Site icon Vistara News

Congress Politics: ಶಿವನಿಗೆ ನಂದಿ ಇದ್ದ ಹಾಗೆ ಸಿದ್ದರಾಮಯ್ಯಗೆ ಯತೀಂದ್ರ!

Siddaramaiah Yathindra siddaramaiah

#image_title

ಮೈಸೂರು: ʻಶಿವನಿಗೆ ನಂದಿ ಇದ್ದ ಹಾಗೆ ಸಿದ್ದರಾಮಯ್ಯಗೆ ಯತೀಂದ್ರʼ- ಹೀಗೊಂದು ಸಂಬಂಧ ಕಟ್ಟಿದವರು ಕಾಂಗ್ರೆಸ್‌ನ ಮೈಸೂರು ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ ಕುಮಾರ್‌ (Dr. BJ Vijayakumar). ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ವರುಣದಲ್ಲಿ ಸಿದ್ದರಾಮಯ್ಯ (Siddaramaiah) ಅವರ ಗೆಲುವಿನ ಹಿನ್ನೆಲೆಯಲ್ಲಿ ಆಯೋಜಿಸಲಾದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ (Dr. Yathindra siddaramaiah) ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ʻʻಶಿವ ದೇಗುಲದಲ್ಲಿ ಈಶ್ವರ ಒಳಗಿದ್ದರೆ ನಂದಿ ಹೊರಗಡೆ ಕುಳಿತು ಕಾಯ್ತಾ ಇರುತ್ತದೆ. ಶಿವನನ್ನು ಕಾಯ್ತಾ ಇರುವುದು ನಂದಿ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಕಾಯ್ತಾ ಇದ್ದಾರೆʼʼ ಎಂದು ಬಿ.ಜೆ. ವಿಜಯಕುಮಾರ್‌ ಹೇಳಿದರು.

ʻʻವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಎರಡು ಮೂರು ದಿನಗಳ ಕಾಲ ಪ್ರಚಾರ ಮಾಡಿದರು. ಮೈಸೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ವರುಣ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರ ಮಾಡಿದರು. ಇದರ ಫಲವಾಗಿ‌ ಸಿದ್ದರಾಮಯ್ಯ ರವರು 46,006 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದರಿಂದಾಗಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಗಳನ್ನು ಈಡೇರಿಸಲು ಮುಖ್ಯಮಂತ್ರಿ ಹಗಲು ರಾತ್ರಿ ಕೆಲಸ ಮಾಡ್ತಾ ಇದ್ದಾರೆ. ರಾಜ್ಯಭಾರ ಮಾಡಲು ಬೇಕಾದ ಎದೆಗಾರಿಕೆ ಸಿದ್ದರಾಮಯ್ಯ ಅವರಲ್ಲಿ ಇದೆʼʼ ಎಂದು ಹೇಳಿದರು.

ಇದರಿಂದಾಗಿ ರಾಜ್ಯದ ಕಾರ್ಯಕರ್ತರು ಸಂಭ್ರಮದ ಜತೆಗೆ ಜವಾಬ್ದಾರಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಂದೆ ಸಿದ್ದರಾಮಯ್ಯ ಅವರು ಐತಿಹಾಸಿಕ ಗೆಲುವು ಸಾಧಿಸಲು ನಮ್ಮ ಕಾರ್ಯಕರ್ತರು ಕಾರಣ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಿದರು. ಬಿಜೆಪಿಯವರು ಕ್ಷೇತ್ರದಲ್ಲಿ ಬಹಳಷ್ಟು ಷಡ್ಯಂತ್ರ ಮಾಡಿದ್ರು. ನಮ್ಮ ಕಾರ್ಯಕರ್ತರ ಸಲಹೆ ಮೇರೆಗೆ ನಾವು ಕೂಡ ಸಾಕಷ್ಟು ತಂತ್ರಗಾರಿಗೆ ಮಾಡಿದ ಫಲವಾಗಿ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಹೇಳಿದರು.

ʻʻಐದು ಯೋಜನೆ ಗ್ಯಾರಂಟಿಗಳನ್ನು ರಾಜ್ಯದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಯೋಜನೆ ಜಾರಿ ಮಾಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಕೊಟ್ಟ ಭರವಸೆಗಳನ್ನು 9 ವರ್ಷವಾದರೂ ಈಡೇರಿಸಿಲ್ಲ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ʻʻಕೇಂದ್ರ ಸರ್ಕಾರ ಕಾಂಗ್ರೆಸ್​ಗೆ ಹೆದರಿ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರದವರು ನೀಚ ಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆʼʼ ಎಂದು ಆರೋಪಿಸಿದರು.

ʻʻಲೋಕಸಭಾ ಚುನಾವಣೆಯಲ್ಲೂ ಎಲ್ಲ ಕಡೆ ಹೋಗಿ ಪರಿಶ್ರಮ ಪಡಬೇಕು. ಕಾಂಗ್ರೆಸ್‌ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇದರಿಂದ ಸಿಎಂ ಹಾಗೂ ಡಿಸಿಎಂಗೆ ಹೆಚ್ಚು ಶಕ್ತಿ ಬರುತ್ತದೆʼʼ ಎಂದು ಹೇಳಿದರು ಯತೀಂದ್ರ.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್;‌ ಮುಗಿಯದ ಕೈ ಕಿತ್ತಾಟ!

Exit mobile version