ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress Karnataka) ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲದೇ ಇರುವುದು ಹೈಕಮಾಂಡ್‌ಗೆ ತಲೆನೋವು ತಂದಿಟ್ಟಿದೆ. ಅಲ್ಲದೆ, ಈಚೆಗೆ ಡಿನ್ನರ್ ಮೀಟಿಂಗ್ (Dinner Meeting), ಡಿಸಿಎಂ ಹುದ್ದೆ ಸೃಷ್ಟಿಗೆ (Creation of Deputy CM post) ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎಂ ಆಪ್ತ ಸಮೂಹದ ತಂಡವು ಮುಂದಿಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ದಲಿತ ಹಾಗೂ ಸಿಎಂ ಆಪ್ತ ಸಚಿವರ ಅಹವಾಲನ್ನು ಹೈಕಮಾಂಡ್ ಆಲಿಸಿದೆ. ಸೋಮವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಅಸಮಾಧಾನಿತ ಸಚಿವರ ತಂಡದ ಸಚಿವರ ಜತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂಬ ಬೇಡಿಕೆ ಇಟ್ಟಿರುವ ಈ ಗುಂಪು, ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಎಂ.ಬಿ. ಪಾಟೀಲ್ ಜತೆಗೆ ಸುರ್ಜೇವಾಲ ಸಭೆ ನಡೆಸಿ ಅಸಮಾಧಾನ ತಣಿಸಲು ಯತ್ನಿಸಿದ್ದಾರೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ್ದ ಕೆಲವು ಅಸಮಧಾನಿತ ಸಚಿವರು, ಸುರ್ಜೇವಾಲರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಸಮಯವನ್ನೂ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಡಿಸಿಎಂ ಹುದ್ದೆ ಸೃಷ್ಟಿಗೆ ಸಚಿವರ ಪಟ್ಟು
ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಮುದಾಯವಾರು ಡಿಸಿಎಂ ಹುದ್ದೆ ನೀಡಬೇಕು ಎಂದು ದಲಿತ ಹಾಗೂ ಸಿಎಂ ಆಪ್ತ ಸಚಿವರು ಈ ವೇಳೆ ಪಟ್ಟು ಹಿಡಿದು ಕುಳಿತರು ಎನ್ನಲಾಗಿದೆ. ವಿಧಾನಸಭೆಯಲ್ಲಿ ಪಕ್ಷದ ಪರವಾಗಿ ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಮತಗಳು ಬಂದಿವೆ. ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಹೊರ ರಾಜ್ಯಗಳಲ್ಲಿ ಬಿಜೆಪಿ ಡಿಸಿಎಂ ಹುದ್ದೆಗಳ ಸೃಷ್ಟಿ ಮೂಲಕ ಸಮುದಾಯಗಳನ್ನು ವಿಶ್ವಾಸ ಪಡೆಯಲು ಮುಂದಾಗಿದೆ. ಹಾಗಾಗಿ ಡಿಸಿಎಂ ಹುದ್ದೆ ನೀಡಿ ಪಕ್ಷದ ಪರ ನಿಂತ ಸಮುದಾಯಗಳನ್ನು ಪರಿಗಣಿಸಿದ್ದೇವೆ ಎಂಬ ಸಂದೇಶ ನೀಡಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆದ್ದರಿಂದ ದಲಿತ, ಲಿಂಗಾಯತ, ಅಲ್ಪಸಂಖ್ಯಾತರನ್ನು ಪಕ್ಷ ಪರಿಗಣಿಸಬೇಕು ಎಂಬ ಎಂಬ ಬೇಡಿಕಯನ್ನು ಈ ತಂಡ ಈ ವೇಳೆ ಮುಂದಿಟ್ಟಿದೆ ಎನ್ನಲಾಗಿದೆ.
ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ಸಚಿವರು!
ಸಮುದಾಯವಾರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿರುವ ಸಚಿವರು, ಕೊನೆಯಲ್ಲಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆಯೂ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನಾವು ಅಭಿಪ್ರಾಯವನ್ನು ಹೇಳಿದ್ದೇವೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮಾಡಬೇಕು. ಒಂದು ವೇಳೆ ಲೋಕಸಭೆಯಲ್ಲಿ ಹಿನ್ನಡೆಯಾದರೆ ನಮ್ಮನ್ನು ದೂರಬೇಡಿ ಎಂದು ಸಚಿವರು ಹೇಳಿದರು.
ಹೈಕಮಾಂಡ್ ಗಮನಕ್ಕೆ ತರುವುದಾಗಿ ಸುರ್ಜೇವಾಲ ತೀರ್ಮಾನ
ಡಿಸಿಎಂ ಹುದ್ದೆ ಒಂದೇ ಇರಬೇಕು ಎಂದು ಡಿ.ಕೆ ಶಿವಕುಮಾರ್ ಪ್ರತಿಪಾದನೆ ಮಾಡಿದ್ದಾರೆ. ಆದರೆ, ನಿಮ್ಮ ಅಭಿಪ್ರಾಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಗಮನಕ್ಕೆ ತರುತ್ತೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆಗೆ ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ
ಸಭೆಯಲ್ಲಿ ಮುಂದಿನ ಲೋಕಸಭೆಗೆ 11 ಸಚಿವರ ಸ್ಪರ್ಧೆ ಬಗ್ಗೆಯೂ ಮಾತುಕತೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಈ ಸಚಿವರಿಂದ ಸುರ್ಜೆವಾಲಾ ಅಭಿಪ್ರಾಯ ಪಡೆದಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಸ್ಪರ್ಧೆಗೆ ಸಚಿವರ ಹಿಂದೇಟು
ನಾವು ಸ್ಪರ್ಧೆಗೆ ರೆಡಿಯಿಲ್ಲ, ನಾವು ಹೇಳಿದವರಿಗೆ ಟಿಕೆಟ್ ಕೊಡಿ. ನೀವು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ಆದರೆ ಅಭ್ಯರ್ಥಿಗಳನ್ನು ಬೇಗ ಘೋಷಣೆ ಮಾಡಬೇಕು. ನಮಗೆ ಗೆಲ್ಲಬೇಕಾದರೆ ಕನಿಷ್ಠ ಮೂರು ತಿಂಗಳಾದರೂ ಸಮಯಾವಕಾಶ ಬೇಕು ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ಬಹುತೇಕ ಜನವರಿ 11ರಂದು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ: ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಭೆಯ ಪ್ರತಿಫಲ ಸಿಗೋದು ಸ್ವಲ್ಪ ಸಮಯ ಆಗುತ್ತದೆ. ನಾವು ಅವರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಎಂಪಿ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ. ಟಿಕೆಟ್‌ಗೆ ಒಂದಿಷ್ಟು ಮಾನದಂಡ ಕೊಡುವ ಬಗ್ಗೆ ಮಾತನಾಡಿದ್ದೇವೆ. ಡಿಸಿಎಂ ವಿಚಾರ ಕೂಡ ಚರ್ಚೆ ಆಗಿದೆ. ಪ್ರಬಲ ಜಾತಿ ಸಮುದಾಯಗಳಿಗೂ ಡಿಸಿಎಂ ಕೊಡಬೇಕು ಅಂತ ಒತ್ತಾಯ ಮಾಡಿದ್ದೇವೆ. ಎಷ್ಟು ಡಿಸಿಎಂ ಅನ್ನೋದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ.
ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿ ಇದ್ದೇ ಇರ್ತಾರೆ. ಉಳಿದ ಸಮುದಾಯವಾರು ಮಾಡಿ ಅಂಥ ನಾವು ಹೇಳುತ್ತಲಿದ್ದೇವೆ. ಅವರನ್ನು ಡಿಸ್ಟರ್ಬ್ ಮಾಡೋಕೆ ನಾವು ಹೋಗಲ್ಲ. ಯಾವುದೇ ನಿರ್ಧಾರವೂ ಹೈಕಮಾಂಡ್‌ಗೆ ಬಿಟ್ಟಿದ್ದಾಗಿದೆ. ನಾವು ಇಟ್ಟ ಬೇಡಿಕೆಗೆ ಅವರು ಸ್ಪಂದಿಸುವ ಭರವಸೆ ಇದೆ. ಇದು ಡಿಮ್ಯಾಂಡ್ ಕೂಡ ಹೌದು, ಮನವಿ ಕೂಡ ಹೌದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: KARAVE protest : ಜೈಲಿಂದ ಬಿಡುಗಡೆ ಬೆನ್ನಲ್ಲೇ ಕರವೇ ನಾರಾಯಣ ಗೌಡ ಮತ್ತೆ ಅರೆಸ್ಟ್
ಸಚಿವರ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಸಚಿವರ ಸ್ಪರ್ಧೆ ಬಗ್ಗೆ ಜನವರಿ 11ರಂದು ಸ್ಪಷ್ಟ ಚಿತ್ರಣ ಸಿಗಬಹುದು. ನಾನು ಸ್ಪರ್ಧೆ ಮಾಡಲ್ಲ ಅಂದಿದ್ದೇನೆ. ನಾನು ಈಗ ಇಲ್ಲಿ ಸಚಿವನಾಗಿದ್ದೇನೆ. ಕೆಲಸ ಮಾಡಬೇಕಾಗುತ್ತದೆ. ಎಂ.ಬಿ. ಪಾಟೀಲ್ ನಾವು ಜತೆಯಲ್ಲೇ ಇದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.