Site icon Vistara News

Karnataka Politics : ನಿಗಮ – ಮಂಡಳಿ ಮಧ್ಯದೊಳಗೆ ಶುರುವಾಗಿದೆ ಕೈ ಶಾಸಕರ ಲಾಬಿ!

CM Siddaramaiah

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಇತ್ತೀಚೆಗೆ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವರ ವರ್ತನೆ ಬಗ್ಗೆ ಹಿರಿಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ವರ್ಗಾವಣೆ ಶಿಫಾರಸು ನೀಡಿದರೆ ದುಡ್ಡು ಕೇಳುತ್ತಾರೆ. ಅನಾವಶ್ಯಕವಾಗಿ ನಮ್ಮ ಕಾಯಿಸುತ್ತಾರೆ. ಜತೆಗೆ ಗೌರವ ಕೊಡುವುದಿಲ್ಲ ಎಂದು ದೂರು ನೀಡಿದ್ದರು. ವಿಶೇಷವಾಗಿ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡುವಂತೆಯೂ ಬೇಡಿಕೆ ಇಟ್ಟಿದ್ದರು. ಕೊನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (Congress CLP Meeting) ಸ್ವಲ್ಪ ಮಟ್ಟಿನ ಸಮಾಧಾನ ಮಾಡಲಾಗಿದೆ. ಈಗ ಈ ಆಕ್ರೋಶ ಶಮನಕ್ಕೆ ನಿಗಮ, ಮಂಡಳಿಗಳ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಲಾಬಿಗಳು ಶುರುವಾಗಿವೆ.

ಈಗ ಕಾಂಗ್ರೆಸ್‌ ಶಾಸಕರು, ನಾಯಕರಲ್ಲಿ ಪೈಪೋಟಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಮೇಲೆ ಶಾಸಕರಿಂದ ಒತ್ತಡ ಹಾಗೂ ಲಾಬಿಗಳು ನಡೆಯುತ್ತಿವೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದ ಕೆಲ ಶಾಸಕರಿಗೆ ಈಗ ಇಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ.

ಇದನ್ನೂ ಓದಿ: Udupi Toilet Case : ಖುಷ್ಬೂ ದಾರಿ ತಪ್ಪಿಸಿದ್ರಾ ಆಸ್ಕರ್‌ ಸಂಬಂಧಿ? ; ಬಿಜೆಪಿ ಗಂಭೀರ ಆರೋಪ

ಅತೃಪ್ತರನ್ನು ಸಮಾಧಾನಪಡಿಸಲು ಸಿಎಂ ಪ್ಲ್ಯಾನ್

ಇನ್ನು ವಿಧಾನಸಭಾ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಕೆಲ ಪರಿಷತ್ ಸದಸ್ಯರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹುದ್ದೆ ನೀಡುವುದಾಗಿ ಆಗಲೇ ಕಾಂಗ್ರೆಸ್‌ ನಾಯಕರು ಸಮಾಧಾನಪಡಿಸಿದ್ದರು. ಈಗ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿ ಶಾಸಕರಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ, ಅಧ್ಯಕ್ಷ ಸ್ಥಾನವನ್ನಾದರೂ ನೀಡಿ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷತೆ ಹಂಚಿಕೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡಿ ಶಾಸಕರನ್ನು, ಅತೃಪ್ತರನ್ನು ಸಮಾಧಾನಪಡಿಸಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.

ಡಾ. ಕೆ. ಸುಧಾಕರ್‌ ಸವಾಲಿಗೆ ಪ್ರದೀಪ್‌ ಈಶ್ವರ್‌ ಉತ್ತರ

ಚಿಕ್ಕಬಳ್ಳಾಪುರ‌: ಮಾಜಿ ಶಾಸಕ ಡಾ. ಕೆ. ಸುಧಾಕರ್‌ (Dr K Sudhakar) ಮತ್ತು ಚಿಕ್ಕಬಳ್ಳಾಪುರದ ಹಾಲಿ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಕದನ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಪ್ರದೀಪ್‌ ಈಶ್ವರ್‌ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಂದು ಚುನಾವಣೆಗೆ ನಿಲ್ಲಲಿ, ನಾನೂ ಬರ್ತೇನೆ ಎಂದು ಸುಧಾಕರ್‌ ಅವರು ಶುಕ್ರವಾರವಷ್ಟೇ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ವಾಗ್ದಾಳಿ ಮಾಡಿರುವ ಪ್ರದೀಪ್‌ ಈಶ್ವರ್‌ ನಿಮಗೆ ನಿಮ್ಮ ಊರಲ್ಲೇ ಗೌರವ ಇಲ್ಲ ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮಾತನಾಡಿದ್ದ ಅವರು ಮಾತಿನ ಆರಂಭದಲ್ಲೇ ʻʻಮಾನ್ಯ ಮಾಜಿ ಶಾಸಕ ಮತ್ತು ಜೀವನಪೂರ್ತಿ ಮಾಜಿ ಶಾಸಕರಾಗಿಯೇ ಉಳಿಯಲಿರುವ ಡಾ. ಕೆ. ಸುಧಾಕರ್ʼʼ ಎಂದು ವ್ಯಂಗ್ಯವಾಡಿದ್ದರು.

ʻʻಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಪಕ್ಷೇತರವಾಗಿ ಸ್ಪರ್ಧೆ ಮಾಡೋಣ ಅಂತ ಹೇಳ್ತೀರಲ್ವಾ ಸುಧಾಕರ್‌. ಯಾಕೆ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ?ʼʼ ಎಂದು ಪ್ರದೀಪ್‌ ಈಶ್ವರ್ ಗೇಲಿ ಮಾಡಿದ್ದಾರೆ. ʻʻತಾಕತ್ ಇದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡು ಅಂತೀರಲ್ವಾ? ನಾನು ನಿಮ್ಮನ್ನು ಸೋಲಿಸಿ ಇನ್ನೂ ಎರಡು ತಿಂಗಳಷ್ಟೇ ಆಗಿರುವುದು. ಮುಂದಾದರೂ ಯಾವುದಾದರೂ ಬೇರೆ ಕ್ಷೇತ್ರ ಹುಡುಕಿಕೊಳ್ಳಿ. ಈ ಕ್ಷೇತ್ರದ ಮೇಲೆ ನಂಬಿಕೆ ಇಟ್ಟುಕೊಂಡರೆ ಇನ್ನೂ ಐದು ವರ್ಷ ಸಫರ್ ಆಗ್ತೀರಾʼʼ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Weather Report : ಕರಾವಳಿಯಲ್ಲಿ ಬಿರುಗಾಳಿ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಪರೇಸಂದ್ರದಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲ

ʻʻಸುಧಾಕರ್‌ ಮುಖ ನೋಡಿದರೆ ಐನೂರೂ ವೋಟೂ ಬರಲ್ಲ. ನನಗೆ ಐದು ಸಾವಿರ ಓಟಾದ್ರೂ ಬರುತ್ತದೆ. ಕಳೆದ ಚುನಾವಣೆಯಲ್ಲಿ ಪರೇಸಂದ್ರದಲ್ಲಿ ಅವರಿಗೆ ಸಿಕ್ಕಿದ್ದು ಆರುನೂರು ಓಟು, ನನಗೆ ಯಾಕೆ ಸಾವಿರದ ಆರನೂರು ಓಟು ಅಂತ ಅವರೇ ಯೋಚನೆ ಮಾಡ್ಲಿ. ಹುಟ್ಟೂರಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲʼʼ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ಅಧಿಕಾರ ಯಾವತ್ತೂ ಶಾಶ್ವತ ಅಲ್ಲ

ʻʻನಾನು ಯಾವತ್ತೂ ಹಿಂದೆ ಮುಂದೆ ಪೊಲೀಸ್ ಜೀಪ್‌ಗಳನ್ನು ಇಟ್ಟುಕೊಂಡು ಓಡಾಡಿದವನಲ್ಲ. ನಾನು ನಿಮ್ಮ ಹುಡುಗ ಸರ್, ಅಧಿಕಾರ ನನಗೂ ಶಾಶ್ವತ ಅಲ್ಲ ನಿಮಗೂ ಶಾಶ್ವತ ಅಲ್ಲʼʼʼ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

Exit mobile version