ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಪೇಸಿಎಂ (PayCm) ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದು 40 ಪರ್ಸೆಂಟ್ ಸರ್ಕಾರ ಎಂದು ಬಿಂಬಿಸಲು ಕಾಂಗ್ರೆಸ್ ಆರಂಭಿಸಿರುವ ಪೇಸಿಎಂ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಈ ಕುರಿತು ಪಕ್ಷದ ಎಲ್ಲ ಜಿಲ್ಲಾ ಘಟಕಗಳಿಗೆ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್ ಪಕ್ಷವು ಶನಿವಾರ ಜಿಲ್ಲಾಮಟ್ಟದಲ್ಲಿ ನಡೆಸುತ್ತಿದೆ. ಬಳಿಕ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲೂ ಕೈಗೊಳ್ಳಲು ನಿರ್ಧರಿಸಿದೆ.
ಏತನ್ಮಧ್ಯೆ, ಕಾಂಗ್ರೆಸ್‌ನ ಆಕ್ರಮಣಕಾರಿ ಅಭಿಯಾನದ ವಿರುದ್ಧ ಅಸ್ತ್ರ ಪ್ರಯೋಗಿಸಲು ಬಿಜೆಪಿ ವೈಫಲ್ಯ ಕಾಣುತ್ತಿದೆ. ಹಾಗಾಗಿ, ಚುನಾವಣೆ ಮುಗಿಯೋವರೆಗೆ ಈ ಅಭಿಯಾನವನ್ನು ಕೈಗೊಳ್ಳಲು ಮುಂದಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇದರಿಂದ ಪಕ್ಷಕ್ಕೆ ನೆರವು ದೊರೆಯಲಿದೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ.
ಲಿಂಗಾಯತ ಅಸ್ತ್ರ ಬಳಸಿದ ಬಿಜೆಪಿ
ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ವಿಚಲಿತವಾಗಿರುವಂತೆ ಕಾಣುತ್ತಿರುವ ಬಿಜೆಪಿ, ಈಗ ಲಿಂಗಾಯತ ಅಸ್ತ್ರವನ್ನು ಬಳಸಿದೆ. ಕಾಂಗ್ರೆಸ್ ಲಿಂಗಾಯತ ಮುಖ್ಯಮಂತ್ರಿ ಅವರಿಗೆ ಅವಮಾನ ಮಾಡುತ್ತಿದೆ ಎಂದು ಪ್ರಚಾರ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ತಂಡ ಕಾರ್ಯೋನ್ಮುಖವಾಗಿದೆ. 2018ರಲ್ಲಿ ಲಿಂಗಾಯತರನ್ನು ಕಾಂಗ್ರೆಸ್ ಅನ್ನು ಒಡೆಯುತ್ತಿದೆ ಎಂದು ಆರೋಪಿಸಲಾಗಿತ್ತು.
ಕಾಂಗ್ರೆಸ್ ಕೌಂಟರ್ ಅಟ್ಯಾಕ್
ಬಿಜೆಪಿ ಲಿಂಗಾಯತ ಅಸ್ತ್ರ ಬಳಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಕೌಂಟರ್ ಕೊಡಲು ತಯಾರಿ ನಡೆಸಿದೆ. ಕಾಂಗ್ರೆಸ್ ಅಭಿಯಾನ ಏನೇ ಇದ್ದರೂ ಅದು ಸರ್ಕಾರದ ಹೊರತು, ವ್ಯಕ್ತಿಗತವಲ್ಲ. ಈ ಬಗ್ಗೆ ತಮ್ಮ ಪಕ್ಷದ ಲಿಂಗಾಯತ ನಾಯಕರಿಂದಲೇ ಪ್ರತಿಕ್ರಿಯೆ ಕೊಡಿಸುವ ಪ್ಲ್ಯಾನ್ ಅನ್ನು ಕಾಂಗ್ರೆಸ್ ಮಾಡಿದೆ.
ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಕೇರಳದಲ್ಲಿದ್ದು, ಶೀಘ್ರವೇ ರಾಜ್ಯವನ್ನು ಪ್ರವೇಶಿಸಲಿದೆ. ಹಾಗಾಗಿ, ರಾಜ್ಯದಲ್ಲೂ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈ ಯಾತ್ರೆಯಲ್ಲಿ ಯಾರು ಯಾವೆಲ್ಲ ಜವಾಬ್ದಾರಿ ನಿರ್ವಹಿಸಬೇಕು ಎನ್ನುವ ಟಾಸ್ಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ನಾಯಕರಿಗೆ ಕೊಟ್ಟಿದ್ದಾರೆ. ಏತನ್ಮಧ್ಯೆ, ಯಾತ್ರೆ ಕುರಿತು ಚರ್ಚಿಸಲು ಶನಿವಾರ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಚರ್ಚೆ ನಡೆಯಿಲದೆ. ರಾಜ್ಯದಲ್ಲಿ ಒಟ್ಟು 21 ದಿನಗಳ ಭಾರತ್ ಜೋಡೋ ಯಾತ್ರೆ ನಡೆಯಲಿದೆ.
ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್ ಪ್ರಕರಣ; ಐವರು ಆರೋಪಿಗಳಿಗೆ ಜಾಮೀನು