ಬೆಂಗಳೂರು: ರಾಜ್ಯ ಸರ್ಕಾರವು ಘೋಷಿಸಿ ಈಗಾಗಲೆ ಜಾರಿ ಮಾಡಿರುವ ಕಾಂಗ್ರೆಸ್ ಗ್ಯಾರಂಟಿ( Congress Guarantee) ಶಕ್ತಿ ಯೋಜನೆಯಿಂದಾಗಿ, ನಷ್ಟದಲ್ಲಿದ್ದ ಸಾರಿಗೆ ನಿಗಮಗಳು ಭರ್ಜರಿ ಲಾಭದತ್ತ ಸಾಗಿವೆ. ಆದರೆ ಸರ್ಕಾರದ ಬೊಕ್ಕಸ ಖಾಲಿ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂನ್ 12ರಿಂದ ಚಾಲನೆ ನೀಡಲಾಗಿದೆ. ರಾಜ್ಯದ ಒಳಗೆ ಸಂಚರಿಸುವ, ಸಾರಿಗೆ ಇಲಾಖೆಯ ಎಲ್ಲ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಇದು ಅವಕಾಶ ಮಾಡಿಕೊಡುತ್ತದೆ.
ಈಗಾಗಲೆ ರಾಜ್ಯಾದ್ಯಂತ ಮಹಿಳೆಯರು ಉತ್ಸಾಹದಿಂದ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಅನೇಕ ತೀರ್ಥ ಕ್ಷೇತ್ರಗಳಲ್ಲೂ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇದೆಲ್ಲದರ ನಡುವೆ ಯೋಜನೆ ಜಾರಿಯಾದ ಎರಡು ವಾರಗಳಲ್ಲೆ ಸರ್ಕಾರದಿಂದ ಸಾರಿಗೆ ಇಲಾಖೆಗೆ 194.5 ಕೋಟಿ ರೂ. ಹಣ ಬರುವುದು ಖಾತ್ರಿಯಾಗಿದೆ.
ರಾಜ್ಯದ ನಾಲ್ಕು ನಿಗಮಗಳು ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿ ಇವೆ. ಕಳೆದ 16 ದಿನಗಳಲ್ಲಿ ಸರ್ಕಾರಿ ಸಾರಿಗೆ ಬಸ್ಸುಗಳು ಅಗಾಧ ಆದಾಯ ಗಳಿಸಿವೆ. ಇಲ್ಲಿಯವರೆಗೂ ಮಹಿಳಾ ಪ್ರಯಾಣಿಕರಿಂದ ಗಳಿಸಿದ ಹಣ 194.5 ಕೋಟಿ ಗಳಿಕೆ ಆಗಿದೆ. ಇದರಲ್ಲಿ ಶೇಕಡಾ 60ರಷ್ಟು ಸಂಬಳ, ಡೀಸೆಲ್ ಹಾಗೂ ಊಟದ ಖರ್ಚು ಕಳೆದರೂ 16 ದಿನಗಳಲ್ಲಿ ಸಂಸ್ಥೆಗೆ 70 ಕೋಟಿ ರೂ. ಆದಾಯ ಬಂದಂತೆ ಆಗಿದೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Free Bus service: ಮಹಿಳಾ ಶಕ್ತಿ ಎಫೆಕ್ಟ್; ಬಸ್ಸಲ್ಲಿ ತಳ್ಳಾಟಕ್ಕೆ ಸಿಲುಕಿದ ವಿದ್ಯಾರ್ಥಿನಿ ಅಸ್ವಸ್ಥ
ಇದೇ ರೀತಿ ಒಂದು ವರ್ಷ ಸಾರಿಗೆ ಇಲಾಖೆಗೆ ಹಣ ಹರಿದು ಬಂದರೂ ಸಾರಿಗೆ ಇಲಾಖೆ ಲಾಭಕ್ಕೆ ಬರುತ್ತದೆ. ಪಿ.ಜಿ.ಆರ್. ಸಿಂಧ್ಯಾ ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಮಾತ್ರ ಸಾರಿಗೆ ಇಲಾಖೆ ಲಾಭದಲ್ಲಿ ನಡೆಯುತ್ತಿತ್ತು. ಬಳಿಕ ಎಸ್. ಎಂ. ಕೃಷ್ಣ ಸರ್ಕಾರದಿಂದ ಇಲ್ಲಿಯವರೆಗಿನ ಎಲ್ಲ ಸರ್ಕಾರದ ಅವಧಿಯಲ್ಲೂ ಸಾರಿಗೆ ಇಲಾಖೆ ನಷ್ಟದಲ್ಲಿ ನಡೆದು ಬರುತ್ತಿದೆ. ಈಗ ನಾಲ್ಕೂ ನಿಗಮಗಳು ಒಟ್ಟು ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿ ನಡೆಯುತ್ತಿವೆ. ಮೊದಲ ತಿಂಗಳಲ್ಲಿ ಸುಮಾರು 70 ಕೋಟಿ ಲಾಭ ನಿರೀಕ್ಷೆಯಲ್ಲಿ ಸಾರಿಗೆ ಇಲಾಖೆ ಇದೆ. ಇತ್ತ ಸಾರಿಗೆ ಇಲಾಖೆ ಬೊಕ್ಕಸ ತುಂಬಿದಷ್ಟು ಸರ್ಕಾರದ ಬೊಕ್ಕಸ ಖಾಲಿ ಆಗುವುದು ಖಚಿತ ಎಂಬ ಮಾತುಗಳು ಸರ್ಕಾರದ ಅಧಿಕಾರಿಗಳ ನಡುವೆ ಕೇಳಿಬರುತ್ತಿವೆ.