ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress Karnataka) ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರೂ ಆಂತರಿಕ ಭಿನ್ನಮತ ಶಮನವಾಗಿಲ್ಲ. ಈ ಮೊದಲು ಸರ್ಕಾರದಲ್ಲಿ ವರ್ಗಾವಣೆ ದಂಧೆ (Transfer racket) ನಡೆಯುತ್ತಿದೆ. ಉಸ್ತುವಾರಿ ಸಚಿವರು ತಮ್ಮನ್ನು ಪರಿಗಣಿಸುತ್ತಲೇ ಇಲ್ಲ ಎಂದು ಪತ್ರ ಬರೆದು ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದ್ದ ಆಳಂದ ಶಾಸಕ ಬಿ.ಆರ್. ಪಾಟೀಲ್ (MLA BR Patil), ಈಗ ಮತ್ತೊಂದು ಪತ್ರ ಬರೆದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಈ ಸಂಬಂಧ ಚರ್ಚೆ ನಡೆಸಲು ಬಿ.ಆರ್. ಪಾಟೀಲ್‌ಗೆ ಕರೆ ಮಾಡಿ ಸೂಚಿಸಿದ್ದಾರೆ. ಇಂದು ಸಂಜೆ ಅವರ ಜತೆ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ. ಸಚಿವರ ವಿರುದ್ಧ ಪತ್ರ ಬರೆದಿದ್ದ ಬಿ.ಆರ್. ಪಾಟೀಲ್, ಸಚಿವರಾದ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಕೃಷ್ಣ ಬೈರೇಗೌಡ (Revenue Minister Krishna ByreGowda) ಅವರ ವಿರುದ್ಧ ತಮ್ಮ ಮುನಿಸನ್ನು ಹೊರಹಾಕಿದ್ದರು.
2013ರಲ್ಲಿ ನೀಡಲಾಗಿದ್ದ ಕಾಮಗಾರಿಗಳ ಸಂಬಂಧ ಕಳೆದ ಸದನದಲ್ಲಿ ಗಮನ ಸೆಳೆದರೆ ತಮ್ಮನ್ನೇ ಅಪರಾಧಿ ಎಂಬಂತೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದರು. ಇದು ನನಗೆ ನೋವು ತಂದಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಕೂಡಲೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಆರ್. ಪಾಟೀಲ್ ಪತ್ರ ಬರೆದು ಆರೋಪಿಸಿದ್ದರು. ಲೋಕಸಭಾ ಚುನಾವಣೆ ಸೇರಿದಂತೆ ಇನ್ನಿತರ ಕಾರಣಗಳಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಇದನ್ನೂ ಓದಿ: FDA SDA Recruitment : ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅರ್ಜಿ ಯಾವಾಗ? ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳು!
ಈ ಸಂಬಂಧ ಕೂಡಲೇ ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿ ಎಂದು ಬಿ.ಆರ್. ಪಾಟೀಲ್‌ಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿದ್ದ ಬಿ.ಆರ್. ಪಾಟೀಲ್ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಸಂಜೆ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಬಿ.ಆರ್. ಪಾಟೀಲ್ ಅವರು ಸಿಎಂ ಜತೆ ಚರ್ಚೆ ನಡೆಸಲಿದ್ದಾರೆ.
ಬಿ.ಆರ್. ಪಾಟೀಲ್ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿ.ಆರ್. ಪಾಟೀಲ್ ಜತೆ ಮಾತನಾಡಿದ್ದೇನೆ. ಅವರು ಮಂಗಳವಾರ ಫೋನ್‌ಗೆ ಸಿಕ್ಕಿರಲಿಲ್ಲ. ಇವತ್ತು ಬೆಳಗ್ಗೆ ಅವರ ಜತೆ ಮಾತನಾಡಿದ್ದೇನೆ. ಬಾ ಅಂತ ಹೇಳಿದ್ದೇನೆ. ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಾನು ಬಿ.ಆರ್. ಪಾಟೀಲ್ ತಪ್ಪಿತಸ್ಥರೆಂದು ಹೇಳೇ ಇಲ್ಲ: ಕೃಷ್ಣ ಬೈರೇಗೌಡ
ಬಿ.ಆರ್ ಪಾಟೀಲ್ ಪತ್ರದ ವಿಚಾರವಾಗಿ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಾನು ಬಿ.ಆರ್. ಪಾಟೀಲ್ ಅವರು ತಪ್ಪಿತಸ್ಥರು ಎಂಬಂತೆ ಸದನದಲ್ಲಿ ಮಾತನಾಡಲೇ ಇಲ್ಲ. ನಾನು ಮಾತನಾಡಿರುವ ದಾಖಲೆ ಕೂಡ ಇದೆ. ಇದನ್ನು ಯಾರು ಬೇಕಾದರೂ ಪರಿಶೀಲನೆ ಮಾಡಬಹುದು ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ನಾನು ವಿಧಾನ ಸಭೆಯಲ್ಲಿ ಮಾತನಾಡಿದ ವಿಚಾರ ಸಾರ್ವಜನಿಕವಾಗಿದೆ. ಅದು ದಾಖಲೆಯಲ್ಲಿದೆ. ಯಾರಾದರೂ ಅದನ್ನು ಪರಾಮರ್ಶಿಸಲು ನಾನು ಸ್ವಾಗತಿಸುತ್ತೇನೆ. ನಾನು ಅಂತಹ ಹೇಳಿಕೆ ಅಥವಾ ತೀರ್ಮಾನವನ್ನು ಮಾಡಿಲ್ಲ. ಅವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿ.ಆರ್. ಪಾಟೀಲರು ಸ್ವಲ್ಪ ಎಮೋಷನಲ್ ಆಗಿ ಬಿಡ್ತಾರೆ: ಪ್ರಿಯಾಂಕ್ ಖರ್ಗೆ
ಈ ಬಗ್ಗೆ ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ಕೃಷ್ಣ ಬೈರೇಗೌಡರು ಆ ರೀತಿ ಹೇಳಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಆರ್‌ಐಡಿಎಲ್ ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಿಸುತ್ತೇವೆ. ನಾಲ್ಕು ದಿನದ ಹಿಂದೆಯೇ ನಾನು ಶಾಸಕ ಬಿ.ಆರ್. ಪಾಟೀಲ್ ಜತೆಗೂ ಮಾತನಾಡಿದ್ದೇನೆ. ನಾಗಮೋಹನ್ ದಾಸ್ ಕಮಿಟಿ ನೇತೃತ್ವದಲ್ಲಿ ತನಿಖೆಗೆ ಕೊಡೋಣ ಸರ್ ಅಂತಾ ಅವರಿಗೂ ಹೇಳಿದ್ದೆ. ಆಗ ಅವರು ಕೂಡ ಆಯ್ತು ಅಂತ ಹೇಳಿದ್ದರು. ರಿಪೋರ್ಟ್ ಕೂಡ ರೆಡಿ ಇದೆ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಸಭೆ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂದ ಮಾಡಿಲ್ಲವೆಂದು ಪತ್ರದಲ್ಲಿ ಹೇಳಿದ್ದಾರೆ. ಅವರು ಸ್ವಲ್ಪ ಸ್ವಾಭಿಮಾನಿ ವ್ಯಕ್ತಿ, ಅವರಿಗೆ ಯಾರಾದರೂ ಏನಾದರೂ ಅಂದರೆ ಸ್ವಲ್ಪ ಎಮೋಷನಲ್ ಆಗಿ ಬಿಡುತ್ತಾರೆ. ಅವರು ಹೇಳಿರೋದು ಸರ್ಕಾರದ ಒಳಿತಿಗಾಗಿಯಾಗಿದೆ. ನಾನು ಕೂಡ ಸಿಎಂ ಜತೆ ಮಾತನಾಡಿದ್ದೇನೆ. ಆದಷ್ಟು ಬೇಗ ತನಿಖೆಗೆ ಕೊಡುವ ನಿರ್ಣಯ ಮಾಡುತ್ತೇವೆ. ಅವರ ಪ್ರಾಮಾಣಿಕತೆ ಬಗ್ಗೆ ಯಾರೂ ಪ್ರಶ್ನೆ ಎತ್ತಿಲ್ಲ. ತಪ್ಪು ಗ್ರಹಿಕೆಯಿಂದ ಸ್ವಲ್ಪ ಸಮಸ್ಯೆ ಆಗಿದೆ ಅಷ್ಟೇ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. 40-50 ವರ್ಷಗಳ ಅವರ ರಾಜಕೀಯ ಜೀವನದ ಬಗ್ಗೆ ಇದುವರೆಗೂ ಯಾರೂ ಬೊಟ್ಡು ಮಾಡಿ ತೋರಿಸಿಲ್ಲ. ಅವರ ನೆರಳಲ್ಲೇ ನಾನು, ಶರಣ ಪ್ರಕಾಶ್ ಪಾಟೀಲ್ ಬೆಳೆದು ಬಂದಿದ್ದು, ಅವರ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತೇವೆ. ಏನೇ ಇದ್ದರೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ. ಸದನದಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶ ಇದೆ. ಸದನದಲ್ಲಿ ಯಾರಿಗೂ ಯಾವುದೇ ನಿರ್ಬಂಧ ಹಾಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನನಗೆ ಗೊತ್ತೇ ಇಲ್ಲವೆಂದ ಡಿಕೆಶಿ
ಬಿ.ಆರ್. ಪಾಟೀಲ್ ಪತ್ರದ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಈಗ ಮಾಧ್ಯಮದವರು ಕೇಳಿದ ಮೇಲೆಯೇ ಗೊತ್ತಾಗಿದ್ದು ಎಂಬ ಉತ್ತರ ಕೊಟ್ಟಿದ್ದಾರೆ. ಮಾಹಿತಿ ಗೊತ್ತಿಲ್ಲದೆ ಮಾತನಾಡೋಕೆ ಹೋಗಲ್ಲ. ಅವರು ಹೇಳಿರಬಹುದು, ಸಂಬಂಧಪಟ್ಟ ಮಂತ್ರಿಗಳ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Weather : ದಕ್ಷಿಣ – ಉತ್ತರ ಒಳನಾಡಲ್ಲಿ ಇಂದು ಭಾರಿ ಮಳೆ; ಬೆಂಗಳೂರಲ್ಲಿ ಭಾಗಶಃ ಕಣ್ಮರೆ!
ಪತ್ರ ಬರೆದಿದ್ದಕ್ಕೆ ಪ್ರಶಂಸಿಸಬೇಕು: ಎಂ.ಬಿ. ಪಾಟೀಲ್
ಈ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಬಿ.ಆರ್. ಪಾಟೀಲ್ ಹಿರಿಯರು ನಮಗೆಲ್ಲ ಮಾರ್ಗದರ್ಶಕರು. ಅವರು ರಾಜೀನಾಮೆ ಪ್ರಶ್ನೆ ಬರಲ್ಲ. ಪ್ರಕರಣದ ತನಿಖೆ ಮಾಡಿಸುವ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಗಮನಹರಿಸುತ್ತಾರೆ. ಅಲ್ಲದೆ, ಅವರು ಪತ್ರ ಬರೆದರೆ ತಪ್ಪೇನಿದೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳು ಆಪಾದನೆ ಮಾಡಿದ್ದಾರೆ ಎಂಬ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪತ್ರ ಬರೆದು ಉನ್ನತ ಮಟ್ಟದ ನೈತಿಕತೆ ಮೆರೆದಿದ್ದಾರೆ. ಪತ್ರ ಬರೆದಿದ್ದಕ್ಕೆ ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.