Site icon Vistara News

Panchamasali Reservation: ಕುಡಿದ ಮತ್ತಿನಲ್ಲಿ ಸ್ವಾಮೀಜಿಗೆ ಕರೆ ಮಾಡುವ ಕಾಂಗ್ರೆಸ್‌ ನಾಯಕರು: ಅರವಿಂದ ಬೆಲ್ಲದ್‌ ಆರೋಪ

congress leaders disrespecting swamiji regarding panchamasali reservation accuses aravind bellad

#image_title

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಕುರಿತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯಂಜಯ ಸ್ವಾಮೀಜಿಯವರಿಗೆ ಕೆಲ ಕಾಂಗ್ರೆಸ್‌ ನಾಯಕರು ಕುಡಿದ ಸ್ಥಿತಿಯಲ್ಲಿ ಕರೆ ಮಾಡಿ ಅಗೌರವ ತರುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಗಂಭೀರ ಆರೋಪ ಮಾಡಿದ್ದಾರೆ.

ಹೋರಾಟದಲ್ಲಿ ಎಲ್ಲರೂ ಹೋರಾಟ ನಡೆಸಿದ್ದೆವು. ಈಗ ಬೊಮ್ಮಾಯಿ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಎಲ್ಲ ಸಮುದಾಯಗಳಿಗೂ ಅನುಕೂಲ ಆಗುವಂತಹ ನಿರ್ಧಾರ ಮಾಡಿದ್ದಾರೆ. ಮರಾಠ ಹಾಗೂ ಒಕ್ಕಲಿಗ ಸಮುದಾಯವೂ ಸಂತೋಷವಾಗಿದೆ. ಇದನ್ನು ಜಯಮೃತ್ಯುಂಜಯ ಸ್ವಾಮೀಜಿಯವರೂ ಸ್ವಾಗತಿಸಿದರು ಎಂದರು.

ಸ್ವಾಮೀಜಿಗೆ ಒತ್ತಡ ಹಾಕಲಾಗಿದೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿ ಸಂತೋಷದಲ್ಲೇ ಇದ್ದಾರೆ. ಅವರು ಎರಡೂವರೆ ವರ್ಷ ಮಠವನ್ನೂ ಬಿಟ್ಟು ಹೋರಾಟ ಮಾಡಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಕುಡಿದ ಸ್ಥಿತಿಯಲ್ಲಿ ಸ್ವಾಮೀಜಿಯವರಿಗೆ ಕರೆ ಮಾಡಿ ಮಾತನಾಡಿ ಅವರಿಗೆ ಅಗೌರವದ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಇಡೀ ಸಮಾಜಕ್ಕೆ ದುಃಖವನ್ನು ತರಿಸಿದ್ದಾರೆ. ಇವರ ಹೆಸರನ್ನು ನಾನು ಹೇಳುವುದಿಲ್ಲ ಎಂದರು. ಅರವಿಂದ ಬೆಲ್ಲದ್‌ ಅವರು ಬಿಜೆಪಿಯ ವಿನಯ್‌ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನವರ್‌ ಅವರ ಕುರಿತು ಪ್ರಸ್ತಾಪಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಧಾರವಾಡದಿಂದ ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಹಾಗೂ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪುವ ಕುರಿತು ಪ್ರತಿಕ್ರಿಯಿಸಿ, ಧಾರವಾಡ ಮೊದಲಿನಿಂದಲೂ ಪ್ರಮುಖವಾಗಿದೆ. ಅಲ್ಲಿರುವ ಘಟನೆಗಳು ರಾಜ್ಯದ ಗಮನ ಸೆಳೆಯುತ್ತವೆ. ಊಹಾಪೋಹಗಳಿರುತ್ತವೆ. ಸಿಎಂ ಶಿಗ್ಗಾಂವಿಯಿಂದಲೇ ಸ್ಪರ್ಧೆ ಎಂದಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರ ಕುರಿತು ನಾನು ಮಾತನಾಡುವುದಿಲ್ಲ. ನಾನು ಕಳೆದ ಬಾರಿ 42 ಸಾವಿರ ಮತಗಳಿಂದ ಆಯ್ಕೆಯಾಗಿದ್ದೆ, ಈ ಬಾರಿ ಮತ್ತಷ್ಟು ಹೆಚ್ಚಾಗುತ್ತದೆ ಎಂದರು. ಮೋಹನ್‌ ಲಿಂಬಿಕಾಯಿ ಅವರು ಪಕ್ಷ ತೊರೆದಿರುವುದು ಪಕ್ಷಕ್ಕೆ ತೊಂದರೆ ಆಗುವುದಿಲ್ಲ ಎಂದರು.

ಇದನ್ನೂ ಓದಿ: Panchamasali: ಮೋದಿ, ಶಾ ಮಧ್ಯಪ್ರವೇಶದಿಂದ ಮೀಸಲಾತಿ ಸಿಕ್ಕಿದೆ; ಮುಂದೆ OBC ಹೋರಾಟ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Exit mobile version