Site icon Vistara News

Internal Reservation : ಒಳ ಮೀಸಲಾತಿ ವಿರುದ್ಧ ಸಿಡಿದ ಸಿದ್ದು ಪರಮಾಪ್ತ; ಒಳ ಪೆಟ್ಟಿನ ಆತಂಕದಲ್ಲಿ ಕೈಪಡೆ

Internal Reservation and CM Siddaramaiah

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಬಿಜೆಪಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದ ಒಳ ಮೀಸಲಾತಿ (Internal Reservation) ಚರ್ಚೆಯು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅಲ್ಲದೆ, ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿತ್ತು. ಈಗ ಇದರ ಅನುಷ್ಠಾನ ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಎಸ್‌ಸಿ ಸಮುದಾಯಗಳ (SC community) ಮುಖಂಡರು ಸರ್ಕಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಪರಮಾಪ್ತ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ (MLC Prakash Rathod) ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದು, ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ. ಒಂದು ವೇಳೆ ಈ ಸಂಬಂಧ ಒಂದು ಹೆಜ್ಜೆ ಮುಂದಿಟ್ಟರೂ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್‌ ಮುಂದಾಗಿದೆ.

ಲಂಬಾಣಿ, ಬೋವಿ, ಬಂಜಾರ ಸೇರಿದಂತೆ 51ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಸಮುದಾಯದವರು ಸೇರಿ ಸಂರಕ್ಷಣಾ ಒಕ್ಕೂಟವೊಂದನ್ನು ಕಳೆದ ಬಾರಿ ರಚನೆ ಮಾಡಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ವಿಚಾರವಾಗಿ ಮುಂದಡಿ ಇಟ್ಟಿದ್ದಲ್ಲದೆ, ಒಳ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದರಿಂದ ಬಂಜಾರ, ಬೋವಿ, ಲಂಬಾಣಿ ಸಮುದಾಯದವರು ಸೇರಿದಂತೆ ಪರಿಶಿಷ್ಟರ ಹಲವು ಸಮುದಾಯದವರು ಬೀದಿಗಿಳಿದು ಹೋರಾಟ ಮಾಡಿದ್ದರು. ಸರ್ಕಾರದ ನಿಲುವನ್ನು ಕಟುವಾಗಿ ಖಂಡಿಸಿದ್ದರು. ಇದರ ಪರಿಣಾಮವನ್ನು ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಬೇಕಾಯಿತು. ಈಗ ಕಾಂಗ್ರೆಸ್‌ ಕೊಟ್ಟ ಮಾತಿನಂತೆ ಅನುಷ್ಠಾನಕ್ಕೆ ಮುಂದಾಗಬಾರದು. ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಶಿಫಾರಸನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: Power Point with HPK : ಬೇರೆಯವರಿಗೆ ಸಚಿವ ಸ್ಥಾನ ಕೊಡಿ ಎಂದರೂ ನನಗೇ ಕೊಟ್ಟರು: ಕೃಷ್ಣ ಬೈರೇಗೌಡ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿಯನ್ನು ನೀಡಲಾಗುವುದು ಎಂದು ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಾ. ಜಿ. ಪರಮೇಶ್ವರ್‌ ಹೇಳಿಕೆ ನೀಡಿದ್ದರು. ಆಯಾ ಸಮುದಾಯಕ್ಕೆ ಅನ್ಯಾಯವಾಗದಂತೆ ಮೀಸಲಾತಿಯನ್ನು ನಿಗದಿ ಮಾಡುವುದಾಗಿ ಹೇಳಿದ್ದರು. ಈಗ ಇದೇ ಪರಿಶಿಷ್ಟ ಜಾತಿ ಸಮುದಾಯದ 51 ಜಾತಿಗಳ ಆತಂಕಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಸಮುದಾಯದಲ್ಲಿ ಒಟ್ಟು 101 ಜಾತಿಗಳಿದ್ದು, ಒಳ ಮೀಸಲಾತಿಯಿಂದ ಬೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯದ 51 ಜಾತಿಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಭಯ ಕಾಡತೊಡಗಿದೆ. ಕಾರಣ, ಸದಾಶಿವ ಆಯೋಗದ ವರದಿಯಲ್ಲಿರುವ ಶಿಫಾರಸುಗಳು.

ಸದಾಶಿವ ಆಯೋಗದ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಬೋವಿ, ಬಂಜಾರದಂತಹ ಕೆಲವು ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಿದ್ದು, ಅವರನ್ನು ಮೀಸಲಾತಿಯಿಂದ ಕೈಬಿಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಇದರಿಂದ ತಮ್ಮ ಇಡೀ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಬೇಡ. ಇದರಿಂದ ನಮ್ಮ ಸಮುದಾಯದ ಜನ ಪೆಟ್ಟು ತಿನ್ನಬೇಕಾಗುತ್ತೆ ಎಂಬುದು ಈಗ ಈ ಜನಾಂಗದವರ ಆತಂಕವಾಗಿದೆ.

ರಾಜಕೀಯವಾಗಿ ಪಕ್ಷಾತೀತ ವಿರೋಧ

ಇನ್ನು ಇದು ರಾಜಕೀಯ ಸ್ವರೂಪ ಪಡೆದುಕೊಂಡಿರುವುದರಿಂದ ಆಯಾ ಸಮುದಾಯಗಳ ರಾಜಕೀಯ ನಾಯಕರೂ ಸಹ ಈ ಒಳ ಮೀಸಲಾತಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಅರವಿಂದ ಲಿಂಬಾವಳಿ ಸಹ ಭಾನುವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದಲ್ಲದೆ, ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಒಳ ಮೀಸಲಾತಿಗೆ ಶಿಫಾರಸು ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದರು. ಇಲ್ಲಿ ಇನ್ನು ಕಾಂಗ್ರೆಸ್‌ನ ಕೆಲವು ಜನಪ್ರತಿನಿಧಿಗಳೂ ಭಾಗಿಯಾಗಿದ್ದು, ಎಲ್ಲರೂ ಇದನ್ನು ಒಕ್ಕೊರಲಿನಿಂದ ವಿರೋಧಿಸಿದ್ದರು. ಇಲ್ಲಿ ರಾಜಕೀಯ ನಾಯಕರ ಆತಂಕಕ್ಕೂ ಕಾರಣವಿದೆ. ಒಂದು ವೇಳೆ ತಾವು ಒಳ ಮೀಸಲಾತಿ ಪರವಾಗಿ ಮಾತನಾಡಿದರೆ, ಲಾಬಿ ಮಾಡಿದರೆ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದು ತಮ್ಮ ರಾಜಕೀಯ ಬದುಕಿನ ಅವನತಿಗೂ ಕಾರಣವಾಗುತ್ತದೆ ಎಂಬುದನ್ನು ಅರಿತಿದ್ದಾರೆ.

ಈ ಒಳ ಮೀಸಲಾತಿಗೆ ಸಂಬಂಧಿಸಿ ಹಲವಾರು ಸಂಗತಿಗಳು ರಾಜಕೀಯವಾಗಿ ಪೆಟ್ಟು ನೀಡುತ್ತಲೇ ಬಂದಿದೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಒಳ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಹೇಳಿಕೊಂಡಿತ್ತು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೆ ಬದ್ಧ ಎಂದು ಹೇಳಿದ್ದರು. ಆದರೆ, ಪಕ್ಷದೊಳಗೆ ವಿರೋಧ ವ್ಯಕ್ತವಾಗಿದ್ದಲ್ಲದೆ, ಹಲವಾರು ಕಾರಣಗಳಿಂದ ಅವರಿಗೆ ಒಳ ಮೀಸಲಾತಿ ಜಾರಿ ಸಾಧ್ಯವಾಗಿರಲಿಲ್ಲ. ಕೊನೆಗೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಾಗ ಮಾತನಾಡಿದ್ದ ಸಿದ್ದರಾಮಯ್ಯ, ಒಳ ಮೀಸಲಾತಿ ಜಾರಿ ಮಾಡದಿರುವುದೇ ತಮ್ಮ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದರು. ಅದಾದ ಬಳಿಕ ಬಂದ ಬಿಜೆಪಿ ಸರ್ಕಾರವು ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕೈತೊಳೆದು ಕೊಂಡಿತ್ತು. ಶಿಫಾರಸಿನಲ್ಲಿ ಸದಾಶಿವ ಆಯೋಗದ ಎಲ್ಲ ಶಿಫಾರಸುಗಳನ್ನು ಪರಿಗಣನೆ ಮಾಡಿರದಿದ್ದರೂ ಬೋವಿ, ಬಂಜಾರ ಸಮುದಾಯಗಳಿಗೆ ಹೋದ ತಪ್ಪು ಸಂದೇಶವು ಬಿಜೆಪಿ ಸೋಲಿಗೆ ಕಾರಣವಾಯಿತು. ಹೀಗಾಗಿ ರಾಜಕೀಯವಾಗಿ ಒಳ ಮೀಸಲಾತಿಯು ಸಾಕಷ್ಟು ಒಳ ಹೊಡೆತಗಳನ್ನು ನೀಡುತ್ತಾ ಬಂದಿದೆ.

ಇದನ್ನೂ ಓದಿ: Power Point with HPK : ಲೋಕಸಭೆಯಲ್ಲಿ ನನಗೆ ಫಂಡ್‌ ಮಾಡಿ ಗೆಲ್ಲಿಸಲು ಸಿಂಡಿಕೇಟ್‌ ಸಿದ್ಧವಾಗಿದೆ: ಕೃಷ್ಣ ಬೈರೇಗೌಡ

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದ ವಿರೋಧ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟವು ಬೃಹತ್‌ ಸಮಾವೇಶವನ್ನು ಏರ್ಪಡಿಸಿತ್ತು. ಇಲ್ಲಿ ಒಳ ಮೀಸಲಾತಿ ಜಾರಿಗೆ ಪಕ್ಷಾತೀತವಾಗಿ ವಿರೋಧ ಕೇಳಿಬಂತು. ಅಲ್ಲದೆ, ಬೋವಿ ಮತ್ತು ಬಂಜಾರ ಸಮುದಾಯದ ಶಾಸಕರು ಸಹ ಇದಕ್ಕೆ ಧ್ವನಿಗೂಡಿಸಿದ್ದರು. ಎಸ್‌ಸಿ ಸಮುದಾಯದಲ್ಲಿ ಒಳ ಮೀಸಲಾತಿ ಜಾರಿ ಮಾಡುವ ನಿರ್ಧಾರ ಕೈಗೊಂಡ ಬಿಜೆಪಿ ಸರ್ಕಾರಕ್ಕೆ ಜನ ಬುದ್ಧಿ ಕಲಿಸಿದ್ದಾರೆ. ಈ ಎರಡು ಸಮುದಾಯಗಳಲ್ಲಿ ಪ್ರಜ್ಞಾವಂತರು ಇದ್ದಾರೆ. ಅಲ್ಲದೆ, ಯಾರಿಗೂ ಅನ್ಯಾಯವಾಗಲು ನಾವು ಬಿಡಬಾರದು. ಕಾಂಗ್ರೆಸ್ ಸರ್ಕಾರದಲ್ಲಿ ಇದನ್ನು ಜಾರಿಗೆ ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಮಾವೇಶದಲ್ಲಿ ಅರವಿಂದ ಲಿಂಬಾವಳಿ, ಚಂದ್ರು ಲಮಾಣಿ, ಮಂಜುಳಾ ಅರವಿಂದ್ ಲಿಂಬಾವಳಿ, ಕಾಂಗ್ರೆಸ್ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಉಪಸ್ಥಿತರಿದ್ದರು.

ಸರ್ಕಾರದ ವಿರುದ್ಧ ಹೋರಾಟಕ್ಕೂ ರೆಡಿ: ಪ್ರಕಾಶ್‌ ರಾಠೋಡ್

ಒಳ ಮೀಸಲಾತಿ ವಿರುದ್ಧ ನಮ್ಮ ಹೋರಾಟವಿದೆ. ಬಿಜೆಪಿ ಸರ್ಕಾರ ಅವೈಜ್ಞಾನಿಕ ತೀರ್ಮಾನ ಕೈಗೊಂಡಿತ್ತು.‌ ಹೀಗಾಗಿಯೇ ಬಿಜೆಪಿಯಲ್ಲಿ ಹಲವು ಸಚಿವರು ಸೋಲು ಕಂಡಿದ್ದಾರೆ. ಒಂದು ಸಮುದಾಯವನ್ನು ಓಲೈಸಲು ಹೋಗಿ 90ಕ್ಕೂ ಅಧಿಕ ಸಮುದಾಯಗಳಿಗೆ ಅನ್ಯಾಯವಾಗಿದೆ. ಹೀಗಾಗಿ ನಾವು ಇದನ್ನು ವಿರೋಧ ಮಾಡಿದ್ದೇವೆ. ಅಲ್ಲದೆ, ಕೇಂದ್ರ ಸಚಿವ ನಾರಾಯಣ ಸ್ವಾಮಿ ಆ ರೀತಿಯ ಮೀಸಲಾತಿ ಹಂಚಿಕೆ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಈ ಹಿಂದೆಯೇ ಹೇಳಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಈ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಒಂದು ವೇಳೆ ಇದರಂತೆ ಮೀಸಲಾತಿ ಜಾರಿ ಮಾಡಲು ಹೊರಟರೆ ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವರದಿ ಮುಗಿದ ಅಧ್ಯಾಯ. ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ 50ಕ್ಕೂ ಅಧಿಕ ಸಮುದಾಯಗಳು ಇದರ ವಿರುದ್ಧ ಇವೆ. ಈ ಹಿಂದೆ ಡಾ. ಜಿ. ಪರಮೇಶ್ವರ್ ಮತ್ತು ಕೆ.ಎಚ್. ಮುನಿಯಪ್ಪ ಕೊಟ್ಟಿರುವ ಒಳ ಮೀಸಲಾತಿಗೆ ಬದ್ಧ ಎಂಬ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Rahul Gandhi: 4 ತಿಂಗಳ ಬಳಿಕ ರಾಹುಲ್‌ ಗಾಂಧಿಗೆ ಮರಳಿದ ಸಂಸತ್‌ ಸದಸ್ಯತ್ವ; ಲೋಕಸಭೆ ಕಾರ್ಯಾಲಯ ಅಧಿಸೂಚನೆ

ಈ ಲೋಕಸಭೆ ಚುನಾವಣೆಯೊಳಗೆ ಜಾರಿ ಡೌಟ್‌

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿಯನ್ನು ಜಾರಿಗೆ ತರಲಿದೆ ಎಂದು ಹೇಳಿಕೆ ನೀಡಿತ್ತು. ಆದರೆ, ಈವರೆಗೆ ಇದರ ಸಂಬಂಧ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ವತಃ ಪ್ರಕಾಶ್‌ ರಾಠೋಡ್‌ ಹೇಳಿದ್ದಾರೆ. ಆದರೆ, ಮುಂದಿನ ವರ್ಷ ಲೋಕಸಭಾ ಚುನಾವಣೆ (Lok Sabha Election 2024) ಇರುವುದರಿಂದ ಸದ್ಯಕ್ಕಂತೂ ಕಾಂಗ್ರೆಸ್‌ ಇದರ ಉಸಾಬರಿಗೆ ಹೋಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈಗ ಈ ವಿಷಯಕ್ಕೆ ಕೈ ಹಾಕಿದರೆ ಬಿಜೆಪಿಯಂತೆ ತಾವೂ ಸಹ ಒಳ ಏಟನ್ನು ತಿನ್ನಬೇಕಾಗಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್‌ ಇದ್ದು, ಎಚ್ಚರಿಕೆಯ ಹೆಜ್ಜೆಯನ್ನಿಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

Exit mobile version