ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr K Sudhakar) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಸುಧಾಕರ್ ಅವರಿಗೆ ಈ ಗೆಲುವು ರಾಜಕೀಯದಲ್ಲಿ ಪುನರ್ಜನ್ಮ ಸಿಕ್ಕಂತಾಗಿದೆ. ಇದರ ಬೆನ್ನಲ್ಲೇ, ಸುಧಾಕರ್ ಅವರು ಒಂದೇ ಒಂದು ಮತದಿಂದ ಗೆದ್ದರೂ ರಾಜೀನಾಮೆ ನೀಡುತ್ತೇನೆ ಎಂದಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿರುದ್ಧ ಆಕ್ರೋಶ, ಟ್ರೋಲ್, ಮೀಮ್‌ಗಳು ಹರಿದಾಡುತ್ತಿವೆ. ಇದರ ಮಧ್ಯೆಯೇ, ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾದ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಆದರೆ, ಇದು ನಕಲಿ ಪೋಸ್ಟ್ ಎಂಬುದು ಬಳಿಕ ಗೊತ್ತಾಗಿದೆ.
ಪತ್ರದಲ್ಲಿ ಏನಿದೆ?
“ಬಾಲ್ಯದಿಂದಲೇ ಪುಣ್ಯಕೋಟಿ ಕಥೆಯನ್ನು ಆದರ್ಶವಾಗಿರಿಸಿಕೊಂಡು, “ಕೊಟ್ಟ ಮಾತು, ಇಟ್ಟ ಹೆಜ್ಜೆ ತಪ್ಪಬಾರದು” ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತಾ ಬಂದವನು ನಾನು. ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿರುತ್ತೇನೆ. ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಹಿಂದೆ ಆಡಿದ ಮಾತಿಗೆ ಬದ್ಧನಾಗಿ, ಸ್ವಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ” ಎಂಬ ಪತ್ರವು ವೈರಲ್ ಆಗಿದೆ.
ವೈರಲ್ ಆಗಿರುವ ರಾಜೀನಾಮೆ ಪತ್ರ
ಪ್ರದೀಪ್ ಈಶ್ವರ್ ಅವರು ರಾಜೀನಾಮೆ ನೀಡಿರುವ ಕುರಿತು ವೈರಲ್ ಆದ ಪತ್ರವನ್ನು ಪರಿಶೀಲನೆ ನಡೆಸಲಾಗಿದ್ದು, ಅದು ನಕಲಿ ರಾಜೀನಾಮೆ ಪತ್ರ ಎಂಬುದಾಗಿ ತಿಳಿದುಬಂದಿದೆ. ಆದಾಗ್ಯೂ, ಪ್ರದೀಪ್ ಈಶ್ವರ್ ಅವರು ಸುಧಾಕರ್ ಕುರಿತು ಹೇಳಿದ್ದ ಹಳೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಡಿದ ಮಾತಿನಂತೆ ಪ್ರದೀಪ್ ಈಶ್ವರ್ ಅವರು ರಾಜೀನಾಮೆ ನೀಡಬೇಕು ಎಂದು ಜನರು, ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಆದರೆ, ಸುಧಾಕರ್ ಗೆಲುವಿನ ಕುರಿತು ಪ್ರದೀಪ್ ಈಶ್ವರ್ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಡಾ.ಕೆ. ಸುಧಾಕರ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 1,62,099 ಮತಗಳ ಅಂತರದಿಂದ ಜಯಭೇರಿ ಮೊಳಗಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಸುಧಾಕರ್ ಅವರು ಈ ಬಾರಿ ಲೋಕಸಭಾ ಟಿಕೆಟ್ ಪಡೆದು ಗೆದ್ದು ಬೀಗಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ಈ ಹಿಂದೆ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್ ಮಾಡುತ್ತಿದ್ದಾರೆ.