ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ. ಸಂಪೂರ್ಣ ಬಹುಮತ ಬಂದು ಅಧಿಕಾರವನ್ನು ಹಿಡಿದರೂ ಪಕ್ಷದೊಳಗಿನ ಭಿನ್ನಮತ ಆಗಾಗ ಸ್ಫೋಟಗೊಳ್ಳುತ್ತಲೇ ಇದೆ. ಈ ಮಧ್ಯೆ ಡಿಸಿಎಂ ದಂಗಲ್ ಶುರುವಾಗಿದೆ. ಪೂರ್ಣಾವಧಿಗೆ ಸಿಎಂ ಆಗಿ ಸಿದ್ದರಾಮಯ್ಯ (CM Siddaramaiah) ಅವರೇ ಮುಂದುವರಿಯಲಿದ್ದಾರೆ. ಆದರೆ, ಮೂವರು ಡಿಸಿಎಂಗಳ ಅಗತ್ಯವಿದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಪ್ರಸ್ತಾಪ ಮಾಡಿದ್ದರು. ಇದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಸಹಮತ ವ್ಯಕ್ತಪಡಿಸಿದ್ದರು. ಈಗ ಮಹಿಳಾ ಡಿಸಿಎಂಗೆ (Women Deputy CM) ಬೇಡಿಕೆ ಎದ್ದಿದೆ.
ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು. ಆಗ ಎಲ್ಲರಿಗೂ ನ್ಯಾಯ ಸಿಗುತ್ತದೆ. ಈ ಸಂಬಂಧ ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಈ ಹೇಳಿಕೆಗೆ ಸಾಕಷ್ಟು ಪರ – ವಿರೋಧ ಚರ್ಚೆಗಳೂ ನಡೆದಿದ್ದವು. ಅಲ್ಲದೆ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಇದಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಕೆ.ಎನ್. ರಾಜಣ್ಣ ಅವರೇ ಉತ್ತರ ಕೊಡಬೇಕು. ಇಲ್ಲವೇ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಹೇಳಿಬಿಟ್ಟಿದ್ದರು.
ಇದನ್ನೂ ಓದಿ: Land Auditing : ಬೆಂಗಳೂರಲ್ಲಿ 75000 ಎಕರೆ ಸರ್ಕಾರಿ ಭೂ ಒತ್ತುವರಿ; ಲ್ಯಾಂಡ್ ಆಡಿಟಿಂಗ್‌ಗೆ ಸಿಎಂ ಸೂಚನೆ
ಈಗ ಮಹಿಳೆಯರಿಗೂ ಡಿಸಿಎಂ ಹುದ್ದೆ ನೀಡಬೇಕು ಎಂದು ಮಾಜಿ ಸಚಿವೆ, ಹಾಲಿ ಎಂಎಲ್‌ಸಿ ಉಮಾಶ್ರೀ ಹೇಳಿದ್ದಾರೆ. ಆ ಮೂಲಕ ಕೈ ಪಾಳಯದಲ್ಲಿ ಡಿಸಿಎಂ ಹುದ್ದೆ ದಂಗಲ್ ಮುಂದುವರಿದಿದೆ. ಅಲ್ಲದೆ, ಉಮಾಶ್ರೀ ನೇಮಕಕ್ಕೆ ಈ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೂ ಮಹಿಳಾ ಕೋಟಾ ಹಾಗೂ ನೇಕಾರ ಸಮುದಾಯದ ಅಡಿಯಲ್ಲಿ ಅವರನ್ನು ಸಿಎಂ ಸಿದ್ದರಾಮಯ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದರು. ಇದರ ಜತೆಗೆ ಉಮಾಶ್ರೀ ಸಹ ಸಿಎಂ ಪಾಳಯದಲ್ಲಿ ಗುರುತಿಸಿಕೊಂಡವರು.
ಈಗ ಉಮಾಶ್ರೀ ನೀಡಿರುವ ಮಹಿಳಾ ಡಿಸಿಎಂ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಮಂಗಳವಾರ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದೆ. ಇದಲ್ಲದೆ, ಕೆ.ಎನ್. ರಾಜಣ್ಣ ಮಾತನಾಡುತ್ತಾ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂದು ಹೇಳಿದ್ದರು. ಅದೇ ಕಾರಣಕ್ಕಾಗಿಯೇ ಈಗ ಉಮಾಶ್ರೀ ಅವರು, ಸಮುದಾಯವಾರು ಜತೆಗೆ ಲಿಂಗವಾರು ಪ್ರಾತಿನಿಧ್ಯವನ್ನೂ ನೀಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ: Cauvery water dispute : ಕಾವೇರಿ ಬಿಕ್ಕಟ್ಟು ಚರ್ಚೆಗೆ ನಾಳೆ ದೆಹಲಿಯಲ್ಲಿ ಮಹತ್ವದ ಸಭೆ; ಸಿಎಂ, ಡಿಸಿಎಂ ಭಾಗಿ
ಪೂರ್ಣ ಬಹುಮತದೊಂದಿಗೆ, ಸಂಪುಟ ಭರ್ತಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರವು ಪದೇ ಪದೆ ಪಕ್ಷದ ಶಾಸಕರು, ಸಚಿವರು ಹಾಗೂ ಮುಖಂಡರಿಂದಲೇ ಮುಜುಗರಕ್ಕೆ ಒಳಗಾಗುತ್ತಿದೆ. ಒಂದು ಸಮಸ್ಯೆ ಬಗೆಹರಿಯುತ್ತಿದೆ ಎನ್ನುವಷ್ಟರಲ್ಲಿ ಇನ್ನೊಂದು ಸಮಸ್ಯೆ ಉದ್ಭವವಾಗುತ್ತಿದೆ. ಈಗಾಗಲೇ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಪರೋಕ್ಷ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ, ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ಎಂ.ಬಿ. ಪಾಟೀಲ್ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ನೀಡಿದ್ದ ಹೇಳಿಕೆಗೆ ಡಿಕೆ ಬ್ರದರ್ಸ್ ಕೆಂಡವಾಗಿದ್ದರು. ಈಗ ಅವರ ನಡೆ ಏನಿರುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.