ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿದ್ದರು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಸಲೀಂ ಅಹಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಉಪಸ್ಥಿತರಿದ್ದರು.
ಪ್ರಮುಖವಾಗಿ ರಾಜ್ಯದಲ್ಲಿ ಚುನಾವಣೆಗೆ ತಯಾರಿ ನಡೆಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬಸ್ ಯಾತ್ರೆ ಕುರಿತು ಚರ್ಚೆ ನಡೆದಿದೆ. ಆದರೆ ಪ್ರತ್ಯೇಕ ಬಸ್ ಯಾತ್ರೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಎಲ್ಲರೂ ಒಗ್ಗಟ್ಟಿನಿಂದ ಪ್ರವಾಸ ಮಾಡಬೇಕು. ಡಿಸೆಂಬರ್‌ನಲ್ಲಿ ಅಧಿವೇಶನ ಮುಕ್ತಾಯವಾದ ನಂತರ ಜನವರಿಯಲ್ಲಿ ಬಸ್ ಯಾತ್ರೆ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.
ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೆವಾಲ, ಚುನಾವಣೆ ತಯಾರಿ ಬಗ್ಗೆ ಸಮಾಲೋಚನೆ ಮಾಡಿದ್ದೇವೆ. ಚುನಾವಣಾ ರೋಡ್ ಮ್ಯಾಪ್ ಸಿದ್ಧತೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಬಸವರಾಜ್ ಬೊಮ್ಮಾಯಿ ಸರ್ಕಾರದ ಬಗ್ಗೆ, ಅವರ 40% ಕಮಿಷನ್ ವಿರುದ್ಧ ಧ್ವನಿ ಎತ್ತುವ ಬಗ್ಗೆಯೂ ಸಹ ಚರ್ಚೆ ಆಗಿದೆ. ಮುಂದಿನ ದಿನಗಳಲ್ಲಿ ಅಗ್ರೆಸ್ಸಿವ್ ಆಗಿ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.
ಕೃಷ್ಣ ಮಹಾದಾಯಿ ಕುರಿತು ಹುಬ್ಬಳಿಯಲ್ಲಿ ಸಮಾವೇಶ ನಡೆಸಲಿದ್ದೇವೆ. ಮುಂದಿನ 75 ದಿನಗಳಲ್ಲಿ ಈ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ತಯಾರಿ ಬಗ್ಗೆ ಸಲಹೆ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ರಾಜ್ಯ ಬಿಜೆಪಿ ಸರ್ಕಾರದ ವಿಫಲತೆ ಬಗ್ಗೆ ನಮ್ಮ ಹೋರಾಟ ನಡೆಯಲಿದ್ದು, ಬಿಜೆಪಿಯನ್ನು ಆಡಳಿತದಿಂದ ಕಿತ್ತೊಗೆಯಲು ಮಾರ್ಗಸೂಚಿ ರಚಿಸಿದ್ದೇವೆ.
ಜನವರಿ 2ರಂದು ಹುಬ್ಬಳಿಯಲ್ಲಿ ಕೃಷ್ಣ ಮಹದಾಯಿ ಸಮಾವೇಶ ಮಾಡಲಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನಾಯಕರ ಒಗ್ಗಟಿನ ಮಂತ್ರ ನಡೆಸಲಿದ್ದೇವೆ. ಕರ್ನಾಟಕದಲ್ಲಿ 75 ದಿನಗಳ ಕಾಲ ನಿರಂತರ ಹೋರಾಟ, ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಅನ್ನೋದು ನಮ್ಮ ಉದ್ದೇಶ ಎಂದರು.
ಡಿ.ಕೆ. ಶಿವಕುಮಾರ್ ಮಾತನಾಡಿ, 30ನೇ ತಾರೀಕು ವಿಜಾಪುರದಲ್ಲಿ ಕೃಷ್ಣ ನೀರಿನ ಬಗ್ಗೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಜನವರಿ 2ರಂದು ಹುಬ್ಬಳಿಯಲ್ಲಿ ಮಹದಾಯಿ ಸಮಾವೇಶ ನಡೆಯಲಿದೆ. ಹೀಗೆ ನಿರಂತರವಾಗಿ ಹೋರಾಟ, ಸಮಾವೇಶ ಮಾಡಲು ತೀರ್ಮಾನಿಸಿದ್ದೇವೆ. ಉಳಿದ ಸಿದ್ಧತೆ ದಿನಾಂಕ ಬಗ್ಗೆ ಮಾಹಿತಿ ನೀಡುತ್ತೇವೆ.
ಜನವರಿ 8ರಂದು ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶ ಚಿತ್ರದುರ್ಗದಲ್ಲಿ ನಡೆಯಲಿದೆ. ಇನ್ನುಳಿದಂತೆ ಒಬಿಸಿ ಸಮಾವೇಶ ಮಾಡಲು ನಿರ್ಧಾರ, ಮುಂದಿನ ದಿನಗಳಲ್ಲಿ ದಿನಾಂಕ ನಿರ್ಧಾರ ಮಾಡಲಾಗುತ್ತದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮಾಡಲಿದ್ದೇವೆ. ನಾವೆಲ್ಲಾ ಒಟ್ಟಿಗೆ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ನಾನು, ಅಧ್ಯಕ್ಷರು ಸೇರಿದಂತೆ ಎಲ್ಲರೂ ಹೋಗುತ್ತೇವೆ. ಇದಾದ ಬಳಿಕ ನಾವು ಎರಡು ತಂಡವನ್ನು ಮಾಡುತ್ತೇವೆ. ಮೊದಲ ಹಂತದ ಯಾತ್ರೆ ಬಳಿಕ ನಾನು ವಿಧಾನಸಭಾ ಕ್ಷೇತ್ರದ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಒಂದು ಟೀಮ್ ಅಧ್ಯಕ್ಷರ ನೇತೃತ್ವದಲ್ಲಿ ಹೋಗುತ್ತದೆ, ಇನ್ನೊಂದು ಟೀಮ್ ನನ್ನ ಅಧ್ಯಕ್ಷತೆನಲ್ಲಿ ಇರುತ್ತದೆ.
ನಮ್ಮಿಬ್ಬರ ಜತೆಗೂ, ಅಂದರೆ ನಮ್ಮಿಬ್ಬರ ತಂಡದಲ್ಲೂ ಸಹ ಬೇರೆ ಬೇರೆ ಲೀಡರ್ ಗಳು ಇರುತ್ತಾರೆ. ನಾವಿಬ್ಬರೂ ಎಲ್ಲ ಕಡೆ ಸಂಚಾರ ಮಾಡುತ್ತೇವೆ. ಮೊದಲ ಹಂತದಲ್ಲಿ ದಕ್ಷಿಣ ಭಾಗ ಕವರ್ ಮಾಡುತ್ತೇವೆ, ಆಮೇಲೆ ಉಳಿದ ಬಾಗ ಮಾಡುತ್ತೇವೆ ಎಂದರು.
ಕ್ಯಾಸ್ಟ್ ಈಸ್ ಡಿಫರೆಂಟ್ ಫ್ರಮ್ ಕ್ಲಾಸ್ ಎಂದ ಸಿದ್ದರಾಮಯ್ಯ, ನಾವು ಕ್ಲಾಸ್ ಸಮಾವೇಶ ಮಾಡುತ್ತೇವೆಯೇ ವಿನಃ, ಕ್ಯಾಸ್ಟ್ ಸಮಾವೇಶ ಅಲ್ಲ. ಬಿಜೆಪಿಯವರು SC-ST ಸಮಾವೇಶ ಮಾದಿದರೆ ಅದು ಜಾತಿ ಅಲ್ವಾ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನವರಿಯಲ್ಲಿ ಯಾತ್ರೆ
ಜನವರಿಯಲ್ಲಿ ಪ್ರಮುಖ 150 ಕ್ಷೇತ್ರಗಳ ಪಟ್ಟಿಯನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ನಾಯಕರು ಮನವಿ ಮಾಡಿದ್ದು, ಹೈಕಮಾಂಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಚಿತ್ರದುರ್ಗದಲ್ಲಿ ನಡೆಯುವ ಎಸ್‌ಸಿ ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ, ಹುಬ್ಬಳ್ಳಿ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆ ತರಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸರ್ಕಾರದ ಭ್ರಷ್ಟಾಚಾರ ವಿಚಾರವನ್ನು ಮನೆ ಮನೆಗೂ ತಲುಪಿಸಬೇಕು. ಕೃಷ್ಣಾ ನೀರಾವರಿ ಯೋಜನೆ ಅಜೆಂಡಾಆಗಿ ತೆಗೆದುಕೊಳ್ಳಬೇಕು. ಸಿಎಂ ರೇಸ್ ಬಗ್ಗೆ ಚರ್ಚೆ ಬೇಡ. ಮೊದಲು ಪಕ್ಷ ಅಧಿಕಾರಕ್ಕೆ ಬರಲು ಒಗ್ಗಟ್ಟಿನಿಂದ ಹೋಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಪಂಜಾಬ್‌ನಲ್ಲಿ ಪಕ್ಷದ ಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟ ವೇಣುಗೋಪಾಲ್, ದೇಶದಲ್ಲಿ ಕರ್ನಾಟಕ ನಮಗೆ ಫೆವರ್ ರಾಜ್ಯ. ಎಲ್ಲರೂ ಒಟ್ಟಾಗಿ ಹೋಗಿ ಚುನಾವಣೆ ಗೆಲ್ಲಬೇಕು. ಫೆಬ್ರವರಿಯಿಂದ ರಾಜ್ಯಕ್ಕೆ ರಾಹುಲ್ ಗಾಂಧಿಯವರನ್ನು ಕರೆತರಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಜಪಕ್ಕೆ ಬ್ರೇಕ್ ಹಾಕಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈದನ್ನೂ ಓದಿ | Karnataka Election | ಕಾಂಗ್ರೆಸ್‌ನಿಂದಲೂ ಎರಡು ಯಾತ್ರೆ; ಸಿದ್ಧವಾಗಿದೆ ಬಸ್