Site icon Vistara News

Congress Guarantee: ವಿಶ್ವ ಬ್ಯಾಂಕ್‌ನಲ್ಲಿದ್ದ ಅಧಿಕಾರಿಗೆ ಗ್ಯಾರಂಟಿ ಜಾರಿ ಹೊಣೆ ನೀಡಿದ ಸಿದ್ದರಾಮಯ್ಯ!

#image_title

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಇದೀಗ ಐದು ಗ್ಯಾರಂಟಿಗಳ ಜಾರಿ ಬಹುದೊಡ್ಡ ತಲೆನೋವು ಹಾಗೂ ಸವಾಲಾಗಿದೆ. ಅದಕ್ಕಾಗಿ ಹಣಕಾಸು ಇಲಾಖೆಗೆ ನುರಿತ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ನೇಮಕ ಮಾಡಿಕೊಂಡಿದ್ದಾರೆ.

ಸದ್ಯದ ಅಂದಾಜಿನ ಪ್ರಕಾರ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರೂ. ಅಗತ್ಯವಿದೆ. ಇದಕ್ಕಿಂತ ಹೆಚ್ಚೂ ಆಗಬಹುದು. ಹೇಗಾದರೂ ಮಾಡಿ ಗ್ಯಾರಂಟಿಗೆ ಹಣ ಹೊಂದಿಸಿದರೆ, ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲಾಗದ ಸಂಕಷ್ಟ ಎದುರಾಗುತ್ತದೆ. ಇದಕ್ಕಾಗಿ ಹಣ ಹೊಂದಿಸುವಲ್ಲಿ ಆರ್ಥಿಕ ಇಲಾಖೆಯ ಹೊಣೆ ಬಹಳ ದೊಡ್ಡದಾಗಿರುತ್ತದೆ. ಈ ಹಿಂದೆ ವಿಶ್ವ ಬ್ಯಾಂಕ್‌ನಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವವಿರುವ ಲುಥಫುಲ್ಲಾ ಖಾನ್‌ ಅತೀಕ್‌ (ಎಲ್‌.ಕೆ. ಅತೀಕ್‌) ಅವರನ್ನು ಆರ್ಥಿಕ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಸದ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಅಧಿಕಾರಿಯಾಗಿ ಎಲ್‌.ಕೆ. ಅತೀಕ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್‌.ಕೆ. ಅತೀಕ್‌ ಅವರಿಗೆ ಇನ್ನು ಎರಡು ವರ್ಷ ಸೇವೆ ಸಲ್ಲಿಸುವ ಅವಕಾಶವಿದೆ.

ಮೂಲತಃ ತುಮಕೂರಿನ ಪಾವಗಡದವರಾದ ಎಲ್‌.ಕೆ. ಅತೀಕ್‌ ಆನಂತರ ಅಮೆರಿಕದ ಸಿರಕಾಸ್‌ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಮುಖ್ಯವಾಗಿ ಸಾರ್ವಜನಿಕ ನೀತಿ ನಿರೂಪಣೆ, ಆರ್ಥಿಕತೆ, ಶಿಕ್ಷಣ, ಆರೋಗ್ಯ ಹಾಗೂ ಆಡಳಿತ ಸುಧಾರಣೆಯಲ್ಲಿ ಆಸಕ್ತಿ ಹೊಂದಿರುವ ಎಲ್‌.ಕೆ. ಅತೀಕ್‌, ಕೃಷಿ ಆರ್ಥಿಕತೆಯಲ್ಲಿ ಸ್ನಾತಕೋತ್ತರ ಪದವೀಧರ. 2006-07ರಲ್ಲಿ ಕರ್ನಾಟಕದಲ್ಲಿ ಸರ್ವಶಿಕ್ಷಣ ಅಭಿಯಾನ ಜಾರಿ ನಿರ್ದೇಶಕರಾಗಿದ್ದರು. 2007ರಿಂದ 2012ರವರೆಗೆ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಕಚೇರಿಯಲ್ಲಿ ನಿರ್ದೇಶಕ, ಜಂಟಿ ಕಾರ್ಯದರ್ಶಿಯಾಗಿದ್ದರು. ಈ ಸಮಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಅಂಗನವಾಡಿಗಳಿಗೆ ಐಸಿಡಿಎಸ್‌ ಯೋಜನೆಗಳ ಜಾರಿ ಕುರಿತು ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: Congress Guarantee: ಗ್ಯಾರಂಟಿ ಜಾರಿ ಸಂಪುಟ ಸಭೆ ಮುಂದೂಡಿಕೆ: ಹೊಸ ದಿನಾಂಕ ಯಾವುದು?

ಆನಂತರ ವಿಶ್ವಬ್ಯಾಂಕ್‌ನಲ್ಲಿ ನಿಯೋಜನೆಗೊಂಡಿದ್ದರು. ಬಾಂಗ್ಲಾದೇಶ, ಭೂತಾನ್‌, ಭಾರತ ಹಾಗೂ ಶ್ರೀಲಂಕಾದ ಕಾರ್ಯನಿರ್ವಾಹಕ ಅಧಿಕಾರಿಗೆ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಮತ್ತೆ ಕರ್ನಾಟಕಕ್ಕೆ ವಾಪಸಾಗಿ 2015-16ರಲ್ಲ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, 2016-2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆನಂತರದಲ್ಲಿ ಗ್ರಾಮೀಣಾಭಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದಾರೆ.

ಈಗ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಐಎಸ್‌ಎನ್‌ ಪ್ರಸಾದ್‌ ಅವರಿದ್ದಾರೆ. ಅವರು ಜೂನ್‌ 30ರಂದು ನಿವೃತ್ತರಾಗಲಿದ್ದಾರೆ. ಸದ್ಯ ಎಲ್‌.ಕೆ. ಅತೀಕ್‌ ಅವರನ್ನು ಹಣಕಾಸು ಇಲಾಖೆಯಲ್ಲಿ ತಾತ್ಕಾಲಿಕವಾಗಿ ಸೃಜಿಸಲಾದ ವಿಶೇಷ ಕರ್ತವ್ಯ ಹುದ್ದೆಗೆ ಹೆಚ್ಚುವರಿಯಾಗಿ ನೇಮಿಸಲಾಗಿದೆ. ಮುಂದಿನ ಒಂದು ತಿಂಗಳು ಅವರು ರಾಜ್ಯದ ಹಣಕಾಸು ಸ್ಥಿತಿಯ ಕುರಿತು ಅನುಭವ ಪಡೆಯಲಿದ್ದಾರೆ. ಜೂನ್‌ 30ರಂದು ಐಎಸ್‌ಎನ್‌ ಪ್ರಸಾದ್‌ ನಿವೃತ್ತಿ ನಂತರ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಪೂರ್ಣಕಾಲಿಕ ಕಾರ್ಯ ಆರಂಭಿಸಲಿದ್ದಾರೆ. ಐದು ಗ್ಯಾರಂಟಿ ಸ್ಕೀಂಗಳನ್ನು ರಾಜ್ಯದ ಆರ್ಥಿಕತೆಗೆ ಧಕ್ಕೆ ಆಗದಂತೆ ಜಾರಿ ಮಾಡಬೇಕಿದೆ. ಇದರ ಜತೆಗೆ ಪ್ರತಿ ವರ್ಷ ಬಜೆಟ್‌ ಅನುಷ್ಠಾನದ ಹೊಣೆಯೂ ಅವರ ಮೇಲಿರಲಿದೆ.

ಇದನ್ನೂ ಓದಿ: Narendra Modi: ರಾಜಸ್ಥಾನದಲ್ಲೂ ಕಾಂಗ್ರೆಸ್‌ ಗ್ಯಾರಂಟಿಗೆ ಕುಟುಕಿದ ಮೋದಿ, ವಿಧಾನಸಭೆ ಚುನಾವಣೆಗೆ ರಣಕಹಳೆ

Exit mobile version