Site icon Vistara News

Modi In Karnataka: ಕಾಂಗ್ರೆಸ್‌ ಸುಳ್ಳಿನ ಬಂಡಲ್‌; ನಂಜನಗೂಡಿನಲ್ಲಿ ಮೋದಿ ಕಿಂಡಲ್

PM Narendra Modi

ಮೈಸೂರು: ಶಿವಮೊಗ್ಗದ ಆಯನೂರಿನಲ್ಲಿ ಸಮಾವೇಶ ನಡೆಸಿದ ಬಳಿಕ ನಂಜನಗೂಡಿನಲ್ಲಿ (Modi In Karnataka) ನಡೆದ ಚುನಾವಣೆ ರ‍್ಯಾಲಿಯಲ್ಲಿ ಪಾಲ್ಗೊಂಡ ಮೋದಿ, ಅಬ್ಬರದ ಭಾಷಣ ಮಾಡಿದರು. ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಗಳನ್ನು ಜನರಿಗೆ ತೆರೆದಿಡುವ ಜತೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ, “ಕಾಂಗ್ರೆಸ್‌ನ ಸುಳ್ಳಿನ ಬಂಡಲ್‌ಅನ್ನು ನಂಬದಿರಿ” ಎಂದು ಜನರಿಗೆ ಮನವಿ ಮಾಡಿದರು.

“ಕರ್ನಾಟಕದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಓಡುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ಇರುವ ಕಾರಣದಿಂದಲೇ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ. ಇದೇ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದಿದ್ದರೆ, ಶೇ.85ರಷ್ಟು ಹಣವನ್ನು ಕೊಳ್ಳೆ ಹೊಡೆಯುತ್ತಿತ್ತು. ಆದರೆ, ನಿಮ್ಮ ಮೋದಿಯು ಹೀಗೆ ಹಣ ಪೋಲಾಗಲು ಬಿಡಲಿಲ್ಲ” ಎಂದು ಕುಟುಕಿದರು.

ಮೋದಿ ಭಾಷಣದ ಲೈವ್

“ಕರ್ನಾಟಕದಲ್ಲಿ ನವ ಇತಿಹಾಸ ರಚನೆಗೆ, ದೇಶದಲ್ಲಿಯೇ ನಂಬರ್‌ 1 ರಾಜ್ಯವನ್ನಾಗಿ ಮಾಡಲು ರಾಜ್ಯ ವಿಧಾನಸಭೆ ಚುನಾವಣೆಯು ಮಹತ್ತರವಾಗಿದೆ. ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಮೇಲೆ ಜನ ನಂಬಿಕೆ ಇರಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಒಂದೇ ಸಂಕಲ್ಪ ಇದೆ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂಬ ಸಂಕಲ್ಪ ಇದೆ” ಎಂದು ಹೇಳಿದರು.

“ಡಬಲ್‌ ಎಂಜಿನ್‌ ಸರ್ಕಾರವು ಡಬಲ್‌ ಸೇವಾಗುಣ, ಡಬಲ್‌ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂಬತ್ತು ವರ್ಷದಲ್ಲಿ ದೇಶದ ವಿಕಾಸವು ಕ್ಷಿಪ್ರವಾಗುತ್ತಿದೆ ಎಂದರೆ, ಕರ್ನಾಟಕವು ಅದಕ್ಕಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇಶವು ವಿಶ್ವದಲ್ಲಿಯೇ ಐದನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ವಿದೇಶಿ ಬಂಡವಾಳ ಹೂಡಿಕೆ, ರಫ್ತು ದಾಖಲೆ ಮಟ್ಟ ತಲುಪಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಸರ್ಕಾರ ಇದ್ದಾಗ ರಾಜ್ಯದ ಅಭಿವೃದ್ಧಿ ಆಗಿಲ್ಲ. ಆದರೆ, ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಕರ್ನಾಟಕಕ್ಕೆ ಹೂಡಿಕೆ ಹರಿದುಬಂದಿದೆ. ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ” ಎಂದರು. ‌

ವೇದಿಕೆ ಮೇಲೆ ನರೇಂದ್ರ ಮೋದಿ ಹಾಗೂ ಪ್ರತಾಪ್‌ ಸಿಂಹ

ಪ್ರತಿ ಕನ್ನಡಿಗನಿಗೆ ಹೆಮ್ಮೆಯ ವಿಚಾರ

“ವಿಶ್ವದಲ್ಲಿಯೇ ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಏಕೆ, ಮೊಬೈಲ್‌ ಉತ್ಪಾದನೆಯ ಬೃಹತ್‌ ಕಂಪನಿಗಳು ಕರ್ನಾಟಕಕ್ಕೆ ಆಗಮಿಸಿವೆ. ಬ್ರ್ಯಾಂಡ್‌ ಮೊಬೈಲ್‌ ಉತ್ಪಾದನೆ ಕರ್ನಾಟಕದಲ್ಲಿಯೇ ಆಗುತ್ತಿದೆ. ಇದನ್ನೆಲ್ಲ ನೋಡಿದರೆ, ಪ್ರತಿಯೊಬ್ಬ ಕನ್ನಡಿಗನಿಗೂ ಹಮ್ಮೆ ಎನಿಸುತ್ತದೆ. ಆದರೆ, ಇದರ ಬಗ್ಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ಇದರ ಬಗ್ಗೆ ಹೆಮ್ಮೆ ಇಲ್ಲ”‌ ಎಂದು ಟೀಕಿಸಿದರು.

“ಭಾರತದ ರಕ್ಷಣಾ ಕ್ಷೇತ್ರವು ಹೆಚ್ಚಿನ ಬಲಿಷ್ಠವಾಗುತ್ತದೆ. ದೇಶದ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗುತ್ತಲೇ ಕರ್ನಾಟಕದಲ್ಲಿ ಏಷ್ಯಾದಲ್ಲೇ ಬೃಹತ್‌ ಹೆಲಿಕಾಪ್ಟರ್‌ ಉತ್ಪಾದನೆ ಹೆಚ್ಚಾಗುತ್ತಿದೆ. ಕರ್ನಾಟಕ ಈಗ ಸ್ಟಾರ್ಟ್‌ಅಪ್‌ಗಳ ರಾಜಧಾನಿಯಾಗಿ ಬದಲಾಗಬೇಕಿದೆ. ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರವು ರೈಲ್ವೆ ಲೇನ್‌ಗಳ ವಿದ್ಯುದ್ದೀಕರಣ ಹೆಚ್ಚಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಉತ್ಕೃಷ್ಟ ಮೂಲಕ ಮೂಲ ಸೌಕರ್ಯ ನೀಡುವ ಬಿಜೆಪಿಗೆ ಈ ಬಾರಿ ಮತ ನೀಡಿ” ಎಂದು ಮನವಿ ಮಾಡಿದರು.

ಇದನ್ನೂ ಓದಿ: Modi In Karnataka: ನಂಜನಗೂಡು ನಂಜುಂಡೇಶ್ವರ ದೇಗುಲಕ್ಕೆ ಮೋದಿ ಭೇಟಿಗೆ ಕ್ಷಣಗಣನೆ, ದೇವರ ಬಳಿ ಪ್ರಧಾನಿ ಸಂಕಲ್ಪ

ನೀವೇ ನನ್ನ ಮಾಲೀಕರು

“ನನ್ನ ಭಾಷಣ ಕೇಳಿದ ಬಳಿಕ ಜನ ಭಾಷಾಂತರ ಮಾಡುವವರು ಬೇಡ ಎನ್ನುತ್ತಿದ್ದಾರೆ. ಹಾಗಾದರೆ, ನಾನು ಭಾಷಣ ಮುಂದುವರಿಸುತ್ತೇನೆ. ನೋಡಿ, ನೀವೇ ನನ್ನ ಮಾಲೀಕರು. ನೀವು ಏನು ಆದೇಶ ನೀಡುತ್ತಿರೋ, ಅದನ್ನು ನಾನು ಪಾಲಿಸುತ್ತೇನೆ. ನಾನು ಕೂಡ ಗುಜರಾತಿಯಾಗಿದ್ದೇನೆ. ನನ್ನ ಹಿಂದಿಯಲ್ಲೂ ತಪ್ಪು ಆಗುತ್ತಿರುತ್ತವೆ. ಆದರೂ, ನೀವು ನನ್ನ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತೀರಿ” ಎಂದು ಹೇಳಿದರು.

ಬಜರಂಗಬಲಿ ಸ್ಮರಣೆ

ನಂಜನಗೂಡಿನಲ್ಲೂ ಮೋದಿ ಬಜರಂಗಬಲಿ ಸ್ಮರಣೆ ಮಾಡಿದರು. “ಲಿಂಗಾಯತರಿಗೆ ಕಾಂಗ್ರೆಸ್‌ ಅವಮಾನ ಮಾಡುತ್ತದೆ. ಒಬಿಸಿಯವರಿಗೂ ಅಪಮಾನ ಎಸಗಿದೆ. ಬಜರಂಗಬಲಿಗೂ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ. ಆದರೆ, ಬಿಜೆಪಿಯು ಎಲ್ಲರ ಏಳಿಗೆಗೆ ಶ್ರಮಿಸುತ್ತಿದೆ. ಸುಡಾನ್‌ನಲ್ಲಿ ಸಿಲುಕಿದ್ದ ಹಕ್ಕಿಪಿಕ್ಕಿ ಸಮುದಾಯದವರು ಸೇರಿ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್‌ ರಾಜಕಾರಣ ಮಾಡಿದೆ. ಆದರೆ, ನಿಮಗಾಗಿ ಮೋದಿ ಇದ್ದಾನೆ. ದೇಶದ ಜನರ ರಕ್ಷಣೆಗಾಗಿ ನಾವು ಯಾವ ಹೆಜ್ಜೆಯನ್ನು ಬೇಕಾದರೂ ಇಡುತ್ತೇವೆ, ಎಂತಹ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ” ಎಂದರು.

“ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯೋಗದಾನ ನೀಡಿದ ಕನ್ನಡಿಗರಿಗೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ. ಕೋಟ್ಯಂತರ ಕನ್ನಡಿಗರಿಗೆ ಅಪಮಾನ ಎಸಗುತ್ತಿದೆ. ಕರ್ನಾಟಕವು ಭಾರತದ ಅವಿಭಾಜ್ಯ ಅಂಗ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ. ಹೀಗಿರುವಾಗ, ಕಾಂಗ್ರೆಸ್‌ ಒಡೆದು ಆಳುವ ನೀತಿ ಅನುಸರಿಸುವ ಪ್ರಯತ್ನದಲ್ಲಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ ಇಂತಹ ಹೀನ ಕೃತ್ಯ ಎಸಗುತ್ತದೆ ಎಂಬುದಾಗಿ ಭಾವಿಸಿರಲಿಲ್ಲ” ಎಂದು ಹೇಳಿದರು.

ನಂಬರ್‌ ಒನ್‌ ಕರ್ನಾಟಕ ಎಂದರೆ…

“ನಂಬರ್‌ ಒನ್‌ ಕರ್ನಾಟಕ ಎಂದರೆ ಏನು ಎಂಬುದನ್ನು ಜನರಿಗೆ ಮೋದಿ ಮನವರಿಕೆ ಮಾಡಿದರು. ನಂಬರ್‌ ಒನ್‌ ಕರ್ನಾಟಕ ಎಂದರೆ ಪ್ರತಿಯೊಂದು ಮನೆಗೂ ನಲ್ಲಿ ನೀರು ಒದಗಿಸುವುದು, ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಒದಗಿಸುವುದು, ಡಿಜಿಟಲ್‌, ಉದ್ಯೋಗ, ತಂತ್ರಜ್ಞಾನ, ಸಂಪರ್ಕ ಸೇರಿ ಸಕಲ ಕ್ಷೇತ್ರಗಳಲ್ಲಿ ನಂಬರ್‌ ಒನ್‌ ಆಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕೊನೆಯ ಭಾಷಣ ಇದಾಗಲಿದೆ. ನನಗೆ ಬೆಂಬಲ ನೀಡಿದ ಪ್ರತಿ ಕನ್ನಡಿಗನಿಗೆ ಧನ್ಯವಾದ ತಿಳಿಸುತ್ತೇನೆ. ಎಲ್ಲರೂ, ಚುನಾವಣೆಯ ಹಬ್ಬದಲ್ಲಿ ಪಾಲ್ಗೊಳ್ಳಿ. ಎಲ್ಲರೂ ಚುನಾವಣೆಯ ದಿನ ಮನೆಯಿಂದ ಹೊರಗೆ ಬಂದು ಮತದಾನ ಮಾಡಿ. ಮೇ 10ರಂದು ಪ್ರತಿಯೊಬ್ಬ ಕನ್ನಡಿಗನೂ ಮತದಾನ ಮಾಡಿ ಎಂದು ಮನವಿ ಮಾಡುತ್ತೇನೆ. ನಿಮ್ಮ ಒಂದು ಮತವು ದೇಶ, ಕರ್ನಾಟಕಕ್ಕೆ ಹೊಸ ದಿಕ್ಕು ನೀಡಲಿದೆ” ಎಂದು ತಿಳಿಸಿದರು.

Exit mobile version