ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 65 ದಿನಗಳಷ್ಟೇ ಕಳೆದಿದೆ. ಈಗಲೇ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಅಲ್ಲದೆ, ಬಿಜೆಪಿ 40 ಪರ್ಸೆಂಟ್ ಸರ್ಕಾರ, ವರ್ಗಾವಣೆ ದಂಧೆ ಮಾಡುತ್ತಿದೆ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ವರ್ಗಾವಣೆ ದಂಧೆಗೆ ಇಳಿದಿದೆಯೇ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್‌ನ ಆಳಂದ ಶಾಸಕ ಬಿ.ಆರ್. ಪಾಟೀಲ್ (Aland MLA BR Patil) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರದ ಬಗ್ಗೆ ಕಿಡಿಕಾರಿದ್ದಾರೆ. ಅಂದರೆ ಕಲಬುರಗಿ ಉಸ್ತುವಾರಿ ಪ್ರಿಯಾಂಕ್ ಖರ್ಗೆ (Minister Priyank Kharge) ವಿರುದ್ಧ ಬಹಿರಂಗವಾಗಿ ಅವರು ಅಸಮಾಧಾನವನ್ನು ಹೊರಹಾಕಿದಂತಾಗಿದೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ (Karnataka Politics) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಈಗ ಜಿಲ್ಲಾ ಉಸ್ತುವಾರಿ ಸಚಿವರ (District Incharge Ministers) ವಿರುದ್ಧ ಬಿ.ಆರ್ ಪಾಟೀಲ್ ಗರಂ ಆಗಿದ್ದು, ಪತ್ರದಲ್ಲಿ ಸಚಿವರ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ (Transfer racket) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮೂರನೇ ವ್ಯಕ್ತಿಯಿಂದ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆಂದು ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ ಮತ್ತು ಇಲಾಖೆಗೆ ಸಂಬಂಧಿಸಿದ ಅನುದಾನದ ಬಗ್ಗೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: CM Siddaramaiah : ಸಿಎಂಗೆ ಡಬಲ್ ಟ್ರಬಲ್ ! ಸಚಿವರ ಮೇಲೆ ಕಾಂಗ್ರೆಸ್ ಶಾಸಕರಿಂದಲೇ ದೂರು
ಮನವಿ ಪತ್ರದಲ್ಲೇನಿದೆ?
“ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರದ ವಿಷಯ.
ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ. ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಮತ್ತೊಂದು ಮಹತ್ವದ ಆರೋಪವೆಂದರೆ ಹಿರಿಯ ಶಾಸಕರೊಬ್ಬರು ತಮ್ಮ ಸಂಬಂಧಿಯಾಗಿರುವ ಅಧಿಕಾರಿಯೊಬ್ಬರಿಗೆ ವರ್ಗಾವಣೆ ಮಾಡಿಕೊಡುವಂತೆ ಶಿಫಾರಸು ಪತ್ರವನ್ನು ಬರೆದುಕೊಡಲಾಗಿತ್ತು. ಆ ಅಧಿಕಾರಿಯು ಸಂಬಂಧಪಟ್ಟ ಇಲಾಖೆ ಸಚಿವರ ಬಳಿಗೆ ಆ ಪತ್ರವನ್ನು ತೆಗೆದುಕೊಂಡು ಹೋದರೆ, ಆ ಸಚಿವರ ಸಹೋದರ ಇವರ ಬಳಿ ವರ್ಗಾವಣೆ ಹಣ ಕೇಳಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ.
ಇದಲ್ಲದೆ, ಸರ್ಕಾರ ರಚನೆಯಾಗಿ 60 ದಿನ ಕಳೆದರೂ ಯಾವುದೇ ಕೆಲಸ ಆಗುತ್ತಿಲ್ಲ. ಇನ್ನೂ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ನಾವು ಕೇಳಿದ ಅಧಿಕಾರಿಯನ್ನು ನಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡುತ್ತಿಲ್ಲ. ನಮ್ಮ ಅಧಿಕಾರವನ್ನು ಮಂತ್ರಿಗಳೇ ಚಲಾಯಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರಗಳಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಅವರ ಕಚೇರಿ ಬಳಿ ಹೋದರೂ ಸಚಿವರ ಭೇಟಿಗೂ ಮುನ್ನ ಮತ್ತೊಬ್ಬರನ್ನು ಭೇಟಿಯಾಗಬೇಕು. ಶಾಸಕರಿಗೆ ಸರಿಯಾದ ಗೌರವ ಕೊಡುತ್ತಿಲ್ಲ. ನಮಗೆ ಮಧ್ಯವರ್ತಿ ಮಿನಿಸ್ಟರ್ ಬೇಕಿಲ್ಲ. ನೇರ ನೇರ ಭೇಟಿ ಮಾಡುವ ಮಿನಿಸ್ಟರ್ ಬೇಕು. ನಾವು ಗೆದ್ದಿರುವುದರಿಂದಲೇ ಕಾಂಗ್ರೆಸ್‌ಗೆ 135 ಸ್ಥಾನ ಸಿಕ್ಕಿರುವುದು. ನಾವೇನು ಸಾಮಾನ್ಯ ಕಾರ್ಯಕರ್ತರಲ್ಲ. ಜನರಿಂದ ಆಯ್ಕೆಯಾಗಿ ಬಂದ ಶಾಸಕರು. ನಮ್ಮ ಕೆಲ ವಿಚಾರಗಳು ಹಂಚಿಕೊಳ್ಳಬೇಕು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಜುಲೈ 27ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದ ಸಿದ್ದರಾಮಯ್ಯ
ಈಗ ಸ್ವಪಕ್ಷೀಯ ಶಾಸಕರ ವಿರೋಧ ಬಂದಿದ್ದರಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ, ಜುಲೈ 27ರಂದು ಶಾಸಕಾಂಗ ಪಕ್ಷದ ಸಭೆ (Legislative Party Meeting) ಕರೆದಿದ್ದಾರೆ. ಆದರೆ, ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಶಾಸಕರು ಸಚಿವರ ವಿರುದ್ಧವಾಗಿ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಬರೆದ ಪತ್ರವು ಸಹ ಬಹಿರಂಗಗೊಂಡಿದೆ.
ಇದನ್ನೂ ಓದಿ: Lok sabha Election 2024 : ಲೋಕಸಭೆಗೆ ನಮ್ಮದು ಸ್ವತಂತ್ರ ಸ್ಪರ್ಧೆ; ಆದರೆ… ಎಂದ ಎಚ್.ಡಿ. ದೇವೇಗೌಡ!
ಪ್ರಿಯಾಂಕ್ ಖರ್ಗೆ ಸೇರಿ ಎಲ್ಲರ ಮೇಲೂ ಆಕ್ರೋಶ
ಇನ್ನು ಬಿ.ಆರ್. ಪಾಟೀಲ್ ಅವರು ಆಳಂದ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಬರೆದ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಂದು ಉಲ್ಲೇಖಿಸಿದ್ದಾರೆ. ಹಾಗೆ ನೋಡುವುದಾದರೆ ಕಲಬುರಗಿ ಜಿಲ್ಲೆಗೆ ಪ್ರಿಯಾಂಕ್ ಖರ್ಗೆ ಉಸ್ತುವಾರಿ ಸಚಿವರು. ಆದರೆ, ಅವರೊಬ್ಬರ ಬಗ್ಗೆಯೇ ಆರೋಪವಾಗಿದ್ದರೆ, ಉಳಿದ ಶಾಸಕರು ಈ ಪತ್ರಕ್ಕೆ ಸಹಿ ಹಾಕುತ್ತಿರಲಿಲ್ಲ. ಹೀಗಾಗಿ ಎಲ್ಲ ಇಲಾಖೆಯ ಸಚಿವರ ಮತ್ತು ಜಿಲ್ಲಾ ಉಸ್ತುವಾರಿಗಳ ಮೇಲೆ ಕಾಂಗ್ರೆಸ್ ಹಿರಿಯ ಶಾಸಕರು ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.