ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ನಡುವೆಯೇ ರಾಜ್ಯ ಕಾಂಗ್ರೆಸ್ ನಾಯಕರ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತ್ಯೇಕ ಪ್ರವಾಸಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಹಮತ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರವಾಸ ಬೇಡ ಎಂದು ಕೆಲ ಕೈ ನಾಯಕರು ಸಲಹೆ ನೀಡಿದ್ದರು. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಅನುಮತಿ ಸಿಕ್ಕಿದ್ದು, ನವೆಂಬರ್ ತಿಂಗಳಲ್ಲಿ ಉಭಯ ನಾಯಕರು ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Mallikarjun Kharge | ಯುವಕರಿಗೆ ಪಕ್ಷದ ಹುದ್ದೆಗಳಲ್ಲಿ ಶೇ.50 ಮೀಸಲು ಜಾರಿ: ಖರ್ಗೆ ಭರವಸೆ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಪ್ರಚಾರ ಮಾಡಲು ಪ್ರತ್ಯೇಕ ಪ್ರವಾಸ ಅಗತ್ಯ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ಪ್ರತ್ಯೇಕ ಪ್ರವಾಸ ಕೈಗೊಳ್ಳಲು ಹೈಕಮಾಂಡ್ ಸೂಚಿಸಿದೆ. ಪ್ರತ್ಯೇಕ ಪ್ರವಾಸ ಮಾಡಿ, ಆದರೆ ಯಾವುದೇ ಗೊಂದಲ ಸೃಷ್ಟಿ ಮಾಡಬೇಡಿ, ತಾವೂ ಪ್ರವಾಸದಲ್ಲಿ ಭಾಗವಹಿಸುವುದಾಗಿ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಪೈಪೋಟಿಯಾಗಿ ರಾಜ್ಯ ಪ್ರವಾಸ ಮಾಡಲು ಈಗಾಗಲೇ ಹೊಸ ಬಸ್‌ಗಳನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಂಡಗಳು ಸಿದ್ಧಗೊಳಿಸಿವೆ.
ಬಣ ರಾಜಕೀಯ ಇದ್ದಾಗ್ಯೂ ಹೈಕಮಾಂಡ್ ಪ್ರತ್ಯೇಕ ಪ್ರವಾಸಕ್ಕೆ ಅನುಮತಿ ನೀಡಿದೆ. ಇಬ್ಬರೂ ತಮ್ಮ ಪ್ರವಾಸಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ, ಪರಸ್ಪರ ಸ್ಪರ್ಧಾತ್ಮಕತೆಯಿಂದ ಪಕ್ಷಕ್ಕೆ ಒಳಿತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದ್ದಂತೆ ತೋರುತ್ತಿದೆ.
ಇದನ್ನೂ ಓದಿ | Election 2023 | ಮೂರೂವರೆ ವರ್ಷದ ಬಳಿಕ ಜೆಡಿಎಸ್ ಕಚೇರಿಗೆ ಜಿಟಿಡಿ; ಸಿಹಿ ತಿನ್ನಿಸಿದ ಎಚ್‌ಡಿಕೆ