ಬೆಂಗಳೂರು: ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ರಾಜ್ಯದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ಪಾಸ್ ನೀಡುವ ಕುರಿತು ಈಗಾಗಲೆ ಸರ್ಕಾರಕ್ಕೆ ಸಾರಿಗೆ ನಿಗಮಗಳು ಮಾಹಿತಿ ನೀಡಿವೆ. ತಮಗೆ ಬರುವ ಆದಾಯದಲ್ಲಿ ಯಾವುದೇ ಕಾರಣಕ್ಕೆ ಉಚಿತ ಪ್ರಯಾಣವನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.
ಸಾರಿಗೆ ನಿಗಮಗಳು ತಮ್ಮಷ್ಟಕ್ಕೆ ತಾವೇ ಪಾಸ್‌ಗಳನ್ನು ನೀಡಲು ಸಾಧ್ಯವೇ ಎಂದು ಸರ್ಕಾರ ಚರ್ಚೆ ನಡೆಸಿದೆ. ಆದರೆ ನಾಲ್ಕೂ ನಿಗಮಗಳ ಅಧಿಕಾರಿಗಳು ಇದಕ್ಕೆ ನಕಾರಾತ್ಮಕ ಉತ್ತರ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಹೊರತುಪಡಿಸಿ ಉಳಿದೆಲ್ಲ ನಿಗಮಗಳು ನಷ್ಟದಲ್ಲೇ ಇವೆ. ಕೆಎಸ್‌ಆರ್‌ಟಿಸಿಯೂ ಅತ್ಯಂತ ಕಡಿಮೆ ಲಾಭದಲ್ಲಿದೆ. ಈಗ ಉಚಿತ ಪಾಸ್ ಹೊರೆ ಹೊತ್ತರೆ ನಿಗಮ ನಡೆಸುವುದೇ ಅಸಾಧ್ಯ ಎಂದು ತಿಳಿಸಿದ್ದಾರೆ.
ಆದ್ಧರಿಂದ, ಉಚೊತ ಬಸ್‌ಪಾಸ್‌ನ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಲು ನಿರ್ಧಾರ ಮಾಡಿದೆ. ಇದಕ್ಕಾಗಿ ಶಾಂತಿನಗರದ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಗಮಗಳ ಸಭೆ ಆಯೋಜಿಸಿದ್ದಾರೆ. ಯೋಜನೆಯ ಜಾರಿ ಹಾಗೂ ಅದರ ಸವಾಲುಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಲಾಖೆಗಳ ಮುಖ್ಯಸ್ಥರನ್ನು ಕರೆದು ಸಿಎಂ ಮೀಟಿಂಗ್ ಮಾಡಿದ್ದಾರೆ. ಬುಧವಾರ ಸಚಿವರ ಸಭೆ ಕರೆದಿದ್ದಾರೆ. 1ನೇ ತಾರೀಖು ಕ್ಯಾಬಿನೆಟ್ ಇದೆ, ಎಲ್ಲವೂ ಪಾಸಿಟಿವ್ ಆಗಲಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡ್ತೇವೆ. ಸಚಿವ ಸಂಪುಟದಲ್ಲಿ ತೀರ್ಮಾನ ಆದ ಬಳಿಕ ತಿಳಿಸುತ್ತೇವೆ ಎಂದಿದ್ದಾರೆ.
ಮಂಗಳವಾರ ನಿಗಮಗಳ ಎಂಡಿಗಳ ಸಭೆ ಕರೆದಿದ್ದೇವೆ. ಮಹಿಳಾ ಪ್ರಯಾಣಿಕರು ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ನಾಲ್ಕೂ ನಿಗಮಗಳು ಸಾರ್ವಜನಿಕರ ಅನುಕೂಲಕ್ಕಾಗಿ ನಡೆಸುವ ಸಂಸ್ಥೆಗಳು. 40% ಬಸ್‌ಗಳಿಂದ ನಷ್ಟ ಆಗುತ್ತಿದೆ, ಆದರೂ ಜನರಿಗಾಗಿ ಓಡಿಸುತ್ತಾರೆ. 40% ರಷ್ಟು ಬಸ್‌ಗಳು ಆದಾಯವೂ ಇಲ್ಲ, ನಷ್ಟವೂ ಇರುವುದಿಲ್ಲ. 20% ರಷ್ಟು ಬಸ್‌ಗಳು ಮಾತ್ರ ಲಾಭದಲ್ಲಿರುತ್ತವೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.