Site icon Vistara News

Congress Karnataka : ಸಂಪುಟ ಪುನಾರಚನೆ ಬಗ್ಗೆ ಸಿದ್ದರಾಮಯ್ಯ ಮಾತು; ಕೈ ಪಾಳೆಯಕ್ಕೆ ತಲೆ ನೋವಾದ ಡಿನ್ನರ್‌ ಪಾಲಿಟಿಕ್ಸ್‌!

DCM DK Shivakumar and CM Siddaramaiah

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಬರುತ್ತಿದೆ. 135 ಸ್ಥಾನ ಪಡೆದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ತೃಪ್ತಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. 50:50 ಅನುಪಾತದಲ್ಲಿ ಸಿಎಂ ಗಾದಿಯನ್ನು ಸಿದ್ದರಾಮಯ್ಯ (CM Siddaramaiah) ಹಾಗೂ ಡಿ.ಕೆ. ಶಿವಕುಮಾರ್‌ಗೆ (DCM DK Shivakumar) ಹಂಚಿಕೆಯಾಗಿದೆ ಎಂಬ ವಿಚಾರ ಮೊದಲ ದಿನದಿಂದ ಇಲ್ಲಿಯವರೆಗೂ ಸದ್ದು ಮಾಡುತ್ತಲೇ ಬಂದಿದೆ. ಈ ನಡುವೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಅವರ ಬೆಂಬಲಿಗರು ಆಗಾಗ ನೀಡುತ್ತಿರುವ ಹೇಳಿಕೆಗೆ ಟಕ್ಕರ್‌ ಕೊಡುವ ನಿಟ್ಟಿನಲ್ಲಿ ಇನ್ನೊಂದು ಬಣದಿಂದ ಡಿನ್ನರ್‌ ಪಾಲಿಟಿಕ್ಸ್‌ (Dinner Politics) ಬೇರೆ ಶುರುವಾಗಿದೆ. ಆದರೆ, ಇದು ಬರೀ ಊಟವಷ್ಟೇ ಮತ್ತೇನೂ ಇಲ್ಲ ಎಂದು ಕಾಂಗ್ರೆಸ್‌ ಸಚಿವರೂ ಸೇರಿದಂತೆ ಹಲವು ನಾಯಕರು ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಮತ್ತೆ ಕೆಲವು ಸಚಿವರು ಸಿಎಂ ಬದಲಾವಣೆ ಆಗುವುದೇ ಇಲ್ಲ ಎಂದು ಹೇಳಿದ್ದಾರೆ. ಇನ್ನು 30 ತಿಂಗಳ ಬಳಿಕ ಸಚಿವ ಸಂಪುಟ ಪುನಾರಚನೆ (Cabinet reshuffle) ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಷ್ಟೇ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕರು 30 ತಿಂಗಳ ನಂತರ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಬೇಕೆಂದು ಎಲ್ಲ ಶಾಸಕರು ಹೇಳಿದ್ದಾರೆಯೇ? ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಉತ್ತರ ನೀಡಿದ್ದಾರೆ. ಈ ಮೂಲಕ ವರಿಷ್ಠರು ಇದರ ಸಂಪೂರ್ಣ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Caste Census Report : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸ್ವೀಕರಿಸುವೆನೆಂದ ಸಿದ್ದರಾಮಯ್ಯ; ಎಚ್‌ಡಿಕೆ ವಿರುದ್ಧ ವಾಗ್ದಾಳಿ

ನಮ್‌ ಅಧ್ಯಕ್ಷರು ಹೇಳಿದ್ದನ್ನು ನಾವು ಕೇಳಬೇಕು: ಲಕ್ಷ್ಮಿ ಹೆಬ್ಬಾಳ್ಕರ್‌

ಹಾವೇರಿ ಜಿಲ್ಲೆಯ ಹಾನಗಲ್‌ನ ಸಾಂವಸಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪಕ್ಷದ ಆಂತರಿಕ ವಿಷಯದ ಬಗ್ಗೆ ಬಹಿರಂಗವಾಗಿ ಯಾರೂ ಮಾತನಾಡಬಾರದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದರ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಅಧ್ಯಕ್ಷರ ಅಪ್ಪಣೆ ಏನಿದೆಯೋ ಅದನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಅವರು ನಮ್ಮ ಪಕ್ಷದ ಅಧ್ಯಕ್ಷರು. ಅಧ್ಯಕ್ಷರು ಏನು ಅಪ್ಪಣೆ ಮಾಡಿದ್ದಾರೋ ಅದರಂತೆ ನಡಕೊಳ್ಳುತ್ತೇವೆ ಎಂದು ಹೇಳಿದರು.

ಸಿಎಂ ಖುರ್ಚಿ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಯಾರೇ ಮುಖ್ಯಮಂತ್ರಿಯಾದರೂ ನಾವು ಕೆಲಸ ಮಾಡುತ್ತೇವೆ. ಯಾರೇ ಸಿಎಂ ಆಗಲಿ ನಮಗೆ ಅಭ್ಯಂತರ ಇಲ್ಲ. ಸಿದ್ದರಾಮಯ್ಯ ಸಾಹೇಬರು ಒಳ್ಳೆಯ ಕೆಲಸ‌ ಮಾಡಿಕೊಂಡು ಹೋಗುತ್ತಾ ಇದ್ದಾರೆ. ಹೈಕಮಾಂಡ್ ತೀರ್ಮಾನ ಏನಿದಿಯೋ ಅದಕ್ಕೆ 136 ಜನರು ಬದ್ಧರಾಗಿದ್ದೇವೆ. ಈ ಬಗ್ಗೆ ಏನೂ ಮಾತನಾಡದಂತೆ ನಮ್ಮ ಅಧ್ಯಕ್ಷರು ಕಟ್ಟಪ್ಪಣೆ ಮಾಡಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾನು ಶಿಸ್ತಿನ ಸಿಪಾಯಿಯಂತೆ ಇರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಡಿಕೆಶಿ ಸಿಎಂ ಆಗುವುದರ ಬಗ್ಗೆ ನನಗೆ ಗೊತ್ತಿಲ್ಲ: ಸತೀಶ್‌ ಜಾರಕಿಹೊಳಿ

ಕೊಪ್ಪಳದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿ, ಗೃಹ ಸಚಿವರ ಮನೆಯಲ್ಲಿ ನಡೆದಿರುವುದು ಬರಿ ಊಟದ ಕಾರ್ಯಕ್ರಮ ಅಷ್ಟೇ. ರಾಜಕೀಯದ ಬಗ್ಗೆ ಏನೂ ಚರ್ಚೆಯಾಗಿಲ್ಲ. ಬೇರೆ ಚರ್ಚೆ ಮಾಡಲು ಪಕ್ಷದ ಕಚೇರಿ ಇದೆ. ಖಾಸಗಿಯಾಗಿ ಕೂಡಿದಂತ ಕಾರ್ಯಕ್ರಮ ಅದಾಗಿದೆ. ಪಕ್ಷಕ್ಕೆ ಡ್ಯಾಮೇಜ್‌ ಮಾಡುವಂತಹ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.

ನಾನು ಮಾಜಿ ಶಾಸಕರನ್ನು ದುಬೈಗೆ ಕರೆದುಕೊಂಡು ಹೋಗುತ್ತೇನೆ. ಹಾಲಿ ಶಾಸಕರು ಅಂದರೆ ಅದು ಬೇರೆ ಅರ್ಥ ಬರುತ್ತದೆ. ಮೊದಲಿನಿಂದಲೂ ಈ ರೀತಿ ನಾನು ಪ್ರವಾಸ ಮಾಡುತ್ತೇನೆ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದರು.

ಎರಡೂವರೆ ವರ್ಷದ ನಂತರ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ, ಈ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡಬೇಕು. ನನಗೆ ಅದರ ಬಗ್ಗೆ ಗೊತ್ತಿಲ್ಲ. ಸರ್ಕಾರ ಸುಭದ್ರ ಇದ್ದೇ ಇರುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸಿಎಂ ಬದಲಾವಣೆ ಆಗಲ್ಲ: ಆರ್‌.ಬಿ. ತಿಮ್ಮಾಪುರ

ಸಿಎಂ ಬದಲಾವಣೆ ಬಗ್ಗೆ ಶಾಸಕ ರವಿ ಗಾಣಿಗ ನೀಡಿರುವ ಹೇಳಿ ಬಗ್ಗೆ ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಅದು ಶಾಸಕ ರವಿ ಗಾಣಿಗ ಅವರೊಬ್ಬರ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ಆ ರೀತಿ ಅಭಿಪ್ರಾಯ ಇಲ್ಲ. ನಮಗೆ ಹೈಕಮಾಂಡ್ ಇದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಲ್ಲಿ ನಡೆಯುತ್ತದೆ. ನಾನು, ಮತ್ತೊಬ್ಬರು ಹೇಳುವುದರಿಂದ ಸಿಎಂ ಬದಲಾವಣೆ ಆಗಲ್ಲ. ದಲಿತ ಸಿಎಂ ಆಯ್ಕೆ ಬಗ್ಗೆ ಸಭೆ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ತೂಗಿ ಅಳೆದು ಪಕ್ಷ, ಜನರ ಹಿತದೃಷ್ಟಿಯಿಂದ ನಿಗಮ ಮಂಡಳಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ಗಮನಿಸಿ ನಿಗಮ, ಮಂಡಳಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ ನಡೆಸುವುದು ಅವರ ಕನಸಾಗಿದೆ. ಬಿಜೆಪಿ ರಾಜ್ಯದಲ್ಲಿ ಎರಡು ಸಲ ಅಧಿಕಾರ ಹಿಡಿದಿದೆ. ಖರೀದಿ, ಅಡ್ಡ ದಾರಿ, ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿ ಅಧಿಕಾರ ಹಿಡಿದಿದೆ. ಅವರಿಗೆ ಜನರಿಂದ ಆಯ್ಕೆಯಾಗಿ ಅಧಿಕಾರ ಹಿಡಿಯಲು ಆಗಿಲ್ಲ ಎಂದು ಆರ್.ಬಿ. ತಿಮ್ಮಾಪುರ ಕಿಡಿಕಾರಿದರು.

ಶಾಸಕರು, ಸಚಿವರು ಊಟಕ್ಕೆ ಸೇರುತ್ತಿರುತ್ತೇವೆ. ಸಿಎಂ ಸಿದ್ದರಾಮಯ್ಯ ಸಚಿವರ ಮನೆಗೆ ಬರುತ್ತಿರುತ್ತಾರೆ. ಮಾಧ್ಯಮಗಳಿಗೆ ಅದು ಭಿನ್ನ, ವಿಭಿನ್ನವಾಗಿ ಕಾಣುತ್ತದೆ ಎಂದು ಡಿನ್ನರ್‌ ಪಾಲಿಟಿಕ್ಸ್‌ ಬಗ್ಗೆ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದ್ದಾರೆ.

ಈಗಲೇ ಇಲ್ಲ ಸಲ್ಲದ ಹೇಳಿಕೆ ಬೇಡ ಎಂದ ಆರ್.ವಿ ದೇಶಪಾಂಡೆ

ಅಂಕೋಲಾದಲ್ಲಿ ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತುತ ಅಲ್ಲ. ಮುಖ್ಯಮಂತ್ರಿ ಖುರ್ಚಿ ಭದ್ರವಾಗಿದೆ. ಈಗಲೇ ಅಲ್ಲಿ ಇಲ್ಲಿ ಅಸಂಬದ್ಧ ಹೇಳಿಕೆ ಕೊಡುವುದನ್ನು ಎಲ್ಲರೂ ನಿಲ್ಲಿಸಬೇಕು. ರಾಜ್ಯದ ಏಳಿಗೆ, ಅಭಿವೃದ್ಧಿ ಬಯಸಬೇಕು ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್‌.ವಿ. ದೇಶಪಾಂಡೆ, ಅದಕ್ಕೆ ಇನ್ನೂ ಎರಡೂವರೆ ವರ್ಷ ಇದೆ. ಅಲ್ಲಿ ತನಕ ಕಾದು ನೋಡೋಣ. ಈಗಲೇ ಇಲ್ಲ ಸಲ್ಲದ ಹೇಳಿಕೆ ಬೇಡ. ಯಾರ‌್ಯಾರಿಗೆ ಯಾವ ಹುದ್ದೆ ಇದೆಯೋ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲಿ. ಶಾಸಕರು ಶಾಸಕರಾಗಿ ಕೆಲಸ ಮಾಡಬೇಕು, ಸಚಿವರು ಸಚಿವರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಯಾರೂ ಪಕ್ಷ ಬಿಟ್ಟು ಹೋಗಲ್ಲ: ಎಚ್.ಕೆ. ಪಾಟೀಲ್

ಅಂಕೋಲಾದಲ್ಲಿ ಸಚಿವ ಎಚ್.ಕೆ‌. ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ಆಫರ್ ಬಂದಿದೆ ಎನ್ನುವುದನ್ನು ಹೇಳಿಕೊಂಡು ನಮ್ಮ ಶಾಸಕರು ದಿಟ್ಟತನ ತೋರಿದ್ದಾರೆ. ಅವರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಪ್ರಜಾಪ್ರಭುತ್ವವನ್ನು ಅಶಕ್ತಿಗೊಳಿಸುವ ಬಿಜೆಪಿ ಪ್ರಯತ್ನವನ್ನು ಬಹಿರಂಗಗೊಳಿಸಿದ್ದಾರೆ. ಇದು ಕಾಂಗ್ರೆಸ್ ಶಾಸಕರು ಎಷ್ಟು ಗಟ್ಟಿಯಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Tiger Nail : ಬಾಬಾ ಬುಡನ್‌ಗಿರಿ ದರ್ಗಾದ ಶಾಖಾದ್ರಿ ಮನೆಗೆ ನೋಟಿಸ್;‌ ಚಿರತೆ, ಜಿಂಕೆ ಚರ್ಮದ ಮಾಹಿತಿ ಕೇಳಿದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಯಾರಾಗಬೇಕು, ಸಚಿವ ಸ್ಥಾನ ಯಾರಿಗೆ ಇದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಮಾಧ್ಯಮದ ಎದುರು ಚರ್ಚೆ ಮಾಡುವುದು ಸೂಕ್ತ ಅಲ್ಲ. ಯಾರೇ ದೊಡ್ಡವರಿದ್ದರೂ ಇದನ್ನು ಪಾಲನೆ ಮಾಡಬೇಕು. ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರ ಮನೆಯಲ್ಲಿ ಭೋಜನ ಕೂಟವನ್ನು ಆಯೋಜಿಸಿದ್ದಕ್ಕೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಇದನ್ನೇ ದೊಡ್ಡದಾಗಿ ಮಾಡುತ್ತಿರುವ ಬಿಜೆಪಿಗೆ ಬೇರೆ ಕೆಲಸ ಏನಿದೆ? ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಗೆ ನೆಲವೇ ಕುಸಿದಂತಾಗಿದೆ. ಆ ಭಯ, ಅಂಜಿಕೆಯಿಂದ ಈ ರೀತಿ ಸುದ್ದಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್.ಕೆ. ಪಾಟೀಲ್‌ ಹೇಳಿದರು.

Exit mobile version