ಬೆಂಗಳೂರು: ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಗಳು ಇತ್ತೀಚಿನ ವರ್ಷಗಳಲ್ಲಿ ವಿಭಜನೆಯಾಗಿ ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಿರುವ ಕುರಿತು ಗಂಭೀರ ಸಭೆಯನ್ನು ನಡೆಸಲಾಗಿದೆ.
ಶಿವಾಜಿನಗರದ ಸಲಾರ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಯಿತು.
ಹುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆಯಿಂದ ಪಕ್ಷಕ್ಕೆ ನಷ್ಟವಾಗಿದೆ. ಆಮ್ ಆದ್ಮಿ ಪಕ್ಷ, ಎಐಎಂಐಎಂ ಪಕ್ಷಗಳು ಮುಸ್ಲಿಂ ಮತಗಳನ್ನು ಒಡೆಯುತ್ತಿವೆ. ಕರ್ನಾಟಕದಲ್ಲಿ ಜೆಡಿಎಸ್ ಸಹ ಸೇರಿಕೊಂಡಿದೆ.
ಇತ್ತೀಚೆಗೆ ಮಾತನಾಡಿದ್ದ ಎಚ್.ಡಿ. ಕುಮಾರಸ್ವಾಮಿ, ತಮ್ಮ ಪಕ್ಷ ಪೂರ್ಣ ಬಹುಮತ ಗಳಿಸಿದರೆ ಮುಸ್ಲಿಂ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಅದೂ ಅಲ್ಲದೇ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿ ಮುಸ್ಲಿಂ ಸಮುದಾಯದವರೇ ಆದ ಸಿಎಂ ಇಬ್ರಾಹಿಂ ಇದ್ದಾರೆ. ಇದೆಲ್ಲದರಿಂದ ಕರ್ನಾಟಕದಲ್ಲೂ ಮುಸ್ಲಿಂ ಮತ ವಿಭಜನೆ ಆಗಬಾರದು ಎಂದು ಸಭೆಯಲ್ಲಿ ಚರ್ಚೆ ಆಗಿದೆ.
ಸುಮಾರು 60 ಕ್ಷೇತ್ರಗಳು ಮುಸ್ಲಿಂ ಪ್ರಾಬಲ್ಯವಿದ್ದು, ಅಲ್ಲೆಲ್ಲ ಮತಗಳು ವಿಭಜನೆ ಆಗದಂತೆ ತಡೆಯಬೇಕು. ಈ ಕುರಿತು ಸಂದೇಶ ನೀಡಲು ಬೃಹತ್ ಸಮಾವೇಶವೊಂದನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಹೈಕಮಾಂಡ್ ಮೇಲೆ ಒತ್ತಡ ಹೇರಬೇಕು. ಈ ಅಭ್ಯರ್ಥಿಗಳು ಗೆದ್ದುಬರುವಂತೆ ಎಲ್ಲ ಪ್ರಯತ್ನ ನಡೆಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ವಿಧಾನ ಸಭೆ ಉಪನಾಯಕ ಯು.ಟಿ ಖಾದರ್, ಮಾಜಿ ಸಂಸದ ಐಜಿ ಸನದಿ, ಮಾಜಿ ಸಚಿವ ನಸೀರ್ ಅಹ್ಮದ್, ಮಾಜಿ ಸಚಿವರಾದ ಜಮೀರ್ ಅಹ್ಮದ್, ತನ್ವೀರ್ ಸೇಠ್, ರಹೀಂ ಖಾನ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಅನೇಕ ಶಾಸಕರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರುಗಳು ಹಾಗೂ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹ್ಮದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷೆತೆಯಲ್ಲಿ ಸೋಮವಾರ ಸಭೆ ನಡೆಯಿತು. ಒಟ್ಟಾಗಿ ಸಾಮೂಹಿಕ ನಾಯಕತ್ವದಲ್ಲಿ ಈ ಚುನಾವಣೆ ನಡೆಯುತ್ತದೆ. ಜನವರಿ ಮೊದಲ ವಾರದಲ್ಲಿ ಎಲ್ಲ ನಾಯಕರು ಸೇರಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ. ಬೆಲೆ ಏರಿಕೆ, ವೋಟ್ ಕಳ್ಳತನ ಮಾಡಿರುವ ಬಿಜೆಪಿ, ನಿರುದ್ಯೋಗ ಸಮಸ್ಯೆ ಬಗ್ಗೆ ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಡಿ. 30 ರಂದು ವಿಜಯಪುರದಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಮುಂದಿನ 100 ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಇಂದು ಮುಸ್ಲಿಂ ಸಮುದಾಯದ ನಾಯಕರ ಸಭೆ ಮಾಡಿದ್ದೇವೆ. ಮುಂದಿನ 100 ದಿನಗಳಲ್ಲಿ ಯಾವ ರೀತಿ ಯೋಜನೆ ಹಾಕಿ ಕೊಳ್ಳಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಪ್ರಮುಖವಾಗಿ ಬಿಜೆಪಿ ಸರ್ಕಾರ ಮುಸ್ಲಿಂ ಮತದಾರರ ವೋಟರ್ಸ್ ಲಿಸ್ಟ್ ಡಿಲೀಟ್ ಮಾಡುತ್ತಿರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಚಿಲುಮೆ ಸಂಸ್ಥೆಯ ಕುರಿತು ಈಗಾಗಲೇ ದೂರು ಕೊಟ್ಟು ವಿಚಾರಣೆ ನಡೆಯುತ್ತಿದೆ. ಜನವರಿ ಮೊದಲ ವಾರದಲ್ಲಿ 5 ಅಲ್ಪಸಂಖ್ಯಾತರ ಸಮಾವೇಶಗಳನ್ನು ಮಾಡುತ್ತೇವೆ. ಕೆಪಿಸಿಸಿ ಟಿಕೆಟ್‌ಗಾಗಿ 100 ಅರ್ಜಿಗಳು ಮುಸ್ಲಿಂ ನಾಯಕರಿಂದ ಬಂದಿವೆ. ಅವುಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಬೇಕು ಎಂದು ನಾವು ಕೆಪಿಸಿಸಿ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇವೆ. ಪ್ರಮುಖವಾಗಿ ವೋಟ್ ಲಿಸ್ಟ್ ಡಿಲೀಟ್ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ | ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್ ಮಾಜಿ ಸಚಿವ ಬಂಧನ