ಮೈಸೂರು: ಸಿಎಂ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ತಿರುಗೇಟು ನೀಡಲು ಕಾಂಗ್ರೆಸ್‌ನಿಂದ ಮೈಸೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಜನಾಂದೋಲನ ಸಭೆ (Congress Meeting) ನಡೆದಿದ್ದು, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಜನಾಂದೋಲನ ಸಭೆಯಲ್ಲಿ ಪ್ರಮುಖವಾಗಿ ಮೂರು ಸಂದೇಶಗಳನ್ನು ಆಡಳಿತ ಪಕ್ಷ ರವಾನೆ ಮಾಡಿದೆ. ಮುಡಾದಲ್ಲಿ ಸಿಎಂ ಪಾತ್ರ ಇಲ್ಲ, ವಿಪಕ್ಷಗಳ ಪಾದಯಾತ್ರೆಗೆ ಹೆದರಲ್ಲ, ರಾಜಭವನಕ್ಕೂ ಸಂದೇಶ ರವಾನೆ ಮಾಡಲು ಕಾಂಗ್ರೆಸ್ ಸಭೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್ ಮುನಿಯಪ್ಪ,ಜಮೀರ್ ಅಹಮದ್ ಖಾನ್, ಆರ್.ಬಿ. ತಿಮ್ಮಾಪುರ್, ಎಚ್.ಸಿ. ಮಹದೇವಪ್ಪ, ಈಶ್ವರ್ ಖಂಡ್ರೆ, ರಹೀಂಖಾನ್ ಮತ್ತಿತರರು ಹಾಜರಿದ್ದರು.
ನಮ್ಮದು ಅಧರ್ಮಿಗಳ ವಿರುದ್ಧ ಹೋರಾಟ ಎಂದ ಡಿಕೆಶಿ
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದೆವು. 15 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಹೋರಾಟ ಮಾಡಿದ್ದೆವು. ಇಂದು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇಂದು ಬಿಜೆಪಿ, ಜೆಡಿಎಸ್ ಪಾಪ ವಿಮೋಚನೆಯ ಯಾತ್ರೆ ಮಾಡುತ್ತಿದ್ದಾರೆ. ನಮ್ಮದು ಅಧರ್ಮಿಗಳ ವಿರುದ್ಧ ಹೋರಾಟ ಎಂದರು.
ಇದನ್ನೂ ಓದಿ | Vinesh Phogat: ಪ್ರಕಾಶ್ ರೈ ವಿರುದ್ಧ ಅಹಿಂಸಾ ಚೇತನ್ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ
ಕಾಂಗ್ರೆಸ್ ಇತಿಹಾಸ ರಾಜ್ಯದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಇತಿಹಾಸ. ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಬಂದಿದೆ. ಹತ್ತು ತಿಂಗಳಲ್ಲಿ ಸರ್ಕಾರ ಬೀಳಿಸುತ್ತೇವೆ ಎಂದಿದ್ದರು. ಬ್ರಿಟಿಷರು ಸಹ ಕಾಂಗ್ರೆಸ್‌ನ ಏನೂ ಮಾಡಲು ಆಗಲಿಲ್ಲ. ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. 19 ಶಾಸಕರನ್ನು ಮಾತ್ರ ಕುಮಾರಸ್ವಾಮಿ ಗೆಲ್ಲಿಸಿದ್ದು, ನನ್ನ ನಾಯಕತ್ವದಲ್ಲಿ 136 ಸ್ಥಾನ ಗೆದ್ದಿದ್ದೇವೆ. ಕುಮಾರಸ್ವಾಮಿ ನೀನು ಎರಡು ಜನ್ಮ ಎತ್ತಿ ಬಂದರೂ ಈ ಸರ್ಕಾರವನ್ನು ಏನೂ ಮಾಡಕ್ಕೆ ಆಗಲ್ಲ ಎಂದರು.
ಕುಮಾರಸ್ವಾಮಿ ನೀನು ಬಿಜೆಪಿ ಜೊತೆ ಸೇರಿ ಪಾದಯಾತ್ರೆ ಮಾಡುತ್ತೀಯಾ? ಸಿದ್ದರಾಮಯ್ಯರ ರಾಜೀನಾಮೆ ಕೇಳಿತ್ತೀಯಾ? ಈ ಬಂಡೆ ಸಿದ್ದರಾಮಯ್ಯ ಜೊತೆ ಇರುತ್ತೆ, ಸಿಎಂ ಜೊತೆ 136 ಶಾಸಕರು ಇದ್ದಾರೆ. ಕಾಂಗ್ರೆಸ್‌ಗೆ ಮತ ಹಾಕಿರುವ ಕೋಟ್ಯಂತರ ಮತದಾರರು ಇದ್ದಾರೆ. ಇನ್ನೂ ಹತ್ತು ವರ್ಷ ಆದ್ರೂ ಕಾಂಗ್ರೆಸ್ ಸರ್ಕಾರ ತೆಗೆಯಲು ಸಾಧ್ಯವಿಲ್ಲ ಎಂದರು.
ಸಿಎಂ ಪತ್ನಿ ಪಾರ್ವತಿ ಅವರಿಗೆ ಅರಿಶಿಣ ಕುಂಕುಮಕ್ಕೆ ಅಣ್ಣಾ ಜಮೀನು ಕೊಟ್ಟರು. ಆ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡಿತ್ತು. ಜಮೀನು ವಾಪಸು ಕೊಡಿ ಎಂದು ಕೇಳಿದಾಗ, ವಾಪಸು ಕೊಡಲು ಆಗಲ್ಲ ಎಂದು 14 ನಿವೇಶನಗಳು ನೀಡಿದ್ದಾರೆ. ನನ್ನಂಥವನ ಜಮೀನು ಆಗಿದ್ದರೆ ಹೋರಾಟ ಬೇರೆ ರೀತಿ ಇರುತ್ತಿತ್ತು. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನಿದೆ ಎಂದು ಕಿಡಿಕಾರಿದರು.
ಬೊಮ್ಮಾಯಿ ಸರ್ಕಾರದ ಮೇಲೆ 28 ಹಗರಣಗಳಿವೆ . ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿ ಅಂತೆ, 50 ಡಿನೋಟಿಫಿಕೇಷನ್ ಕೇಸ್ ಇವೆ ಎಂದು ಅಧಿಕಾರಿ ಹೇಳುತ್ತಿದ್ದರು. ಇವೆಲ್ಲವೂ ಹೊರಗೆ ತರುತ್ತೇವೆ. ವಿಜೇಯೇಂದ್ರ ನಿಮ್ಮ ಅಪ್ಪ ಯಾಕೆ ಕಣ್ಣೀರು ಹಾಕಿದ್ದರು, ಯಾಕೆ ರಾಜೀನಾಮೆ ಕೊಟ್ಟರು, ಉತ್ತರ ಕೊಡು ಎಂದು ಆಗ್ರಹಿಸಿದರು.
ದೇವೇಗೌಡರ ಕುಟುಂಬ ಯಾರನ್ನೂ ಬೆಳೆಸಿಲ್ಲ. ಸಿದ್ದರಾಮಯ್ಯ, ಬಿ.ಎಲ್. ಶಂಕರ್ ಇಂದ ಹಿಡಿದು ಎಲ್ಲರನ್ನೂ ಹೊರಗೆ ಹಾಕಿದ್ದರು. ಈಗ ಸಿದ್ದರಾಮಯ್ಯ ಅವರನ್ನು ಇಳಿಸಕ್ಕೆ ಮುಂದಾಗಿದ್ದಾರೆ. ಸ್ವಂತ ಸಹೋದರನ ಜೈಲಿಗೆ ಕಳುಹಿಸಿದರು, ನನ್ನ ವಿರುದ್ಧ ಕೇಸ್ ಹಾಕಿಸಿದರು. ಆದರೆ, ಸಿದ್ದರಾಮಯ್ಯ ಅವರನ್ನು ಏನು ಮಾಡಲು ಆಗಲ್ಲ. ನಾವು ಅವರ ಬೆನ್ನಿಗೆ ಇದ್ದೇವೆ, ನಿಮ್ಮನ್ನ ಚಾಮುಂಡೇಶ್ವರಿ ಕ್ಷಮಿಸಲ್ಲ ಎಂದರು.