ರಾಯಚೂರು: ʻʻಕಾಂಗ್ರೆಸ್ ಈಗ ಇಂಡಿಯನ್ ಹಸುವಿನ ಸ್ಥಿತಿಗೆ ಬಂದಿದೆ ಆಗಿದೆʼʼ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಸ್ಥಿತಿ, ಭಾರತ್ ಜೋಡೋ ಯಾತ್ರೆ, ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗುವ ಸಾಧ್ಯತೆಗಳ ಬಗ್ಗೆ ಲೇವಡಿಯ ಮಾತುಗಳಲ್ಲೇ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಮತ್ತು ಹಸುವಿನ ವಿಚಾರಕ್ಕೆ ಸಂಬಂಧಿಸಿ ಒಂದು ಕಥೆ ಹೇಳಿದ ಇಬ್ರಾಹಿಂ ಅವರು, ʻʻಒಮ್ಮೆ ಜಗತ್ತಿನ ಎಲ್ಲಾ ಹಸುಗಳ ಸಮ್ಮೇಳನ ನಡೆಯಿತು. ಎಲ್ಲ ಹಸುಗಳೂ ʻʻನಮ್ಮನ್ನ ಚೆನ್ನಾಗಿ ನೋಡ್ಕೊತಾರೆ.. ಆದರೆ, ಕೊನೆಗೆ ನಮ್ಮನ್ನು ಕಡಿದುಬಿಡ್ತಾರೆʼʼ ಎಂದ ಹೇಳಿದವು. ಆಗ ಇಂಡಿಯನ್ ಹಸು, ʻʻದಯವಿಟ್ಟು ಕ್ಷಮಿಸಿ, ನನಗೆ ಎದ್ದು ನಿಂತ್ಕೊಂಡು ಮಾತನಾಡೋಕೆ ಆಗಲ್ಲ. ನಾನು ಎದ್ದು ನಿಂತು ಮಾತನಾಡೋ ಸ್ಥಿತಿಯಲ್ಲಿಲ್ಲ. ನನಗೆ ದೇವ್ರು ಅಂತಾರೆ, ಹಾಲು ಕರ್ಕೊತಾರೆ. ನನ್ನ ಉಚ್ಚೆ ಸಮೇತ ಬಿಡಲ್ಲ. ಆದ್ರೆ ತಿನ್ನೋಕೆ ಏನೂ ಹಾಕಲ್ಲ.. ನನ್ನ ಪರಿಸ್ಥಿತಿ ಹೀಗಾಗಿದೆʼʼ ಅಂದ ಹೇಳಿತು. ಕಾಂಗ್ರೆಸ್‌ನ ಸ್ಥಿತಿಯೂ ಹೀಗೇ ಆಗಿದೆ ಎಂದರು.
ʻʻಕಾಂಗ್ರೆಸ್‌ನದು ಸಾಫ್ಟ್ ಹಿಂದುತ್ವ. ಬಿಜೆಪಿಯದು ಹಾರ್ಡ್ ಹಿಂದುತ್ವ. ಆದರೆ, ನಮ್ಮದು ಹಿಂದುತ್ವನೂ ಇಲ್ಲ, ಮುಸ್ಲಿಮತ್ವನೂ ಇಲ್ಲʼʼ ಎಂದರು ಸಿ.ಎಂ. ಇಬ್ರಾಹಿಂ.
ಸಾಬ್ರು ಸತ್ರೆ ಯಾಕೆ ದುಡ್ಡು ಕೊಡಲ್ಲ?
ʻʻಆವತ್ತು ಇಂದಿರಾ ಗಾಂಧಿ ಎಮರ್ಜೆನ್ಸಿ ಹಾಕಿ ತಪ್ಪು ಮಾಡಿದ್ರು. ಅದೇ ತಪ್ಪನ್ನು ಬಿಜೆಪಿ ಇವತ್ತು ಮಾಡ್ತಿದೆʼʼ ಎಂದರು ಸಿ.ಎಂ. ಇಬ್ರಾಹಿಂ. ʻʻಮಂಗಳೂರಲ್ಲಿ ಇಬ್ಬರು ಸಾಬರನ್ನು ಕೊಂದ್ರು. ಅವರನ್ನು ಯಾರು ಕೊಂದಿದ್ದು? ಪಿಎಫ್‌ಐನವರೇ ಹೋಗಿ ಕೊಂದ್ರಾ? ಅದಕ್ಕೆ ಯಾರನ್ನು ಬ್ಯಾನ್ ಮಾಡ್ತಿರಾ? ಬಿಜೆಪಿಯವರು ಸತ್ತರೆ 25 ಲಕ್ಷ ರೂ. ಕೊಡ್ತೀರಿ.. ಆದರೆ, ಸಾಬರು ಸತ್ರೆ ಏನೂ ಕೊಡಲ್ಲ.. ಪಾಪ ಅಲ್ವಾ ಅವರು?ʼʼ ಎಂದು ಪ್ರಶ್ನಿಸಿದರು ಇಬ್ರಾಹಿಂ.
ಹಾಳೂರಿಗೆ ಉಳಿದವನೇ ಗೌಡ!
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ಮಾತನಾಡಿದ ಅವರು, ಹಾಳೂರಿಗೆ ಉಳಿದವನೇ ಗೌಡ ಎಂದು ಗೇಲಿ ಮಾಡಿದರು. ʻʻನಮಗೆ ಒಂದು ಸಿದ್ಧಾಂತವಾದ್ರೂ ಇದೆ. ಕಾಂಗ್ರೆಸ್‌ಗೆ ಈ ಸ್ಥಿತಿ ಬರಬಾರದಿತ್ತು. ಪ್ರಾದೇಶಿಕ ಪಕ್ಷಕ್ಕಿಂತ ಕೆಳಗೆ ಹೋಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೇ ಪಾರ್ಲಿಮೆಂಟ್ ಇಲೆಕ್ಷನ್ ಅಲ್ಲಿ ಸೋತಿದ್ದಾರೆʼʼ ಎಂದರು.
ʻʻಕಾಂಗ್ರೆಸ್‌ಗೆ ಮೊದಲು ಸಾಬರಾದ್ರೂ ಬೆಂಬಲ ಕೊಡುತ್ತಿದ್ದರು. ಈಗ ಅವರೂ ಹೋಗಿದ್ದಾರೆ. ಈಗ ರಾಜಕೀಯ 100% ಜಾತಿ ಲೆಕ್ಕಾಚಾರದಲ್ಲೇ ನಡೀತಿದೆ. ಬಿಎಸ್ ವೈ ಜೊತೆ ಲಿಂಗಾಯತರಿದ್ದಾರೆ. ಹಿಂದುಳಿದ ವರ್ಗ ಪಕ್ಷಗಳ ನಡುವೆ ಛಿದ್ರವಾಗಿದೆ.. ದಲಿತರು ರೈಟ್ ಒಂದಿಷ್ಟು, ಲೆಫ್ಟ್‌ಗೆ ಒಂದಿಷ್ಟು ಜನ ಇದ್ದಾರೆ.. ಸಾಬರೂ 100% ಕಾಂಗ್ರೆಸ್‌ನಿಂದ ಹೊರಗಡೆ ಬಂದ್ರು. ಕರ್ನಾಟಕದಲ್ಲಿ ಹಿಂದು, ಮುಸ್ಲಿಂ ಅನ್ನೋ ಲೆಕ್ಕಾಚಾರ ಇಲ್ಲ. ಇಲ್ಲಿ ಪಂಚ ಶಕ್ತಿ ಇದೆ. ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು, ಮುಸ್ಲಿಮರು, ದಲಿತರುʼʼ ಎಂದು ವ್ಯಾಖ್ಯಾನಿಸಿದರು.
ಮುಂದೆ ೪೦ ಆಗುತ್ತೆ ನೋಡ್ತಾ ಇರಿ
ಭಾರತ್ ಜೋಡೊ ಯಾತ್ರೆ ಕರ್ನಾಟಕ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪಾದಯಾತ್ರೆಯಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಇಲ್ಲ. ಕೇರಳ ರಾಜ್ಯದಲ್ಲಿ ಮೂರನೇ ಬಾರಿ ಸೋಲು ನಿಶ್ಚಿತ. ರಾಹುಲ್ ಗಾಂಧಿ ಅವರು ಸ್ವತಃ ತಾವೇ ಅಧ್ಯಕ್ಷಗಿರಿ ಬೇಡ ಎಂದು ಕೂತಿದ್ದಾರೆ. ಅವರು ಕಾಲಿಟ್ಟ ಕಡೆ ಎಲ್ಲಿ ಸಕ್ಸಸ್ ಆಗಿದೆ ಹೇಳಿ?ʼʼ ಎಂದ ಪ್ರಶ್ನಿಸಿದರು.
ʻʻನಿಮ್ಮ ಪಾರ್ಟಿ ಹಿರಿಯ ನಾಯಕರನ್ನು ಮೊದಲು ಹೊಂದಾಣಿಕೆ ಮಾಡಿಕೊಳ್ಳಿ. ನಾನು ಹುಡುಗ ಇದ್ದೇನೆ. ನೀವು ಲೀಡ್ ತಗೊಳ್ಳಿ ಅಂತ ಹೇಳಿ ನಿಮ್ಮ ನಾಯಕರಿಗೆʼʼ ಎಂದು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ ಇಬ್ರಾಹಿಂ, ʻʻರಾಹುಲ್ ಗಾಂಧಿ ಕಾಲು ಗುಣದ ಬಗ್ಗೆ ಹೇಳಲಿಕ್ಕೆ ಏನೂ ಇಲ್ಲ.. ರಾಜ್ಯದಲ್ಲಿ ಕಾಂಗ್ರೆಸ್ ಸೀಟು ಸಂಖ್ಯೆ 112 ಇದ್ದದ್ದು 80 ಆಯಿತು. 80 ಇರುವುದು ಮುಂದೆ 40 ಆಗುತ್ತದೆʼʼ ಎಂದರು ಇಬ್ರಾಹಿಂ.
ಇದನ್ನೂ ಓದಿ | ಯಲ್ಚಕ್ನಳ್ಳಿ ಕಲ್ಚಕ್ನಳ್ಳೀನೇ ಜೋಡಿಸಿಲ್ಲ, ಭಾರತ ಜೋಡೊ ಮಾಡ್ತಾರ?: ಕಾಂಗ್ರೆಸ್ ಬಗ್ಗೆ ಸಿಎಂ ಇಬ್ರಾಹಿಂ ವ್ಯಂಗ್ಯ