ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದಲೇ ಕಾಂಗ್ರೆಸ್ ಪಕ್ಷ “ಮತ್ತೆ ಗರ್ಜಿಸಲಿದೆ ಕರ್ನಾಟಕ” ಎಂಬ ಹೊಸ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಅಭಿಯಾನವು ಕರ್ನಾಟಕದ ಜನರಿಗೆ ಪಕ್ಷದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
“ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ನಿರಾಸೆಗೊಂಡಿದ್ದಾರೆ. ಕೋವಿಡ್-19, ಆರ್ಥಿಕ ಕುಸಿತ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಕರ್ನಾಟಕಕ್ಕಾದ ಅನ್ಯಾಯವನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕನ್ನಡಿಗರ ಈ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ.” ಎಂದು ಅವರು ಪಾಟೀಲ್ ಹೇಳಿದ್ದಾರೆ.
“ಕರ್ನಾಟಕ ಮತ್ತೊಮ್ಮೆ ಗರ್ಜಿಸಲಿದೆ” ಅಭಿಯಾನವು ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯದ ಭವಿಷ್ಯಕ್ಕಾಗಿ ಪಕ್ಷದ ದೃಷ್ಟಿಕೋನವನ್ನು ಹಂಚಿಕೊಳ್ಳಲು ಗಮನ ನೀಡುತ್ತದೆ. ಈ ಅಭಿಯಾನವು ರ‍್ಯಾಲಿಗಳು, ಮನೆ-ಮನೆ ಪ್ರಚಾರ, ಸಾಮಾಜಿಕ ಮಾಧ್ಯಮಗಳ ಪ್ರಚಾರ ಮತ್ತು ಕನ್ನಡಿಗರ ನಾಡಿ ಮಿಡಿತ ಹಾಗೂ ಅವರಿಗಾದ ಅನ್ಯಾಯವನ್ನು ಸರಿಪಡಿಸಿ ಮತ್ತೆ ಕರ್ನಾಟಕವು ಘರ್ಜಿಸುವಂತೆ ಮಾಡುವ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಇದು ಒಳಗೊಂಡಿರುತ್ತದೆ.
“ಕರ್ನಾಟಕದ ಜನರು ಉತ್ತಮ ಭವಿಷ್ಯಕ್ಕಾಗಿ ನಮ್ಮ ದೃಷ್ಟಿಕೋನವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಸಮೃದ್ಧ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಅವಕಾಶಗಳನ್ನು ಒದಗಿಸುವ ರಾಜ್ಯವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನಾಯಕತ್ವದಲ್ಲಿ ಕರ್ನಾಟಕ ಮತ್ತೆ ಘರ್ಜಿಸಲಿದೆ ಎಂದು ನಾವು ನಂಬುತ್ತೇವೆ.” ಎಂದು ಎಂ.ಬಿ.ಪಾಟೀಲ್ ತಿಳಿಸಿದರು.