ 2 ಸಾವಿರ ರೂ. ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

3. ಅನ್ನಭಾಗ್ಯ ಯೋಜನೆ: ಈ ಹಿಂದೆ ಕಾಂಗ್ರೆಸ್‌ ಸರ್ಕಾರ 7 ಕೆಜಿ ಆಹಾರ ಧಾನ್ಯ ನೀಡುತ್ತಿತ್ತು. ಈಗ 5 ಕೆಜಿ ನೀಡುತ್ತಿದ್ದಾರೆ. ನಾವು 10 ಕೆಜಿ ನೀಡುತ್ತೇವೆ ಎಂದು ಹೇಳಿದ್ದೆವು. ಈಗ ಆಹಾರ ಧಾನ್ಯ ಸಂಗ್ರಹ ಇಲ್ಲದೇ ಇರುವುದರಿಂದ, ಜುಲೈ 1ರಿಂದ ಎಲ್ಲ ಬಿಪಿಎಲ್‌ ಕಾರ್ಡ್‌ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿಯೊಬ್ಬರಿಗೆ 10 ಕೆಜಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು. ಜುಲೈ 1ರಿಂದ ಈ ಯೋಜನೆ ಜಾರಿಯಾಗುತ್ತದೆ. ಈಗ ಎಲ್ಲರಿಗೂ 10 ಕೆಜಿ ಅಕ್ಕಿ ನೀಡುವಷ್ಟು ದಾಸ್ತಾನು ಇಲ್ಲ. ಹಾಗಾಗಿ ಜುಲೈ 1 ರಿಂದ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಹೇಳಿದರು.

4. ಶಕ್ತಿ ಯೋಜನೆ: ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಸೇವೆಯನ್ನು ಜೂನ್‌ 11ನೇ ತಾರೀಖು ಜಾರಿ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ವಿದ್ಯಾರ್ಥಿನಿಯರೂ ಸೇರಿ ಎಲ್ಲ ಮಹಿಳೆಯರಿಗೂ ಇದು ಅನ್ವಯ ಆಗಲಿದೆ. ಕರ್ನಾಟಕ ರಾಜ್ಯದ ಒಳಗೆ ಎಲ್ಲಿಗಾದರೂ ಪ್ರಯಾಣ ಮಾಡಬಹುದು. ಎಸಿ ಬಸ್‌ ಹೊರತುಪಡಿಸಿ, ಎಕ್ಸ್‌ಪ್ರೆಸ್‌, ರಾಜಹಂಸ ಸೇರಿ ಯಾವುದೇ ಬಸ್‌ನಲ್ಲಿಯೂ ಪ್ರಯಾಣ ಮಾಡಬಹುದು. ಎಸಿ ಹಾಗೂ ನಾನ್‌ ಎಸಿ ಬಸ್‌ಗಳಿಗೆ ಇರುವುದಿಲ್ಲ ಎಂದರು. ಆದರೆ ಅಧಿಕಾರಿಗಳು, ರಾಜಹಂಸ ಬಸ್‌ಗೆ ಇಲ್ಲ ಎಂದು ಹೇಳಿದರು. ಹೌದ ಎಂದ ಸಿದ್ದರಾಮಯ್ಯ, ಎಕ್ಸಿಕ್ಯೂಟಿವ್‌ ಬಸ್‌ಗಳಿಗೆ ಇರುವುದಿಲ್ಲ ಎಂದರು. ಜೂನ್‌ 11ರಿಂದ ಜಾರಿ ಆಗುತ್ತದೆ. ಕೆಎಸ್‌ಆರ್‌ಟಿಸಿಯ ಬಸ್‌ಗಳಲ್ಲಿ ಶೇ.50 ಸೀಟುಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಶೇ.50ಕ್ಕಿಂತ ಕಡಿಮೆ ಮಹಿಳೆಯರಿದ್ದರೆ ಉಳಿದ ಸೀಟುಗಳಲ್ಲಿಯೂ ಗಂಡಸರನ್ನು ಹತ್ತಿಸಿಕೊಂಡು ಹೋಗುತ್ತಾರೆ ಎಂದರು ಹೇಳಿದರು.

5. ಯುವ ನಿಧಿ ಕುರಿತು ಹೇಳಿದ ಸಿದ್ದರಾಮಯ್ಯ, ತಾಂತ್ರಿಕ ಹಾಗೂ ತಾಂತ್ರಿಕೇತರ ಎಲ್ಲ ವಿದ್ಯಾರ್ಥಿಗಳಿಗೆ, ಅವರು ನೋಂದಣಿ ಮಾಡಿಕೊಂಡ ಪದವಿ ವಿದ್ಯಾರ್ಥಿಗಳಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ ಎಂದರು. 24 ತಿಂಗಳವರೆಗೆ ಈ ನಿಧಿ ನೀಡಲಾಗುತ್ತದೆ. ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ ಪದವೀಧರ ಹಾಗೂ ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬೇಕು. ಅವರಿಗೆ ಸರ್ಕಾರಿ, ಖಾಸಗಿ ಸೇರಿ ಯಾವುದೇ ರೀತಿಯ ಉದ್ಯೋಗ ಲಭಿಸುವವರೆಗೂ, ಗರಿಷ್ಠ 24 ತಿಂಗಳವರೆಗೆ ನೀಡಲಾಗುತ್ತದೆ. ಯಾವಾಗಿನಿಂದ ಅರ್ಜಿ ಸಲ್ಲಿಸುತ್ತಾರೆಯೋ ಆಗಿನಿಂದ ಜಾರಿ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version