ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ವಿವಿಧ ನಾಯಕರ ಮನೆಯನ್ನು ಎಡತಾಕುತ್ತಿರುವ ಬೆನ್ನಲ್ಲೇ ಬಿಜೆಪಿ ಕಡೆಗೆ ಆಗಮಿಸಿದವರ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಗೆ ಪಕ್ಷವೇ ತಿಣುಕಾಡುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದ್ದ 15 ಕಾಂಗ್ರೆಸ್ ಹಾಗೂ ಒಬ್ಬ ಜೆಡಿಎಸ್ ಸಚಿವರು-ಶಾಸಕರು ರಾಜೀನಾಮೆ ನೀಡಿ ಹೊರಬಂದಿದ್ದರು. ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ಉಪಚುನಾವಣೆ ಎದುರಿಸಿ ಬಹುತೇಕರು ಗೆದ್ದುಬಂದರು, ಸಚಿವರಾದರು.
2023ರ ಚುನಾವಣೆಗೂ ಮುನ್ನ ಇದೀಗ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. 115 ಗಡಿ ದಾಟಲು ಕೈ ನಾಯಕರು ಪ್ಲಾನ್ ಮಾಡುತ್ತಿದ್ದು, ಕಾಂಗ್ರೆಸ್ ತೊರೆದು ಹೋದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಕ್ತ ಆಹ್ವಾನ ನೀಡಿದ್ದಾರೆ.
ಆದರೆ ಸಿದ್ದರಾಮಯ್ಯ ಇದಕ್ಕೆ ವಿರೋಧಿಸಿದ್ದರು. ಭೂಮಿ ಆಕಾಶ ಒಂದಾದರೂ ಯಾರನ್ನೂ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಗುಡುಗಿದ್ದರು. ಮಾಜಿ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಸಹ, ಯಾವುದೇ ಕಾರಕ್ಕೂ ಸೇರಿಸಿಕೊಳ್ಳಬಾರದು ಎಂದಿದ್ದರು.
ಈ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಅವರುಗಳಲ್ಲೇ ಪ್ರಬಲರನ್ನು ಹುಡುಕುತ್ತಿರುವ ಕಾಂಗ್ರೆಸ್‌ಗೆ 14 ಕ್ಷೇತ್ರಗಳಲ್ಲಿ ಪ್ರಬಲರು ಸಿಕ್ಕಿಲ್ಲ. ಹಾಗಾಗಿ, 115 ಗಡಿ ದಾಟಬೇಕೆಂದರೆ ಈ ಕ್ಷೇತ್ರಗಳಿಗೆ ವಲಸಿಗರನ್ನು ಮತ್ತೆ ಕರೆತರಬೇಕು ಎನ್ನುವುದು ಡಿ.ಕೆ. ಶಿವಕುಮಾರ್ ದೃಢ ನಿರ್ಧಾರ.
ಇವರಲ್ಲಿ ಯಾರೇ ಪಕ್ಷಕ್ಕೆ ಬರುವುದಾದರೆ ನಮ್ಮ ಆಕ್ಷೇಪ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ರಚನೆ ಆಗಿರುವ ಕಮಿಟಿಯಿಂದಲೂ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಅಲ್ಲಂ ವೀರಭದ್ರಪ್ಪ ಸಹ ಪಕ್ಷದ ಸಿದ್ದಾಂತ ಒಪ್ಪಿ ಬರಬಹುದು ಎಂದು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಎಸ್. ಟಿ. ಸೋಮಶೇಖರ್, ಭೈರತಿ ಬಸವರಾಜ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಎಂಟಿಬಿ ನಾಗರಾಜ್, ಮುನಿರತ್ನ, ಕುಮಟಳ್ಳಿ, ಸೀಮಂತ ಪಾಟೀಲ್ ಸೇರಿ ಅನೇಕರಿಗೆ ಕೆಪಿಸಿಸಿ ಅಧ್ಯಕ್ಷ ಕಡೆಯಿಂದ ಅಹ್ವಾನ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಹೊರತುಪಡಿಸಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಪಕ್ಷಾಂತರಿಗಳಿಗೆ 5 ವರ್ಷ ಚುನಾವಣೆ ನಿಷೇಧಿಸಬೇಕು ಎಂದ ಮಲ್ಲಿಕಾರ್ಜುನ ಖರ್ಗೆ