ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಐದು ಭಾಗವನ್ನಾಗಿ ವಿಭಜಿಸಿ, ಐದೂ ಭಾಗಕ್ಕೆ ಒಬ್ಬೊಬ್ಬರು ಆಯುಕ್ತರನ್ನು (Municipal Commissioner) ನೇಮಕ ಮಾಡುವ ಚಿಂತನೆಯಲ್ಲಿ ರಾಜ್ಯ ಕಾಂಗ್ರೆಸ್ (Congress Karnataka) ಇದೆ. ಇದಿನ್ನೂ ಚಿಂತನಾ ಹಂತದಲ್ಲಿದೆ. ಇದಕ್ಕಿಂತ ಮೊದಲು ಈಗ ಕರ್ನಾಟಕ ಕಾಂಗ್ರೆಸ್ ತನ್ನ ಬೆಂಗಳೂರು ಜಿಲ್ಲಾ ಘಟಕವನ್ನು 5 ಭಾಗಗಳಾಗಿ ವಿಂಗಡಿಸಿ, ಐದೂ ಭಾಗಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಬಾವುಟ ನೀಡುವ ಮೂಲಕ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಪಶ್ಚಿಮ ಕಾಂಗ್ರೆಸ್, ಬೆಂಗಳೂರು ಪೂರ್ವ ಕಾಂಗ್ರೆಸ್, ಬೆಂಗಳೂರು ಉತ್ತರ ಕಾಂಗ್ರೆಸ್, ಬೆಂಗಳೂರು ಕೇಂದ್ರ ಕಾಂಗ್ರೆಸ್, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಐದು ಭಾಗಗಳಿವೆ. ಈ ವಿಭಾಗಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ : ಪೆಟ್ರೋಲ್ ಬೆಲೆ ಇಳಿಕೆ, ಉಚಿತ ಅಯೋಧ್ಯೆ ಯಾತ್ರೆ; ತೆಲಂಗಾಣದಲ್ಲಿ ಬಿಜೆಪಿ ‘ಪ್ರಣಾಳಿಕೆ’ ಅಸ್ತ್ರ
ಬೆಂಗಳೂರು ಪಶ್ಚಿಮ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ವಾಜಿದ್, ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆ.ವಿ. ಗೌತಮ್, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಓ. ಮಂಜುನಾಥ್ ಹಾಗೂ ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಉದಯ ಕುಮಾರ್ ಅವರು ನೇಮಕಗೊಂಡಿದ್ದಾರೆ. ಇವರು ಸಿಎಂ ಸಿದ್ದರಾಮಯ್ಯ (CM Siddaramaiah), ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಇವರಲ್ಲಿ ಉದಯಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಲಿಲ್ಲ ಎಂದು ತಿಳಿಸಲಾಗಿದೆ.
ಲೋಕಸಭೆ ಚುನಾವಣೆ ತಂತ್ರಗಾರಿಕೆಯ ಭಾಗ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿನ 28 ಕ್ಷೇತ್ರಗಳಲ್ಲಿ ಶತಾಯಗತಾಯ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ಅನೇಕ ಕಸರತ್ತುಗಳನ್ನು ನಡೆಸುತ್ತಾ ಬಂದಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಆ ದಿಕ್ಕಿನಲ್ಲಿ ತಂತ್ರಗಾರಿಕೆಯನ್ನೂ ಶುರು ಮಾಡಿದ್ದಾರೆ.
ಇನ್ನು ಮತ್ತೊಂದು ಮಹತ್ವದ ವಿಚಾರವೆಂದರೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಐದು ಭಾಗಗಳಾಗಿ ವಿಂಗಡಣೆ ಮಾಡಿ ಎಲ್ಲ ಪಾಲಿಕೆಗೆ ಒಬ್ಬೊಬ್ಬ ಆಯುಕ್ತರನ್ನು ನೇಮಕ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಚಿಂತನೆಯಲ್ಲಿ ಕಾಂಗ್ರೆಸ್ ಸರ್ಕಾರ ಇದೆ.
ಕಾರಣ, ಬಿಬಿಎಂಪಿ ವಿಭಜನೆಗೆ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸಮಿತಿ ಈಗಾಗಲೇ ಒಂದು ಸುತ್ತಿನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಯಾಗಿದೆ. ಆ ವರದಿಗೆ ಪುನರ್ಜನ್ಮ ನೀಡುವುದು ಡಿ.ಕೆ. ಶಿವಕುಮಾರ್ ಪ್ಲ್ಯಾನ್ ಆಗಿದೆ. ಬಿಬಿಎಂಪಿಯನ್ನು ನಾಲ್ಕು ಅಥವಾ ಐದು ಭಾಗಗಳಾಗಿ ವಿಂಗಡಿಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದಕ್ಕೆ ಸಾಕಷ್ಟು ವಿರೋಧಗಳು ಕಂಡು ಬರುತ್ತಿವೆ. ಸದ್ಯಕ್ಕೆ ಈ ವಿಚಾರ ಮುನ್ನಲೆಯಲ್ಲಿ ಇಲ್ಲ. ಇದರ ಹೊರತಾಗಿ ಪಕ್ಷದಲ್ಲಿ ಈ ಪ್ರಯೋಗವನ್ನು ಮಾಡಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಇದನ್ನೂ ಓದಿ: HDK Vs Siddaramaiah : ನೀವು ಸಿಎಮ್ಮಾ, ಟೆಲಿಫೋನ್ ಆಪರೇಟರಾ? ; ಸಿಎಂಗೆ HDK ಪ್ರಹಾರ
ವಿಭಜನೆಗೆ ಏನು ಕಾರಣ?
ಹೀಗೆ ಬೆಂಗಳೂರು ಜಿಲ್ಲೆಯನ್ನು ಐದು ಭಾಗಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಒಬ್ಬೊಬ್ಬರು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದರೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೆಚ್ಚಿನ ಬಲ ಬರುತ್ತದೆ. ಅಧ್ಯಕ್ಷರಾದವರ ಸಹಿತ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಲಿದೆ. ಪಕ್ಷ ತಮ್ಮನ್ನು ಗುರುತಿಸುತ್ತದೆ ಎಂಬ ಮನೋಭಾವ ಅವರಲ್ಲಿ ಮೂಡಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಾರೆ. ಇದರಿಂದ ಲೋಕಸಭಾ ಚುನಾವಣೆ ಸಹಿತ ಮುಂದಿನ ಎಲ್ಲ ಚುನಾವಣೆಗೂ ಸಹಕಾರವಾಗಲಿದೆ. ಇನ್ನು ಅಧಿಕಾರ ವಿಕೇಂದ್ರೀಕರಣ ಮಾಡುವುದರಿಂದ ಕಾರ್ಯಕರ್ತರಿಗೆ ಪಕ್ಷದಲ್ಲಿ ಹಚ್ಚಿನ ಅವಕಾಶವನ್ನು ಕೊಡಲಾಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ ಎಂಬ ನಿಟ್ಟಿನಲ್ಲಿ ಹೀಗೆ ಮಾಡಲಾಗಿದೆ ಎನ್ನಲಾಗಿದೆ.