ಧಾರವಾಡ: ರಾಜ್ಯದ ಎಲ್ಲೆಡೆ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಹಿಂದೂ-ಮುಸ್ಲಿಮರು ಸೇರಿ ಹಲವು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಇದರ ನಡುವೆ ಧಾರವಾಡದ ಗರಗ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಮೆರವಣಿಗೆಯಲ್ಲೇ ಹಣ ತೂರಿದ ಘಟನೆಯೂ ನಡೆದಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ತಮಾಟಗಾರ ಅವರೇ ಈ ರೀತಿ ಹಣವನ್ನು ಚೆಲ್ಲಿದವರು.
ಗರಗ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮೊಹರಂ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಹಾಡು, ಕುಣಿತ ಎಲ್ಲವೂ ಇತ್ತು. ಇದರಲ್ಲಿ ಒಂದು ತಂಡದ ಗಾಯಕ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಈ ನಡುವೆ, ಮೆರವಣಿಗೆ ಬಸ್ ನಿಲ್ದಾಣದ ಬಳಿಗೆ ಬಂದು ನಿಂತಿತ್ತು. ತೆರೆದ ವಾಹನದಲ್ಲಿ ಗಾಯಕ ಮಂತ್ರಮುಗ್ಧಗೊಳಿಸುವಂತೆ ಹಾಡುತ್ತಿದ್ದರೆ ಇಸ್ಮಾಯಿಲ್ ತಮಾಟಗಾರ ಮತ್ತು ಗೆಳೆಯರು ಕೂಡಾ ಖುಷಿಯಿಂದ ಕುಣಿದರು. ನಡುವೆ ತಮಾಟಗಾರ ಹಾಗು ಸ್ನೇಹಿತರು ಗಾಯಕನ ಮೇಲೆ ಹಣವನ್ನೇ ತೂರಲು ಆರಂಭಿಸಿದರು. ಈ ರೀತಿ ಹಣ ತೂರುವ ದೃಶ್ಯ ಈಗ ವೈರಲ್ ಆಗಿದೆ.
ಬೃಹತ್ ಜನಜಂಗುಳಿಯ ಎದುರಿಗೆ ಗಾಯಕನ ಮೇಲೆ ಸಾಕಷ್ಟು ಹಣ ತೂರಾಟ ನಡೆಸಿದ್ದು ಚರ್ಚೆಗೆ ಕಾರಣವಾಗಿದೆ. ಇಸ್ಮಾಯಿಲ್ ಮಾಟಗಾರ ಅವರು ಸ್ಥಳೀಯವಾಗಿ ಮುಸ್ಲಿಂ ಮುಖಂಡನಾಗಿ ಪರಿಚಿತರು. ಅಲ್ಲದೆ ೨೦೨೩ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಜನರ ಗಮನ ಸೆಳೆಯಲು ಮತ್ತು ಪ್ರೀತಿ ಗಳಿಸಲು ಹಣ ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಮೊಹರಂ ಆಚರಣೆ ವೇಳೆ ತಲ್ವಾರ್ ಹಿಡಿದು ಕುಣಿದು ಕುಪ್ಪಳಿಸಿದ ಶಾಸಕ, ಸಖತ್ ಸ್ಟೆಪ್!