ಬೆಂಗಳೂರು: ಚುನಾವಣೆಗೆ ಮುನ್ನ ಘೋಷಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಮಂಗಳವಾರ ದಿನವಿಡೀ ಮಾರಥಾನ್ ಸಭೆಗಳನ್ನು ನಡೆಸಿದರು. ಗೃಹಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳನ್ನು ಚುನಾವಣೆಗೆ ಮುನ್ನ ಘೋಷಿಸಲಾಗಿತ್ತು.
ಈ ಕುರಿತು ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ವರದಿಯೊಂದನ್ನು ಸಿದ್ಧಪಡಿಸುವಂತೆ ತಿಳಿಸಿದರು.
ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಯೋಜನೆಗಳನ್ನು ಯಾವ ರೀತಿ ಜಾರಿಗೊಳಿಸಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಬುಧವಾರ ಎಲ್ಲ ಸಚಿವರೊಂದಿಗೆ ಸಮಾಲೋಚನೆ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ. ಬಳಿಕ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಿದ್ದಾರೆ.
ಯಾವ್ಯಾವ ನಿಬಂಧನೆಗಳನ್ನು ವಿಧಿಸಲಾಗುತ್ತದೆ ಹಾಗೂ ಅಧಿಕೃತವಾಗಿ ಯಾವಾಗಿನಿಂದ ಜಾರಿ ಎನ್ನುವುದು ಅಂದೇ ತಿಳಿಯಲಿದೆ. ಈಗಾಗಲೆ ರಾಜ್ಯದ ವಿವಿಧೆಡೆ ವಿದ್ಯುತ್ ಬಿಲ್ ಪಾವತಿ, ಕುರಿತಂತೆ ಹಾಗೂ ಬಸ್ ಟೆಕೆಟ್ ಖರೀದಿ ಕುರಿತಂತೆ ಅಧಿಕಾರಿಗಳ ಜತೆಗೆ ಸಾರ್ವಜನಿಕರು ಜಗಳಕ್ಕಿಳಿದಿದ್ದಾರೆ. ಮೊದಲ ಸಂಪುಟದಲ್ಲೇ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಹೇಳಿತ್ತಾದರೂ ತಾತ್ವಿಕ ಒಪ್ಪಿಗೆ ಮಾತ್ರ ನೀಡಿತ್ತು. ಹೀಗಾಗಿ ಸರ್ಕಾರದ ಮೇಲೆ ವಿಪರೀತ ಒತ್ತಡವಿದ್ದು, ಹಣಕಾಸು ಹೊಂದಿಸಿಕೊಂಡು ಯಾವ ರೀತಿ ಜಾರಿ ಮಾಡುತ್ತದೆ ಎಂಬ ಕುತೂಹಲವಿದೆ.
ಮೊದಲ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಎಲ್ಲ ಐದು ಯೋಜನೆಗಳ ಜಾರಿಗೆ ವಾರ್ಷಿಕ 50 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಿದ್ದರು.
ಇದನ್ನೂ ಓದಿ: Congress Guarantee: ಮನೆಯಿಂದ 50 ಕಿ.ಮೀ.ವರೆಗೆ ಮಾತ್ರ ಉಚಿತ ಬಸ್ ಪ್ರಯಾಣ?: ಗ್ಯಾರಂಟಿಗೆ ಷರತ್ತು ವಿಧಿಸಲು ಸರ್ಕಾರ ಕಸರತ್ತು