ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ (Congress Karnataka) ನಿಗಮ-ಮಂಡಳಿ ನೇಮಕ (Appointment of Corporation Board) ವಿಚಾರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಬರುತ್ತಿದ್ದಾರೆ. ಈಗಾಗಲೇ ತಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇರವಾಗಿ ಬೇಸರವನ್ನು ಹೇಳಿಕೊಂಡಿದ್ದರು. ಈಗ ಅದನ್ನು ಪುಷ್ಟೀಕರಿಸಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಪರಮೇಶ್ವರ್ ಅವರ ಅಭಿಪ್ರಾಯವನ್ನು ಕೇಳಬೇಕಿತ್ತು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರ ಏಕಪಕ್ಷೀಯ ನಿರ್ಧಾರದ ಬಗ್ಗೆ ಧ್ವನಿ ಎತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಿಗಮ – ಮಂಡಳಿ ನೇಮಕದಲ್ಲಿ ಹಿರಿಯರ ಅಭಿಪ್ರಾಯವನ್ನು ಪಡೆಯಬೇಕಿತ್ತು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಅಭಿಪ್ರಾಯವನ್ನು ಕೇಳಬೇಕಿತ್ತು. ಎಂಟು ವರ್ಷ ಅವರು ಅಧ್ಯಕ್ಷರಾಗಿದ್ದವರು. ಅವರು ಪಾರ್ಟ್ ಆಫ್ ದಿ ಪಾರ್ಟಿ ಇದ್ದಾರೆ. ಹೀಗಾಗಿ ಅವರ ಅಭಿಪ್ರಾಯವನ್ನೂ ಪಡೆಯಬೇಕಿತ್ತು. ಅವರ ಸಲಹೆಯನ್ನು ಪರಿಗಣಿಸಬೇಕಿತ್ತು ಎಂದು ಹೇಳಿದರು.
ಅಧಿವೇಶನಕ್ಕೂ ಮುನ್ನವೇ ನಿಗಮ – ಮಂಡಳಿ ಘೋಷಣೆ ಆಗದೆ ಇದ್ದರೆ ಶಾಸಕರು ಅಸಮಾಧಾನ ಹಾಕಬಹುದು. ಹೊಸಬರಿಗೆ ನಿಗಮ ಮಂಡಳಿ ಅವಕಾಶ ಇಲ್ಲವೇ ಇಲ್ಲ. ಮೊದಲು ಹೇಳಲಾಗಿತ್ತು. ಈಗಲೂ ಅದನ್ನೇ ಹೇಳಿದ್ದಾರೆ. ಮೂರು, ನಾಲ್ಕು ಬಾರಿ ಗೆದ್ದವರಿಗೆ ನಿಗಮ ಮಂಡಳಿ ನೀಡಲು ಪಕ್ಷ ಬದ್ಧವಾಗಿದೆ. ಮೊದಲ ಸಲ ಬಂದವರಿಗೆ ಇಲ್ಲವೇ ಇಲ್ಲ. ನಮ್ಮ ಜಿಲ್ಲೆಯಲ್ಲಿಯೂ ಎರಡು ಮೂರು ಜನರು ಸೀನಿಯರ್ಸ್ ಇದ್ದಾರೆ. ಅವರಿಗೂ ನಿಗಮ ಮಂಡಳಿ ಕೊಟ್ಟೇ ಕೊಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಿಗಮ – ಮಂಡಳಿಗೆ ಶೀಘ್ರ ನೇಮಕವಾಗಲಿ
ನಿಗಮ ಮಂಡಳಿ ನೇಮಕವು ಆದಷ್ಟು ಬೇಗ ಆದರೆ ಒಳ್ಳೆಯದು. ಸದನ ಪ್ರಾರಂಭ ಆಗುವ ಮೊದಲೇ ಆದರೆ ಒಳ್ಳೆಯದು. ಅಧಿವೇಶನಕ್ಕಿಂತ ಮುಂಚೆ ನಿಗಮ ಮಂಡಳಿ ರಚನೆಯಾದರೆ ಅಷ್ಟು ಸೇನೆ ಕಮಾಂಡಂಟ್ಗಳು ತಯಾರಾಗುತ್ತಾರೆ. ಹಿರಿಯರಿಗೆ ಕೊಟ್ಟರೆ ಭಿನ್ನಮತ ಆಗಲು ಅವಕಾಶ ಇರುವುದಿಲ್ಲ. ಸೈನಿಕರಾದ ಮೇಲೆ ನಾವೆಲ್ಲ ಪಾರ್ಟ್ ಆಫ್ ದಿ ಸರ್ಕಾರ, ಶಿಸ್ತಿನಿಂದ ಇರಬೇಕು. ಯಾವಾಗ ಆದೇಶ ಕೊಡುತ್ತಾರೆ ಎಂಬುದನ್ನು ನೋಡಬೇಕು. ಅಧಿವೇಶನಕ್ಕಿಂತ ಮುಂಚೆ ಯಾವಾಗ ನೇಮಕ ಮಾಡಿದರೂ ಒಳ್ಳೆಯದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕಾರ್ಯಕರ್ತರಿಗೂ ನಿಗಮ – ಮಂಡಳಿಯಲ್ಲಿ ಸ್ಥಾನ ಬೇಕು
ನಾನೂ ಕೂಡ ಕಾರ್ಯಕರ್ತರ ಪರವಾಗಿ ಡಿಮ್ಯಾಂಡ್ ಮಾಡಿದ್ದೇನೆ. ಅವರೇ ಮುಖ್ಯ ನಮಗೆ, ಪಕ್ಷ ಸಂಘಟನೆಗೆ ಮುಖ್ಯ ಪಾತ್ರ ವಹಿಸುತ್ತಾರೆ. ಅವರಿಗೂ ಹೆಚ್ಚಿನ ಅವಕಾಶ ನೀಡಬೇಕು ಅಂತ ಹೇಳಿದ್ದೇನೆ. ಯಾವತ್ತೂ ಕೂಡ ಉತ್ತರ ಕರ್ನಾಟಕ ಭಾಗದ ಸಮಸ್ಯೆಯು ಬೆಳಗಾವಿಯಲ್ಲಿ ಚರ್ಚೆಯೇ ಆಗಿಲ್ಲ. ಈ ಬಾರಿಯಾದರೂ ಚರ್ಚೆ ಆಗುತ್ತದಾ ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪೂರ್ಣ ಸಹಮತದಿಂದ ತೀರ್ಮಾನಿಸಲಾಗಿದೆ
ಡಿ.ಕೆ. ಶಿವಕುಮಾರ್ ಪರ ಸಿಬಿಐ ಅನುಮತಿ ಹಿಂಪಡೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಕ್ಯಾಬಿನೆಟ್ನಲ್ಲಿ ಈ ವಿಷಯವಾಗಿ ಪೂರ್ಣ ಸಹಮತದಿಂದ ತೀರ್ಮಾನಿಸಲಾಗಿದೆ. ಮೆಜಾರಿಟಿ ಇಲ್ಲದಿದ್ದರೆ ಆ ನಿರ್ಣಯ ಅಲ್ಲಿಯೇ ಡ್ರಾಪ್ ಆಗುತ್ತಿತ್ತು. ಆದರೆ, ಇಲ್ಲಿ ಎಲ್ಲರೂ ಒಪ್ಪಿದ್ದಕ್ಕೆ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ಶಾಸಕರ – ಸಚಿವರ ಸಮಸ್ಯೆ ಇರುತ್ತದೆ
ಆಳಂದ ಶಾಸಕ ಬಿ.ಆರ್. ಪಾಟೀಲ್ ಪತ್ರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಕ್ಷೇತ್ರದ ಸಮಸ್ಯೆ ಇರಬಹುದು. ಸಿಎಂಗೆ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕರೆಸಿ ಮಾತನಾಡಿದ್ದಾರೆ. ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ನೀವು. ಸರ್ಕಾರ ಎಂದ ಮೇಲೆ ಇವೆಲ್ಲವೂ ಇದ್ದೇ ಇರುತ್ತದೆ. ಎಂಡ್ಲೆಸ್ ಆಗಿರುತ್ತವೆ. ಶಾಸಕರ – ಸಚಿವರ ಸಮಸ್ಯೆ ಇರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Gold Rate Today: ಕುಸಿದ ಬಂಗಾರದ ಬೆಲೆ, ಗ್ರಾಂಗೆ ₹60 ಇಳಿಕೆ
ನಮ್ಮ ಇಲಾಖೆಯಲ್ಲಿ ಸರಿಯಾಗಿ ಪಾವತಿ
ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡಿಲ್ಲ ಎಂದು ಕೋರ್ಟ್ ಚಾಟಿ ಬೀಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ನಮ್ಮ ಇಲಾಖೆಗೆ ಸಂಬಂಧಿಸಿ ಕೋರ್ಟ್ ಹೇಳಿಲ್ಲ. ಬಿಬಿಎಂಪಿಯವರು ಯಾರೋ ಕೋರ್ಟ್ಗೆ ಹೋಗಿದ್ದಾರೆ. ಅವರಿಗೆ ಕೋರ್ಟ್ ಹೇಳಿದೆ. ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಬ್ಯಾಲೆನ್ಸ್ ಅನ್ನು ಕ್ಲಿಯರ್ ಮಾಡುತ್ತೇವೆ. ನಮ್ಮಲ್ಲಿ ಎಲ್ಲರಿಗೂ ಸರಿಯಾಗಿ ಬಿಲ್ ಪಾವತಿಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.