ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಸಿದ್ಧವಾಗಿದ್ದೇನೆ. ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಸೇರಿ ಯಾರೇ ಬಂದರೂ ಚರ್ಚೆ ಮಾಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಆಗಬೇಕು, ನಾನು ಎಲ್ಲೇ ಇದ್ದರೂ ಚರ್ಚೆಗೆ ಆಹ್ವಾನಿಸಿದರೆ ಬರುತ್ತೇನೆ ಎಂದು ಶಿವಕುಮಾರ್ ಸವಾಲಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಸವಾಲು ಹಾಕಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬಿಜೆಪಿ ಜತೆಗೆ ಚರ್ಚೆಗೆ ಸಿದ್ಧ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನವರಿಗೆ ಸೋನಿಯಾ ಗಾಂಧಿ ಎಂದರೆ ಇರುವ ಭಕ್ತಿ, ರಾಷ್ಟ್ರ ಭಕ್ತಿಯಲ್ಲಿಲ್ಲ. ರಾಶಿ ರಾಶಿ ಹಗರಣ ಇವರುಗಳದ್ದೇ ಇವೆ. ನಾಲ್ಕು ತಲೆಮಾರುಗಳಿಗಾಗುವಷ್ಟು ಆಸ್ತಿ ಮಾಡಿದ್ದೇವೆ, ಗಾಂಧಿ ಕುಟುಂಬದ ಋಣ ತೀರಿಸಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುವ ಮೂಲಕ ಕಾಂಗ್ರೆಸ್ ಭ್ರಷ್ಟರ ಸಂತೆ ಎಂಬ ಸತ್ಯ ಹೇಳಿದ್ದಾರೆ ಎಂದರು.
ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂಬಂತಿವೆ. ಕಾಂಗ್ರೆಸ್ ನಾಯಕರು ಇ.ಡಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರಿಗೆ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ, ಹಾಗಾಗಿ ಬೀದಿ ನಾಟಕ ಮಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು, ಹೋಗುವ ಸಾಲಿನಲ್ಲಿ ಇದ್ದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಜೈಲಿಗೆ ಹೋಗುವ ಸಾಲಿನಲ್ಲಿ ಯಾರು ಇದ್ದಾರೆ ಎಂದರೆ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ನನ್ನ ಬಾಯಿನಲ್ಲಿ ಯಾಕೆ ಹೇಳಿಸುತ್ತೀರಾ? ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ | ನನ್ನನ್ನು, ಸಿದ್ದರಾಮಯ್ಯರನ್ನು ನೆನೆಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರಲ್ಲ: ಡಿಕೆಶಿ ವ್ಯಂಗ್ಯ
ಸಿಎಂ ಆಗುವುದಕ್ಕೂ ಮುನ್ನ ಚುನಾವಣೆ ಆಗಬೇಕು. ಚುನಾವಣೆಯಲ್ಲಿ ಜನ ಒಂದು ಪಕ್ಷಕ್ಕೆ ಮತ ಹಾಕಬೇಕು. ಹೈಕಮಾಂಡ್ ಅಧಿಕೃತ ಮುದ್ರೆ ಹಾಕಿದ ನಂತರ ಸಿಎಂ ಯಾರಾಗುವುದೆಂದು ತಿಳಿಯುತ್ತದೆ. ಆದರೆ ಕಾಂಗ್ರೆಸ್‌ನ ಪರಿಸ್ಥಿತಿ ಕೂಸು ಹುಟ್ಟುವುದಕ್ಕೂ ಮುನ್ನ ಕುಲಾವಿ ಹೊಲಿಸಿದ ಹಾಗಿದೆ. ಸ್ವಾರ್ಥಕ್ಕೆ ಸಿಎಂ ಸ್ಥಾನ ಬಯಸುವವರಿಗೆ ಜನ ಆಶೀರ್ವಾದ ಮಾಡುವುದಿಲ್ಲ. ಸ್ವಾರ್ಥಕ್ಕೆ, ನೀತಿ ಬಿಟ್ಟು, ಜಾತಿ ಬಿಟ್ಟು ರಾಜಕಾರಣ ಮಾಡುವವರನ್ನು ಜನರು ಒಪ್ಪುವುದಿಲ್ಲ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ವಿಧಾನಸೌಧದ ಮುಂದೆ ತಮ್ಮ ಹುಟ್ಟು ಹಬ್ಬದ ಫ್ಲೆಕ್ಸ್ ಹಾಕಿದವರ ಮೇಲೆ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಫ್ಲೆಕ್ಸ್ ಹಾಕಲು ಹೇಳಿಲ್ಲ, ಹಾಕಿದ್ದನ್ನು ನಾನು ಸಮರ್ಥಿಸುವುದಿಲ್ಲ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗಲಿ. ಕಾನೂನು ಸಿದ್ದರಾಮಯ್ಯಗೂ ಒಂದೇ, ಸಿ.ಟಿ. ರವಿಗೂ ಒಂದೇ. ನಾನು ಫ್ಲೆಕ್ಸ್‌ನಲ್ಲಿ ಇರುವವನಲ್ಲ. ಜನರ ಹೃದಯದಲ್ಲಿ ಇರುವವ. ಹಾಗಾಗಿ ಫ್ಲೆಕ್ಸ್ ಹರಿದು ಹಾಕಲಿ ಅಥವಾ ಬೆಂಕಿಯಾದರೂ ಹಚ್ಚಲಿ ಅದರ ಬಗ್ಗೆ ಚಿಂತೆಯಿಲ್ಲ ಎಂದರು.
ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್‌ನವರೇ ವಿರೋಧಿಸಿದ್ದಾರೆ
ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಲ್ಲ. ನಾಯಕತ್ವ ಉಳಿಸಿಕೊಳ್ಳಲು ಅವರು ಕಸರತ್ತು ಮಾಡಬೇಕಿದೆ. ಅದರ ಒಂದು ಭಾಗ ಸಿದ್ದರಾಮೋತ್ಸವ ಅಷ್ಟೆ. ನಾನು ಇನ್ನೂ ಸಬಲ ಎಂದು ಈ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಈಗ ಅವರನ್ನು ಅವರ ಪಕ್ಷದವರೇ ಪ್ರಶ್ನೆ ಮಾಡುತ್ತಾ ಇದ್ದಾರೆ ಎಂದರೆ ಹೇಗೆ ಪ್ರಶ್ನಾತೀತ ನಾಯಕರಾಗುತ್ತಾರೆ? ಎಂದರು.
ನೂತನ ರಾಷ್ಟ್ರಪತಿಗಳ ಪದಗ್ರಹಣ ಕಾರ್ಯಕ್ರಮಕ್ಕಾಗಿ ಸಿಎಂ ದೆಹಲಿ ಹೋಗಿದ್ದಾರೆ. ಬಹಳಷ್ಟು ಜನ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಇವರು ಸ್ವಾಭಾವಿಕವಾಗಿ ಮತ್ತೆ ಸಂಪುಟ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಸಿಎಂ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಟಿಕೆಟ್ ಬಗ್ಗೆ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ
ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿಲ್ಲ ಎಂದ ಸಿ.ಟಿ. ರವಿ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದ್ದಾರೆ ಅಷ್ಟೆ. ಬಿಜೆಪಿ ಕಟ್ಟಿದವರಲ್ಲಿ ಯಡಿಯೂರಪ್ಪ ಪ್ರಮುಖರು. ಅವರು ಮಾಸ್ ಲೀಡರ್, ನಾಲ್ಕು ಬಾರಿ ಸಿಎಂ ಆಗಿದ್ದವರು. ಟಿಕೆಟ್ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತದೆ. ಎಂಎಲ್ಎ ಅಷ್ಟೇ ಅಲ್ಲ, ಪ್ರಧಾನಮಂತ್ರಿ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುವುದನ್ನೂ ಸಂಸದೀಯ ಮಂಡಳಿಯೇ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ | ಎಂಟೊಂಬತ್ತು ತಿಂಗಳಲ್ಲಿ ಬಿಜೆಪಿ ಬಾವುಟ ಇಳಿಯುತ್ತೆ, ಕಾಂಗ್ರೆಸ್ ಬಾವುಟ ಏರುತ್ತೆ: ಡಿ.ಕೆ.ಶಿವಕುಮಾರ್