Site icon Vistara News

Sira News: ಶಿರಾ ನಗರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಪೂಜಾ ಪೆದ್ದರಾಜು ಅವಿರೋಧ ಆಯ್ಕೆ

Congress member Pooja Peddaraju

ತುಮಕೂರು: ಶಿರಾ ನಗರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಳಿದಿದೆ. 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪೂಜಾ ಪೆದ್ದರಾಜು (25) ಅವರು ನಗರಸಭೆ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಂಜಿನಪ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ನಗರಸಭೆ (Sira News) 31 ಸದಸ್ಯ ಬಲ ಹೊಂದಿದ್ದು, ಈ ಪೈಕಿ 11 ಸದಸ್ಯರು ಚುನಾವಣೆಗೆ ಗೈರಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ಕಾಂಗ್ರೆಸ್‌ನಲ್ಲಿ ಲಕ್ಷ್ಮಿಕಾಂತ್ ಮತ್ತು ಪೂಜಾ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿತ್ತು. ಹೀಗಾಗಿ ಶಾಸಕ ಟಿ.ಬಿ.ಜಯಚಂದ್ರ ಅವರು ಶುಕ್ರವಾರ ರಾತ್ರಿ, ಸದಸ್ಯರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿನ ನಿರ್ಧಾರದಂತೆ ಪೂಜಾ ಪೆದ್ದರಾಜು ಅವರನ್ನು ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ ಮಾಡಲಾಗಿದೆ. ನಗರ ಸಭೆಯಲ್ಲಿ 31 ಸದಸ್ಯರು, ಸಂಸದ, ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 34 ಮತಗಳಿವೆ. 11 ಸದಸ್ಯರ ಗೈರು ಹಾಜರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತವಿಲ್ಲದ ಕಾರಣ ಈ ಹಿಂದೆ ಜೆಡಿಎಸ್, ಬಿಜೆಪಿ, ಪಕ್ಷೇತರರ ಬೆಂಬಲದೊಂದಿಗೆ ಜೆಡಿಎಸ್‌ನ ಅಂಜಿನಪ್ಪ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಅಂಬುಜಾಕ್ಷಿ ನಟರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ | HD Kumaraswamy : ಎಲ್ಲರನ್ನೂ Brother ಅನ್ನುವ ಕುಮಾರಸ್ವಾಮಿಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!

ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ನಗರಸಭೆಯ ಗದ್ದುಗೆ ಹಿಡಿಯಲು ತೀವ್ರ ಕಸರತ್ತು ನಡೆಸುತ್ತಿತ್ತು.
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಕಾಂತ್ ಹಾಗೂ ಪಿ.ಪೂಜಾ ಆಕಾಂಕ್ಷಿಗಳಾಗಿದ್ದರು. ಅಧ್ಯಕ್ಷರ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆ ಸದಸ್ಯರು ಶಾಸಕರಿಗೆ ಬಿಟ್ಟಿದ್ದರು. ಅವರು ಸೂಚಿಸುವವರು ಅಧ್ಯಕ್ಷರಾಗಲಿದ್ದಾರೆ ಎಂದು ಎಲ್ಲ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ನೂತನ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಗಿದೆ.

ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್​ ಸದಸ್ಯೆ ಪೂಜಾ ಆಯ್ಕೆಯಾಗಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಒಟ್ಟು 31 ಸದಸ್ಯ ಬಲದಲ್ಲಿ ಕಾಂಗ್ರೆಸ್-19, ಜೆಡಿಎಸ್- 11, ಪಕ್ಷೇತರ 1 ಸದಸ್ಯ ಇದ್ದಾರೆ.

Exit mobile version