ಹಾಸನ: ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ (Congress Karnataka) ಆರೋಪ ಮಾಡಿದ್ದ 40 ಪರ್ಸೆಂಟ್ ಕಮಿಷನ್ (40 per cent commission) ಆರೋಪ ಈಗ ಕೈಪಡೆಗೆ ತಿರುಗುಬಾಣವಾಗಿದೆ. ಅವರದ್ದೇ ಪಕ್ಷದ ಮುಖಂಡ, ಮಾಜಿ ಸಚಿವ ಬಿ. ಶಿವರಾಂ (B Shivaram) ಕಾಂಗ್ರೆಸ್ ಸರ್ಕಾರದಲ್ಲಿ ಶೇ. 40ಕ್ಕಿಂತ ಹೆಚ್ಚಿನ ಕಮಿಷನ್ ಪಡೆಯಲಾಗುತ್ತಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಆದರೆ, ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಗರಂ ಆಗಿದ್ದು, ಬಿ. ಶಿವರಾಂಗೆ ನಾನು ವಾರ್ನ್ ಮಾಡುತ್ತಿದ್ದೇನೆ ಎಂದು ಮಾಧ್ಯಮದೆದುರು ಗುಡುಗಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಶಿವರಾಂ, ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ ವಿರುದ್ಧ ಶೇ. 40ರಷ್ಟು ಕಮಿಷನ್ ಆರೋಪವನ್ನು ಮಾಡಿದ್ದೆವು. ಆದರೆ, ಈಗ ಅದಕ್ಕಿಂತ ಹೆಚ್ಚಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಈ ಸಂಬಂಧ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಮನವಿ ಮಾಡಿದ್ದೆ. ಆಗ ಹಾಸನ ಉಸ್ತುವಾರಿ ಸಚಿವರು ಎದುರು ಇದ್ದರು ಎಂದು ಬಿ. ಶಿವರಾಂ ಹೇಳಿದ್ದಾರೆ.
ಜಿಪಂ ಅನುದಾನದ ಬಗ್ಗೆ ಅಸಮಾಧಾನ
ಹಾಸನ ಜಿಲ್ಲಾ ಪಂಚಾಯಿತಿಗೆ 13 ಕೋಟಿ ಅನುದಾನ ಬಂದಿದೆ. ಈ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮಾಡಲಾಗಿದೆ. ಈ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಎಂದು ಹೇಳಲಾಗುತ್ತಿದೆ. ಕೇವಲ 50 ಸಾವಿರ ರೂಪಾಯಿ ಇರುವ ಸಚಿವರ ಸಮುದಾಯಕ್ಕೆ ಎರಡೂವರೆ ಕೋಟಿ ಅನುದಾನವಂತೆ ಎಂದು ಕಿಡಿಕಾರಿರುವ ಬಿ. ಶಿವರಾಂ, ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಇರುವ ಪರಿಶಿಷ್ಟ ಸಮುದಾಯಕ್ಕೆ ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಅವರಿಗೆ ಮೂರು ಕೋಟಿ ಅನುದಾನ ಕೊಟ್ಟಿದ್ದಾರೆ. ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಮುಖ್ಯಮಂತ್ರಿ ಅವರ ಸಮ್ಮುಖದಲ್ಲೇ ಬೆಳಗಾವಿಯಲ್ಲಿ ಹೇಳಿದ್ದೆವು. ಆದರೆ ಸಿಎಂ ಮೌನವಾಗಿಯೇ ಇದ್ದರು. ನಮ್ಮ ಸಚಿವರ ಬೆನ್ನು ತಟ್ಟಿ ಸರಿ ಮಾಡ್ಕೊಂಡು ಹೋಗು ಎಂದರು ಎಂದು ಶಿವರಾಂ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಆದರೆ, ಈಗ ಅದಕ್ಕಿಂತ ಜಾಸ್ತಿಯಾಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ನೇರವಾಗಿ ಹೇಳುತ್ತೇನೆ ಎಂದು ಬಿ. ಶಿವರಾಂ ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಮಾಡಿದ ಎಚ್‌ಡಿಕೆ; ಡಿ.ಕೆ. ಶಿವಕುಮಾರ್
ಮಾಜಿ ಶಾಸಕ ಬಿ. ಶಿವರಾಂಗೆ ಡಿಕೆಶಿ ವಾರ್ನಿಂಗ್
ಈ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗರಂ ಆಗಿದ್ದು, ಏನೇ ಇದ್ದರೂ ಪಕ್ಷದ ಒಳಗೆ ಮಾತನಾಡಬೇಕು. ಹೀಗೆ ಹೊರಗೆ ಮಾಧ್ಯಮದ ಮುಂದೆ ಹೋಗಿ ಮಾತನಾಡಿದರೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬೇಕಾದೀತು. ನಾನು ಈ ಬಗ್ಗೆ ಶಿವರಾಂಗೆ ವಾರ್ನ್ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.