ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ನಿಗಮ-ಮಂಡಳಿ ನೇಮಕ (Appointment of Corporation Board) ವಿಚಾರ ಅಂತಿಮಗೊಂಡಿದೆ. ನಾನು, ಸಿಎಂ ಸಿದ್ದರಾಮಯ್ಯ (CM Siddaramaiah), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಎಲ್ಲರೂ ಸೇರಿ ಚರ್ಚೆ ಮಾಡಿ ಪಟ್ಟಿಯನ್ನು ಅಂತಿಮ ಮಾಡಿದ್ದೇವೆ. ಸುರ್ಜೇವಾಲ ಅವರು ಹೈಕಮಾಂಡ್ (Congress High Command) ಬಳಿ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಮೊದಲ ಬಾರಿ ಶಾಸಕರಾದವರಿಗೆ ನಿಗಮ-ಮಂಡಳಿ ಸ್ಥಾನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವೆಲ್ಲರೂ ಕುಳಿತು ನಿಗಮ – ಮಂಡಳಿ ಅಧ್ಯಕ್ಷರ ಆಯ್ಕೆಯನ್ನು ಮಾಡಿದ್ದೇವೆ. ಪಟ್ಟಿ ಅಂತಿಮಗೊಂಡಿದ್ದು, ಸುರ್ಜೇವಾಲ ಅವರು ಹೈಕಮಾಂಡ್‌ಗೆ ಈ ಪಟ್ಟಿಯನ್ನು ನೀಡಲಿದ್ದಾರೆ. ಅವರಿಗೆ ಇಂದು ಚುನಾವಣೆ ಪ್ರಚಾರ ಮುಗಿಯುತ್ತದೆ. ಆದಷ್ಟು ಬೇಗ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: FDA SDA Recruitment : ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅರ್ಜಿ ಯಾವಾಗ? ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳು!
ಮೊದಲ ಬಾರಿ ಶಾಸಕರಾದವರಿಗೆ ಈ ಬಾರಿ ನಿಗಮ-ಮಂಡಳಿ ಸ್ಥಾನ ಇಲ್ಲ. ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಸ್ಥಾನವನ್ನು ಕಲ್ಪಿಸಿಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸಿಎಂ ಸಿದ್ದರಾಮಯ್ಯಗೆ ಮೇಲುಗೈ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜತೆಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಾದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಈ ಮೂಲಕ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.
ಶಾಸಕರಿಗೆ ಮಾತ್ರ ಈಗ ಅವಕಾಶ ಎಂದು ಹೇಳಿದ್ದ ಸಿಎಂ
ಮಂಗಳವಾರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಎರಡು ಹಾಗೂ ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ. ಈಗ ಫೈನಲ್ ಆಗಿರುವ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಹೇಳಿದ್ದರು.
ಡಿ.ಕೆ. ಶಿವಕುಮಾರ್‌ಗೆ ಹಿನ್ನಡೆ
ನಿಗಮ – ಮಂಡಳಿ ಅಧ್ಯಕ್ಷ ಸ್ಥಾನ ನೀಡುವಾಗ ಶಾಸಕರ ಜತೆಗೆ ಕಾರ್ಯಕರ್ತರಿಗೂ ಕೊಡಬೇಕು ಎಂಬ ವಾದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರದ್ದಾಗಿತ್ತು. ಕಾಂಗ್ರೆಸ್‌ಗೆ ಈ ಬಾರಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲು ಉತ್ತಮ ಅವಕಾಶ ಸಿಕ್ಕಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಜತೆಗೆ ಕಾರ್ಯಕರ್ತರಿಗೂ ಸ್ಥಾನವನ್ನು ಕಲ್ಪಿಸಬೇಕು ಎಂದು ಡಿಕೆಶಿ ಹೇಳುತ್ತಾ ಬಂದಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರವೇ ಅವಕಾಶ ಕಲ್ಪಿಸೋಣ. ಈ ವೇಳೆ ನಾವು ಕಾರ್ಯಕರ್ತರಿಗೆ ಮಣೆ ಹಾಕಿದಲ್ಲಿ ಅವರು ಬೆಂಗಳೂರಿಗೆ ಬಂದು ಕುಳಿತುಕೊಳ್ಳುತ್ತಾರೆ. ಆಗ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವವರು ಯಾರು ಎಂಬ ವಾದವನ್ನು ಮುಂದಿಟ್ಟಿದ್ದರು. ಇದನ್ನು ಒಪ್ಪದ ಡಿ.ಕೆ. ಶಿವಕುಮಾರ್, ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸಿದರೆ ಹೊರಗೆ ಒಳ್ಳೇ ಸಂದೇಶ ರವಾನೆ ಆಗುತ್ತದೆ. ಕಾರ್ಯಕರ್ತರ ಬೆಳವಣಿಗೆಗೆ ಅವಕಾಶವನ್ನು ಕೊಡಲಾಗಿದೆ. ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬ ಸಂದೇಶವನ್ನು ಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿಯೇ ಕಳೆದ ಎರಡು ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ.
ಇದನ್ನೂ ಓದಿ: Congress Karnataka : ಬಿ.ಆರ್. ಪಾಟೀಲ್ ಪತ್ರ ಬರೆದ ಬೆನ್ನಲ್ಲೇ ಬುಲಾವ್; ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಿಎಂ
ಮೂರನೇ ಬಾರಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಟ್ಟನ್ನು ಬಿಗಿ ಹಿಡಿದು ಕುಳಿತಿದ್ದರಿಂದ ಮೊದಲ ಹಂತದ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಕೇವಲ ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳಿಗೆ ಸ್ಥಾನವನ್ನು ಕಲ್ಪಿಸಲಾಗಿದೆ. ಮುಂದಿನ ಹಂತಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ನಿರ್ಧಾರಕ್ಕೆ ಈ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.