Site icon Vistara News

Congress Guarantee : ಜುಲೈ ತಿಂಗಳಲ್ಲಿ ಅಕ್ಕಿ ಸಿಗಲ್ಲ; ಗೃಹ ಲಕ್ಷ್ಮಿ, ಗೃಹಜ್ಯೋತಿಯೂ ವಿಳಂಬ

Congress guarantee

#image_title

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯಿಂದ ಘೋಷಿಸಿರುವ ಪಂಚ ಯೋಜನೆಗಳ (Congress Guarantee) ಪೈಕಿ ಸದ್ಯಕ್ಕೆ ಜಾರಿಯಾಗಿರುವುದು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಸ್ಕೀಂ (Shakti scheme) ಒಂದೇ. ಉಳಿದ ಯೋಜನೆಗಳ ಜಾರಿಗೆ ಹಲವು ಎಡರುತೊಡರುಗಳು ಎದುರಾಗಿದ್ದು, ಇವೆಲ್ಲವೂ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಜುಲೈ ತಿಂಗಳಿನಿಂದಲೇ ನೀಡಲಾಗುತ್ತದೆ ಎಂದು ಘೋಷಿಸಿರುವ ಅನ್ನ ಭಾಗ್ಯವೂ (Anna Bhagya) ಜಾರಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಜುಲೈ ತಿಂಗಳಲ್ಲಿ ಹೆಚ್ಚುವರಿ ಅಕ್ಕಿ ಸಿಗದು

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟುಂಬಗಳ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಪ್ರಕಟಿಸಿತ್ತು. ಈಗಾಗಲೇ ಐದು ಕೆಜಿಯನ್ನು ನೀಡಲಾಗುತ್ತಿತ್ತು. ಹೆಚ್ಚುವರಿಯಾಗಿ ನೀಡಬೇಕಾಗಿರುವ ಐದು ಕೆಜಿಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮದಿಂದ ಪಡೆದು ಪಡಿತರ ವ್ಯವಸ್ಥೆಯ ಮೂಲಕ ಹಂಚುವುದು ಅದರ ಉದ್ದೇಶವಾಗಿತ್ತು. ಆದರೆ, ಕೇಂದ್ರ ಸರಕಾರದ ಬದಲಾದ ನೀತಿಯಿಂದಾಗಿ ಎಫ್‌ಸಿಐ ಮೂಲಕ ಅಕ್ಕಿ ಸಿಗುವುದಿಲ್ಲ.

ಇದೀಗ ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಈ ರಾಜಕೀಯದ ಜತೆಗೇ ಅನ್ಯ ರಾಜ್ಯಗಳಿಂದ ಖರೀದಿಯೂ ಸೇರಿ ಬೇರೆ ದಾರಿಗಳನ್ನು ಹುಡುಕುತ್ತಿದೆ. ಆದರೆ, ಇದೆಲ್ಲವೂ ಅಷ್ಟು ಸರಳವಾಗಿ ನಡೆಯುವ ಸಂಗತಿಗಳಲ್ಲ. ಹಾಗಾಗಿ ಅದು ಘೋಷಣೆ ಮಾಡಿದಂತೆ ಜುಲೈ ತಿಂಗಳಿನಿಂದಲೇ ಅದನ್ನು ಪಡಿತರ ವ್ಯವಸ್ಥೆಯ ಮೂಲಕ ಹಂಚುವುದು ಸಾಧ್ಯವಿಲ್ಲ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೂಡಾ ಹೆಚ್ಚುವರಿ ಅಕ್ಕಿ ವಿತರಣೆ ಜುಲೈ ತಿಂಗಳಿನಿಂದ ಆರಂಭವಾಗುವ ಸಾಧ್ಯತೆಗಳು ಇಲ್ಲ ಎಂದೇ ಹೇಳಿದ್ದಾರೆ.

ಆನ್‌ಲೈನ್‌ ಅರ್ಜಿ ಹಿನ್ನೆಲೆಯಲ್ಲಿ ವಿಳಂಬ

ಇದೇ ವೇಳೆ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್‌ 15ರಿಂದ ಆರಂಭವಾಗಬೇಕಾಗಿತ್ತು. ಆದರೆ, ತಾಂತ್ರಿಕ ದೋಷದ ಆತಂಕ, ಇನ್ನೂ ಅಂತಿಮವಾಗದ ತಂತ್ರಾಂಶ ಮತ್ತಿತರ ಕಾರಣದಿಂದಾಗಿ ವಿಳಂಬವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಹೇಳುವಂತೆ ಅರ್ಜಿ ಸ್ವೀಕಾರ ಆರಂಭ ಇನ್ನೂ ನಾಲ್ಕೈದು ದಿನ ತಡವಾಗಲಿದೆ.

ಗೃಹ ಜ್ಯೋತಿ ಅರ್ಜಿ ಸ್ವೀಕಾರಕ್ಕೂ ತಾಂತ್ರಿಕ ಅಡೆತಡೆಗಳು ಇರುವುದರಿಂದ ಅದನ್ನೂ ಸದ್ಯಕ್ಕೆ ತಡೆ ಹಿಡಿಯಲಾಗಿದೆ.

ಆನ್ ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕೆ ಪ್ರತ್ಯೇಕ ಆ್ಯಪ್ ರೆಡಿ ಮಾಡಬೇಕಾಗಿದೆ. ಇದಕ್ಕೆ ಸಮಯ ಬೇಕು ಎಂದು ಇ ಆಡಳಿತ ಹೇಳಿದೆ. ಹೀಗಾಗಿ ಅದೆಲ್ಲವೂ ವಿಳಂಬ ಗತಿಯಲ್ಲೇ ಇರಲಿದೆ.

ಗ್ಯಾರಂಟಿಗೆ ಎದುರಾಗುತ್ತಾ ಸೈಬರ್ ಕಳ್ಳರ ಕಂಟಕ?

ಈ ನಡುವೆ, ಗೃಹಲಕ್ಷ್ಮೀ, ಗೃಹ ಜ್ಯೋತಿ ಯೋಜನೆ ಅರ್ಜಿ ಬಿಡುಗಡೆ ಮತ್ತು ಸ್ವೀಕಾರಕ್ಕೆ ತಡವಾಗುತ್ತಿರುವ ನಡುವೆಯೇ ಸೈಬರ್‌ ಕಳ್ಳರ ಆತಂಕವೂ ಎದುರಾಗಿದೆ. ಏಕಾಏಕಿ ಅರ್ಜಿಗೆ ಅನುಮತಿ ಕೊಟ್ಟರೆ ವೆಬ್ ಸೈಟ್ ಗೂ ಸಮಸ್ಯೆ ಸರ್ವರ್ ಡೌನ್ ಜೊತೆ ಸೈಬರ್ ಅಪರಾಧ ಹೆಚ್ಚಳಕ್ಕೂ ದಾರಿ ಆಗಬಹುದು ಎಂದು ಸೈಬರ್ ಎಕ್ಸ್ ಪರ್ಟ್ ಡಾ. ಶುಭಮಂಗಳ ಹೇಳಿದ್ದಾರೆ.

ಸರ್ಕಾರ ಆನ್ ಲೈನ್ ಅರ್ಜಿ ಆಹ್ವಾನಕ್ಕೂ ಮೊದಲು ಅದರ ಬಗ್ಗೆ ಪರಿಶೀಲಿಸಬೇಕಿತ್ತು. 7 ಕೋಟಿ ಜನರು ಒಟ್ಟಿಗೆ ಅರ್ಜಿ ಹಾಕಲು ಮುಂದಾದ್ರೆ ಹಲವು ಸಮಸ್ಯೆಯಾಗುತ್ತದೆ. ಟೆಕ್ನಿಕಲ್ ಆಗಿ ಒಂದಷ್ಟು ತಯಾರಿ ಮಾಡಿಕೊಳ್ಳಬೇಕು. ಸೇವಾಸಿಂಧು ಪೋರ್ಟಲ್ ಒಂದಕ್ಕೆ ಹೊರೆಯಾಗುತ್ತದೆ. ಆಗ ಜನರ ವೈಯಕ್ತಿಕ ದಾಖಲೆ ಸೋರಿಕೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Karnataka politics : ಹೊರ ರಾಜ್ಯದಿಂದ ಅಕ್ಕಿ ಖರೀದಿ ಕಮಿಷನ್‌ ಹೊಡೆಯೋ ಹುನ್ನಾರ ಎಂದ ವಿಜಯೇಂದ್ರ

Exit mobile version