ಹುಬ್ಬಳ್ಳಿ: ರಾಜ್ಯದಲ್ಲಿ ಒಬ್ಬ ಅಶಕ್ತ ಮುಖ್ಯಮಂತ್ರಿ ಇರುವುದರಿಂದ ಜನರಿಗಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿಗೇ ಈ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು ಎನಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.
ಕೋಲಾರದ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಲು ಸ್ಪೀಕರ್‌ಗೆ ಸಮಯ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೂ ಸರಿಯಿಲ್ಲ. ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ಕೊಟ್ಟಿದ್ದನ್ನು ಅಲ್ಲಿಯ ಶಾಸಕರು ವಿರೋಧಿಸುತ್ತಿದ್ದಾರೆ ಎನ್ನುವುದು ಸತ್ಯ. ಅಲ್ಲದೇ, ಮುಖ್ಯಮಂತ್ರಿ ಒಬ್ಬ ಅಶಕ್ತ ಮುಖ್ಯಮಂತ್ರಿ ಆಗಿದ್ದರಿಂದ ರಾಜೀನಾಮೆ ಸಲ್ಲಿಕೆ ನಿರ್ಧಾರದಂಥ ಚಟುವಟಿಕೆಯಲ್ಲಿ ಕಾಂಗ್ರೆಸ್ ಶಾಸಕರು ತೊಡಗಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಚ್ಚಾಟ, ಕೇಂದ್ರ ಸರ್ಕಾರ NDRF ನಲ್ಲಿ 2.36 ಲಕ್ಷ ಕೋಟಿ ಕೊಟ್ಟರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು, ದೇಶದ ಪ್ರಧಾನಿ ಬಗ್ಗೆ ಆಗೌರವದ ಮಾತು ಮತ್ತು ಪಕ್ಷದೊಳಗಿನ ಆಂತರಿಕ ತಿಕ್ಕಾಟ ಇದೆಲ್ಲದರಿಂದ ಕಾಂಗ್ರೆಸ್ ಶಾಸಕರು ಬೇಸತ್ತು ಹೋಗಿದ್ದಾರೆ. ಹಾಗಾಗಿ ಈ ಸರ್ಕಾರ ಇದ್ದರೆಷ್ಟು-ಬಿದ್ದರೆಷ್ಟು ಎಂಬ ನಿರ್ಧಾರಕ್ಕೆ ಕೋಲಾರ ಶಾಸಕರು ಬಂದಂತಿದೆ ಎಂದು ವಿಶ್ಲೇಷಿಸಿದರು.
ಪೊಳ್ಳು ಗ್ಯಾರಂಟಿಗಳಿಂದಾಗಿ ಕಾಂಗ್ರೆಸ್ ಶಾಸಕರು ಮಾತ್ರವಲ್ಲ, ರಾಜ್ಯದ ಜನರೂ ಈ ಸರ್ಕಾರ ಇರದಿರುವುದೇ ಒಳ್ಳೆಯದು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.
ಇದನ್ನೂ ಓದಿ | Water Crisis: ಗಂಡಸುತನ ಇಲ್ಲದ, ನಪುಂಸಕ ಕಾಂಗ್ರೆಸ್ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ವಾಗ್ದಾಳಿ
ಸರ್ಕಾರ ನಡೆಸಲು ಆಗುತ್ತಿಲ್ಲ ಇವರಿಗೆ
ರಾಜ್ಯದಲ್ಲಿ ಕಾಂಗ್ರೆಸ್‌ನವರಿಗೆ ಸರಿಯಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಶೇ.75ರಷ್ಟು ಅನುದಾನವನ್ನು ಕೇಂದ್ರ ಕೊಟ್ಟಿದ್ದರೂ ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ತಮ್ಮ ವೈಫಲ್ಯವನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವಿಪಕ್ಷಗಳ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು.
ಪ್ರಲ್ಹಾದ್ ಜೋಶಿ ಬದಲಿಸಲ್ಲ: ವೀರಶೈವ ಸ್ವಾಮೀಜಿಗಳಿಗೆ ಬಿಎಸ್‌ವೈ ಸ್ಪಷ್ಟ ಸಂದೇಶ
ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ (Lok Sabha Election 2024) ಯಾವುದೇ ಕಾರಣಕ್ಕೂ ಪ್ರಲ್ದಾದ್ ಜೋಶಿ (Pralhad Joshi) ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನಗರದಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಸಚಿವ ಪ್ರಲ್ಹಾದ್ ಜೋಶಿ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ತಪ್ಪು ಗ್ರಹಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾವುದೇ ಕಾರಣಕ್ಕೂ ಜೋಶಿ ಅವರನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದರ ಹಿಂದೆ ಪ್ರಲ್ಹಾದ್ ಜೋಶಿ ಅವರ ಪಾತ್ರವಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಅವರಿಂದ ತಪ್ಪು ಗ್ರಹಿಕೆಯಾಗಿದೆ. ಅವರೊಂದಿಗೆ ಖುದ್ದು ನಾನೇ ಮಾತನಾಡಿ ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಎಸ್‌ವೈ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 150ಕ್ಕೂ ಹೆಚ್ಚು ಶ್ರೀಗಳು ಜೋಶಿ ಅವರನ್ನು ಬದಲಿಸುವಂತೆ ಗಡುವು ನೀಡಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಎಲ್ಲಾ ಸ್ವಾಮೀಜಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ | Lok Sabha Election 2024: ಡಿ.ಕೆ. ಶಿವಕುಮಾರ್, ಹೇಮಂತ್ ನಿಂಬಾಳ್ಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಹೆಚ್ಚು ಅಂತರದಲ್ಲಿ ಜೋಶಿ ಗೆಲ್ತಾರೆ
ಪ್ರಲ್ಹಾದ್‌ಜೋಶಿ ಅವರು ಪಕ್ಷದ ಹಿರಿಯ ನಾಯಕರು. ಸಂಸದರಾಗಿ, ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಸ್ವಾಮೀಜಿಗಳು ಮತ್ತು ಜನಾಂಗದವರು ಬಿಜೆಪಿ ಪರ ಇದ್ದಾರೆ. ಹಾಗಾಗಿ ಜೋಶಿ ಅವರು ಹಿಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಬಿಎಸ್‌ವೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ ಮತ್ತಿತರರು ಮುಖಂಡರಿದ್ದರು.