ಬೆಂಗಳೂರು: ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಸಲುವಾಗಿ ಈ ಬಾರಿಯ ಬಜೆಟ್ ಕೊರತೆಗೆ ಇಳಿದಿದೆ. ಈ ಮಾತನ್ನು, 14ನೇ ಬಾರಿಗೆ ದಾಖಲೆಯ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ಸ್ವತಃ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ ಬೇಕಾಗಿರುವ 35,450 ಕೋಟಿ ರೂ. ಹೊಂದಿಸಲು ತೆರಿಗೆ, ನೋಂದಣಿ, ಅಬಕಾರಿ ಇಲಾಖೆಗಳಿಗೆ ಗುರಿ ಹೆಚ್ಚಿಸಿದ್ದು, ಹೆಚ್ಚು ಸಾಲ ಮಾಡಿದ್ದು, ಅದರ ಹೊರೆ ಪರೋಕ್ಷವಾಗಿ ಜನರಿಗೇ ಬೀಳುತ್ತದೆ ಎನ್ನುವುದು ಸಿದ್ದರಾಮಯ್ಯ ಬಜೆಟ್‌ನ ಸತ್ಯಾಂಶ.
ಕರ್ನಾಟಕ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು 13 ಬಾರಿ ಬಜೆಟ್ ಮಂಡನೆ ಮಾಡಿದ್ದರು. ಸಿದ್ದರಾಮಯ್ಯ ಸಹ 2018-19ರಲ್ಲೇ 13ನೇ ಬಜೆಟ್ ಮಂಡಿಸಿದ್ದರು. ಇದೀಗ 14ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಬರೆದಿದ್ದಾರೆ. ಸಿಎಂ ಆಗಿ ಈ ಅವಧಿಯನ್ನು ಪೂರ್ಣಗೊಳಿಸಿದರೆ 19 ಬಾರಿ ಬಜೆಟ್ ಮಂಡಿಸಿದಂತಾಗುತ್ತದೆ.
ಎಲ್ಲರಿಗೂ ಇದ್ದ ನಿರೀಕ್ಷೆಯಂತೆಯೇ ಈ ಬಾರಿಯ ಬಜೆಟ್ ಮಂಡನೆಯ ಕೇಂದ್ರವೇ ಐದು ಗ್ಯಾರಂಟಿ ಯೋಜನೆಗಳು. ಇದನ್ನು ಸ್ವತಃ ಸಿದ್ದರಾಮಯ್ಯ ಸಹ ಒಪ್ಪಿಕೊಂಡರು. ಅದಕ್ಕಾಗಿಯೇ ಈ ವರ್ಷದ ಬಜೆಟ್ ಪುಸ್ತಕದ ಮೇಲೆಯೇ ಐದೂ ಗ್ಯಾರಂಟಿಗಳ ಚಿತ್ರವನ್ನು ಮುದ್ರಣ ಮಾಡಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಈಗಾಗಲೆ ಮೂರು ತಿಂಗಳು ಕಳೆದಿದೆ. ಶಕ್ತಿ ಯೋಜನೆ ಈಗಾಗಲೆ ಜೂನ್‌ನಿಂದ ಆರಂಭವಾಗಿದೆ. ಇನ್ನು ಮೂರು ಯೋಜನೆಗಳು ಆರಂಭವಾಗಬೇಕಿವೆ. ಅಂದರೆ ಒಟ್ಟರೆ 8-9 ತಿಂಗಳಿಗೆ ಐದು ಗ್ಯಾರಂಟಿಗಳ ಹಣ ಹೊಂದಿಸಬೇಕಾಗಿದೆ. ಈ ವರ್ಷ ಐದು ಗ್ಯಾರಂಟಿಗಳ ಜಾರಿಗೆ ಒಟ್ಟು 35,400 ಕೋಟಿ ರೂ. ಬೇಕಾಗಿದೆ. ಇದನ್ನು ಹೊಂದಿಸಲು ಸಿದ್ದರಾಮಯ್ಯ ಸರ್ಕಸ್ ಮಾಡಿದ್ದಾರೆ.
ಐದು ಗ್ಯಾರಂಟಿಗಳ ಜಾರಿಗೆ 35,450 ಕೋಟಿ ರೂ. ಬೇಕಾಗಿದ್ದು, ಅದಕ್ಕಾಗಿ ತೆರಿಗೆ ಗುರಿಗಳನ್ನು ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ತೆರಿಗೆಯಲ್ಲಿ 4,000 ಕೋಟಿ ರೂ. ಹೆಚ್ಚಿಸಿ1,01,000 ಕೋಟಿ ರೂ. ಗುರಿ ನೀಡಲಾಗಿದೆ. ಅಬಕಾರಿ ಇಲಾಖೆಗೆ 1 ಸಾವಿರ ಕೋಟಿ ರೂ. ಹೆಚ್ಚಿಸಿ 36,000 ಕೋಟಿ ರೂ. ಗುರಿ ನೀಡಲಾಗಿದೆ. ಮೋಟಾರು ವಾಹನ ತೆರಿಗೆಯಿಂದ 1 ಸಾವಿರ ಕೋಟಿ ರೂ. ಹೆಚ್ಚಿಸಿ 11,500 ಕೋಟಿ ರೂ. ಗುರಿ ನೀಡಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 6 ಸಾವಿರ ಕೋಟಿ ರೂ. ಹೆಚ್ಚಿಸಿ 25,000 ಕೋಟಿ ರೂ. ಗುರಿ ನೀಡಲಾಗಿದೆ. ಹೆಚ್ಚುವರಿಯಾಗಿ 8 ಸಾವಿರ ಕೋಟಿ ರೂ. ಸಾಲ ಮಾಡಲು ನಿರ್ಧಾರ ಮಾಡಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆದ್ಯತೆಗಳಾಗಿ ವಿಂಗಡಣೆ ಮಾಡಿರುವುದರಿಂದ ಸುಮಾರು 7 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಅಲ್ಲಿಂದಲೂ ಎತ್ತಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲದರ ನಂತರ 35,450 ಕೋಟಿ ರೂ. ಸಂಗ್ರಹಿಸಿ ಐದು ಗ್ಯಾರಂಟಿಗಳಿಗೆ ಹೊಂದಿಸುವ ಗುರಿ ಹೊಂದಿದ್ದಾರೆ.
“ಸಾಮಾನ್ಯ ಜನರ ಮೇಲೆ ನಾನು ತೆರಿಗೆ ಹಾಕಿಲ್ಲ. ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿಲ್ಲ. ಬಡವರಿಗೆ ಹೊರೆ ಹೊರಿಸಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೆಚ್ಚುವರಿ ಅಬಕಾರಿ ತೆರಿಗೆಯಿಂದ, ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ, ಹೆಚ್ಚಿನ ಮೋಟಾರು ವಾಹನ ತೆರಿಗೆ ಸಂಗ್ರಹದಿಂದ ಹೊರೆಯಾಗುವುದೂ ಜನಸಾಮಾನ್ಯರಿಗೇ ಅಲ್ಲವೇ? ಐದು ಗ್ಯಾರಂಟಿಗಳಲ್ಲಿ ಮುಖ್ಯವಾಗಿ ಗೃಹಜ್ಯೋತಿ, ಯುವ ನಿಧಿ ಯೋಜನೆಗಳಿಗೆ ಸಾಕಷ್ಟು ನಿಬಂಧನೆಗಳನ್ನು ವಿಧಿಸುವ ಮೂಲಕ ಹಣ ಉಳಿಸುವ ಬುದ್ಧಿವಂತಿಕೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅಷ್ಟರ ನಂತರವೂ ಬಜೆಟ್ ಮಾಡುವುದರಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ.
ಹಣಕಾಸು ಹೊಣೆಗಾರಿಕೆ ಕಾಯ್ದೆಯ ಪ್ರಕಾರ ವಿತ್ತೀ ಕೊರತೆಯು ಶೇ.3ರೊಳಗೆ ಇರಬೇಕು, ಒಟ್ಟು ಸಾಲು ರಾಜ್ಯದ ಜಿಡಿಪಿಯ ಶೇ.25ರೊಳಗಿರಬೇಕು, ಬಜೆಟ್ ಉಳಿಕೆಯಾಗಿರಬೇಕು ಎಂದು ಮೂರು ಮಾನದಂಡಗಳನ್ನು ನೀಡಲಾಗಿದೆ. ಇದರಲ್ಲಿ ರಾಜ್ಯದ ವಿತ್ತೀಯ ಕೊರತೆ ಈಗ ಶೇ.2.6 ಇದೆ ಹಾಗೂ ಸಾಲವು ಜಿಡಿಪಿಯ ಶೇ.22.3 ಇದೆ. ಹಾಗಾಗಿ ಎರಡು ಮಾನದಂಡಗಳಲ್ಲಿ ಕರ್ನಾಟಕ ಸೇಫ್ ಜೋನ್‌ನಲ್ಲಿದೆ. ಆದರೆ ರಾಜಸ್ವ ಹೆಚ್ಚುವರಿಯನ್ನು ಮಾಡಲು ಆಗಿಲ್ಲ. ಕಳೆದ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದಾಗ 405 ಕೋಟಿ ರೂ. ಉಳಿಕೆ ಬಜೆಟ್ ಆಗಿತ್ತು. ಆದರೆ ಈ ಬಾರಿ 12,523 ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಲಾಗಿರುವುದೇ, ಗ್ಯಾರಂಟಿಗಳ ಭಾರವನ್ನು ತೋರಿಸುತ್ತಿದೆ. ” ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾಗಿರುವುದರಿಂದ ಈ ಕೊರತೆ ಆಗಿದೆ” ಎಂದು ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಸ್ವತಃ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ 2022-23 ರಲ್ಲಿ 14 ಸಾವಿರ ಕೋಟಿ ರೂ. ಕೊರತೆ ಬಜೆಟ್ ಮಂಡಿಸಿತ್ತು. ನಂತರ ಪರಿಷ್ಕೃತ ಅಂದಾಜಿನಲ್ಲಿ 5,999 ಕೋಟಿ ರೂ.ಗೆ ಇಳಿಸಿತ್ತು. ಆದರೆ ನಮ್ಮದು 12,523 ಕೋಟಿ ರೂ. ಕೊರತೆ ಬಜೆಟ್ ಮಂಡನೆ ಆಗಿದೆ. ಬಿಜೆಪಿಗಿಂತ ಎರಡು ಸಾವಿರ ಕೋಟಿ ರೂ. ಕಡಿಮೆ ಕೊರತೆ ಬಜೆಟ್ ಇದು ಎಂದು ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡರು. ಆದರೆ 2023-24ರಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ 402 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದ್ದರು ಎಂಬುದನ್ನು ಸಿಎಂ ಸಿದ್ದರಾಮಯ್ಯ ಹೇಳಲಿಲ್ಲ.
ಸಣ್ಣಪುಟ್ಟ ಘೋಷಣೆಗಳು
ರಾಹುಕಾಲ ಕಳೆದ ನಂತರ 12.09 ನಿಮಿಷಕ್ಕೆ ಬಜೆಟ್ ಓದಲು ಆರಂಭಿಸಿದ ಸಿದ್ದರಾಮಯ್ಯ 2 ಗಂಟೆ 54 ನಿಮಿಷ, ಅಂದರೆ ಬಹುತೇಕ 3 ಗಂಟೆ ಬಜೆಟ್ ಓದಿದರು. 136 ಪುಟಗಳಲ್ಲಿ 372 ಪಾಯಿಂಟ್‌ಗಳನ್ನು ಓದಿದ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಹಣಕಾಸು ವಿನಿಯೋಗದಂತಹ ದೊಡ್ಡ ಯೋಜನೆಗಳು ಬಹುತೇಕ ಇಲ್ಲ. ಇಂದಿರಾ ಕ್ಯಾಂಟೀನ್, ವಾರಕ್ಕೆರಡು ಬಾರಿ ಮೊಟ್ಟೆಯಂತಹ ಕೆಲವೇ ಯೋಜನೆಗಳು ಮಾತ್ರ ನೂರು ಕೋಟಿ ರೂ. ದಾಟಿವೆ. ಹೆಚ್ಚಿನ ಅನುದಾನಗಳನ್ನು ಒಳಗೊಂಡ ಯೋಜನೆಗಳೂ ಇರುತ್ತಿದ್ದ ಜಲಸಂಪನ್ಮೂಲ ಇಲಾಖೆಯಲ್ಲೂ ಕೇವಲ “ಆದ್ಯತೆ ಮೇಲೆʼ ಪರಿಗಣಿಸಲಾಗುವುದು ಎನ್ನುವ ಮಾತುಗಳಿವೆ. ಹಿಂದಿನ ಸರ್ಕಾರದ ತಪ್ಪು ಲೆಕ್ಕದಿಂದಾಗಿ ಆರ್ಥಿಕತೆ ಹಳಿತಪ್ಪಿದೆ ಎನ್ನುವ ಆರೋಪ ಹೊರಿಸಿ ಮುಂದೆ ನಡೆದಿದ್ದಾರೆ. ಎನ್‌ಇಪಿ ಹಿಂಪಡೆಯುವಿಕೆ, ಕೃಷಿ ಕಾಯ್ದೆಗಳ ಹಿಂಪಡೆಯುವಿಕೆಯಂತಹ ಘೋಷಣೆಗಳು ಸುದ್ದಿಯಾಗಬಲ್ಲವೇ ವಿನಃ ಅವಕ್ಕೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ. 50-100 ಕೋಟಿ ರೂ. ಮೊತ್ತದ ಹತ್ತಾರು ಘೋಷಣೆಗಳಿದ್ದು, ಅವುಗಳೆಲ್ಲವನ್ನೂ ಸೇರಿಸಿದರೂ ಬಜೆಟ್ ಹೋಲಿಕೆಯಲ್ಲಿ ಅದು ಪುಡಿಗಾಸು. ಇಂತಹದ್ದೇ ಅನೇಕ ಘೋಷಣೆಗಳ ಮೂಲಕ ಬಜೆಟ್ಟನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: Karnataka Budget 2023 : ನೀವು Miss ಮಾಡಲೇಬಾರದ ಸಿದ್ದರಾಮಯ್ಯ ಬಜೆಟ್‌ನ TOP 60 ಮುಖ್ಯಾಂಶಗಳು
ರಾಜಕೀಯಕ್ಕೆ ಸೀಮಿತ
ಬಜೆಟ್‌ನ ಬಹುಭಾಗದಲ್ಲಿ ರಾಜಕೀಯ ಹೇಳಿಕೆಗಳನ್ನು ಸಿದ್ದರಾಮಯ್ಯ ಯಥೇಚ್ಚವಾಗಿ ಸೇರಿಸಿದ್ದಾರೆ. ರಾಜ್ಯದ ಈಗಿನ ಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ, ಹಿಂದಿನ ರಾಜ್ಯ ಸರ್ಕಾರದ ದುರಾಡಳಿತವೇ ಕಾರಣ ಎನ್ನುವುದನ್ನು ಪದೇಪದೆ ಒತ್ತಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಆದರೆ ಇದನ್ನು ಹೊರಗೆ ಹೇಳುವಂತಿಲ್ಲ. ಅದಕ್ಕಾಗಿ ಗಮನವನ್ನು ಬೇರೆಡೆಗೆ ಸೆಳೆಯಲು ಅನಿವಾರ್ಯವಾಗಿ ಕೇಂದ್ರ ಸರ್ಕಾರದತ್ತ ಬಾಣವನ್ನು ತಿರುಗಿಸಿದ್ದಾರೆ.
ಇಷ್ಟೆಲ್ಲ ನಂತರವೂ ಸಿದ್ದರಾಮಯ್ಯ ಸಾಲದ ಹೊರೆಯನ್ನು, ಶೇ.25ರ ಗಡಿಯನ್ನು ಮೀರಿ ದಾಟಲು ಹೋಗಗೊಟ್ಟಿಲ್ಲ. ಹಾಸಿಗೆ ಇದ್ದಷ್ಟೇ ಕಾಲುಚಾಚು ಎನ್ನುವಂತೆ, ಇರುವುದಕ್ಕೇ ಅನುಗುಣವಾಗಿ ಬಜೆಟ್ ಹೊಂದಿಸಲು ಪ್ರಯತ್ನ ಮಾಡಿದ್ದಾರೆ. ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚು ಮಾಡುವುದು ಸ್ವಾಗತಾರ್ಹವೆ. ತೆರಿಗೆ ಸಂಗ್ರಹದಲ್ಲಿ ಸೋರಿಕೆಹಾಗೂ ಭ್ರಷ್ಟಾಚಾರ ತಡೆಗಟ್ಟಿ ಸರಿಯಾಗಿ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೆ ಹೇಳಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅದರಂತೆ ಅಧೀಕಾರಿಗಳನ್ನು ದುಡಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಸಿದ್ಧಹಸ್ತರೂ ಹೌದು. ಆದರೆ ವಿಧಾನಸಭೆ ಕ್ಷೇತ್ರಗಳಿಗೆ ದೊಡ್ಡ ಅನುದಾನಗಳಿಲ್ಲದೆ ಶಾಸಕರನ್ನು ಸಮಾಧಾನ ಮಾಡುವುದು ಹೇಗೆ? ಇಲಾಕೆಗಳಿಗೆ ಹೆಚ್ಚಿನ ಹಣವಿಲ್ಲದೆ ಸಚಿವರನ್ನು ಸಮಾಧಾನ ಮಾಡುವುದು ಹೇಗೆ? ಸರ್ಕಾರದ ಬೃಹತ್ ಕಾಮಗಾರಿಗಳನ್ನೇ ನೆಚ್ಚಿಕೊಂಡಿರುವ ಗುತ್ತಿಗೆದಾರರು, ಮಧ್ಯವರ್ತಿಗಳಂಥವರು ಇಡೀ ವ್ಯವಸ್ಥೆಯನ್ನು ಪರೋಕ್ಷವಾಗಿ ನಡೆಸುತ್ತಿರುತ್ತಾರೆ. ಅಂಥವರಿಗೆ ಪೂರೈಸಲು ಕೈ ಕಟ್ಟಿಹಾಕಿದಂತಹ ಸ್ಥಿತಿ ಇದೆ. 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಈ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಪ್ರಶ್ನೆ.