ಬೆಂಗಳೂರು: ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಕೈಗೊಂಡ ತೀರ್ಮಾನಗಳೇ ಕಾರಣ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕುರಿತು ವಿಸ್ತೃತವಾಗಿ ಪ್ರತಿಕ್ರಿಯೆ ನೀಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಬೊಮ್ಮಾಯಿಯವರು ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಪದೆ ಪದೆ ಹೇಳಿಕೆ ಕೊಡುತ್ತಿದ್ದಾರೆ. ಬೊಮ್ಮಾಯಿಯವರಿಗೆ ಕೆಲವೆ ಕೆಲವು ಅಂಶಗಳನ್ನು ನೆನಪಿಸಬಯಸುತ್ತೇನೆ ಎಂದಿರುವ ಸಿದ್ದರಾಮಯ್ಯ, ಎ .ಟಿ. ರಾಮಸ್ವಾಮಿಯವರು ಬೆಂಗಳೂರಿನಲ್ಲಿ 11,980 ಎಕರೆ ಭೂಮಿ ಒತ್ತುವರಿಯಾಗಿತ್ತು ಎಂದು ವರದಿ ನೀಡಿದ್ದರು. ಇದರಲ್ಲಿ 11,680 ಎಕರೆ ಭೂಮಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ಇದಿಷ್ಟೆ ಅಲ್ಲ, ಹಲವು ಸಂಘ ಸಂಸ್ಥೆಗಳಿಗೆ ನೀಡಿದ್ದ ಜಮೀನುಗಳ ಮಂಜೂರಾತಿ ನಿಯಮ ಉಲ್ಲಂಘಿಸಿದ್ದವರಿಂದಲೂ ಜಮೀನನ್ನು ವಾಪಸ್ಸು ಪಡೆದಿದ್ದೇವೆ. ಅಪೊಲೊ ಆಸ್ಪತ್ರೆಯಿಂದ 5 ಎಕರೆ, ರಾಷ್ಟ್ರೋತ್ಥಾನ ಪರಿಷತ್‍ನಿಂದ 10 ಎಕರೆ, ಮಿಥಿಕ್ ಸೊಸೈಟಿ ಸೇರಿದಂತೆ ಹಲವರಿಂದ ವಾಪಸ್ಸು ಪಡೆದಿದ್ದೆವು ಎಂದು ಸಂಘ ಪರಿವಾರದ ಸಂಸ್ಥೆಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಬೊಮ್ಮಾಯಿ ಸರ್ಕಾರ ನೇಮಿಸಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯು ಬೆಂಗಳೂರು ನಗರಾಭಿವೃದ್ಧಿಗಾಗಿ ಒಬ್ಬ ಸಚಿವರನ್ನು ನೇಮಿಸಿದರೆ ಉಳಿದವರು ಕಿತ್ತಾಟಕ್ಕಿಳಿಯುತ್ತಾರೆ. ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಈ ಖಾತೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಮುಖ್ಯ ಮಂತ್ರಿಗಳಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೆ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ನಡೆಸಲಿ, ಜೊತೆಗೆ ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಲು ಸವಾಲು
ಬೆಂಗಳೂರಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಅವಧಿಯಲ್ಲಿ ಅವ್ಯಹಾರ ನಡೆದಿದ್ದರೆ ಕ್ರಮ ಕೈಗೊಳ್ಳಿ ನಿಮ್ಮ ಕೈಯಲ್ಲಿ ಆಡಳಿತ ಇದೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನು ಅಲ್ಲ ಎಂದು ಅಲ್ಲಮ ಪ್ರಭು ಹೇಳಿದ್ದಾರೆ. ಮೂರು ವರ್ಷದಿಂದ ಅಧಿಕಾರವನ್ನು ಜನರು ನಿಮಗೆ ಕೊಟ್ಟಿದ್ದಾರೆ. ಬೆಂಗಳೂರನ್ನು ಹಾಳು ಮಾಡಿ ಕರಪ್ಶನ್ ಕ್ಯಾಪಿಟಲ್, ಗಾರ್ಬೇಜ್ ಕ್ಯಾಪಿಟಲ್ ಮಾಡಿದ್ದೀರ. ಇದೆಲ್ಲವನ್ನು ಕ್ಲೀನ್ ಮಾಡಬೇಕಿತ್ತು. ಯಾರು ಬೇಡ ಎಂದಿದ್ದರು? ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಜನ ಛೀ ಥೂ ಎಂದು ಉಗಿಯುತ್ತಿದ್ದಾರೆ ಎಂದ ಶಿವಕುಮಾರ್, 40% ಕಮಿಷನ್ ತೆಗೆದುಕೊಂಡಿದ್ದೀರ, ಕಾರ್ಪೊರೇಷನ್ ಅಲ್ಲಿ 50% ಕಮಿಷನ್ ತೆಗೆದುಕೊಂಡಿದ್ದೀರ. ಈಗ ನಮ್ಮ ಮೇಲೆ ಅರೋಪ ಮಾಡುತ್ತಿದ್ದೀರ. ಯಾರ್ಯಾರು ಒತ್ತುವರಿ ಮಾಡಿದ್ದಾರೆ ಎಲ್ಲರಲ್ಲೂ ಬಂಧಿಸಿ. ಒತ್ತುವರಿ ತೆರವುಗೊಳಿಸದಿರಲು ನಿಮ್ಮನ್ನು ತಡೆದವರು ಯಾರು? ಕಾಂಗ್ರೆಸ್ ಪಕ್ಷ ಜನರನ್ನು ರಕ್ಷಣೆ ಮಾಡಿದೆ. ಬೆಂಗಳೂರನ್ನು ಬೆಳೆಸಿದೆ, ಹಿರಿಯರೆಲ್ಲ ಸಹಕಾರ ಕೊಟ್ಟಿದ್ದಾರೆ. ನಿಮ್ಮ ಕೈಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Bengaluru Rain | ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ