Site icon Vistara News

Karnataka Politics : ಸಿಎಂ-ಡಿಸಿಎಂ ʼಲೋಕʼತಂತ್ರ; ಶಾಸಕ-ಸಚಿವರ ನಡುವೆ ಒಗ್ಗಟ್ಟಿನ ಮಂತ್ರ!

CM Siddaramaiah and DK Shivakumar

ಬೆಂಗಳೂರು: ಮುಂದಿನ ವರ್ಷದಲ್ಲಿ ಎದುರಾಗುತ್ತಿರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಮೂರೂ ಪ್ರಮುಖ ಪಕ್ಷಗಳು ರಾಜಕೀಯ ರಣತಂತ್ರವನ್ನು ಹೆಣೆಯುತ್ತಿವೆ. ಈ ನಡುವೆ ಒಂದೊಂದು ಪಕ್ಷದಲ್ಲಿ ಹತ್ತಾರು ಸಮಸ್ಯೆಗಳೂ ಎದುರಾಗಿವೆ. ಅತಿ ಮುಖ್ಯವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದ್ದು, ಸಚಿವರ ಮೇಲೆ ಸ್ವಪಕ್ಷೀಯ ಶಾಸಕರೇ ತಿರುಗಿಬಿದ್ದಿರುವುದು ಸಿಎಂ ಸಿದ್ದರಾಮಯ್ಯ (CM Siddaramaiah) ಸಹಿತ ಹೈಕಮಾಂಡ್‌ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಕ್ಷದೊಳಗೆ ಸಮನ್ವಯತೆ ಕಾಪಾಡುವುದರೊಂದಿಗೆ ಲೋಕಸಭೆಯಲ್ಲಿ “ಟಾರ್ಗೆಟ್‌ 20” ಗುರಿ ಸಾಧನೆಗೆ ಏನೆಲ್ಲ ಮಾಡಬೇಕು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸೋಮವಾರ (ಆಗಸ್ಟ್‌ 7) ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಶಾಸಕರ ಸಭೆ ನಡೆಸಲಾಗಿದೆ.

ಉಸ್ತುವಾರಿ ಸಚಿವರು (District incharge Minister) ಮತ್ತು ಶಾಸಕರನ್ನು (Congress MLAs) ಕೂರಿಸಿಕೊಂಡ ಸಿಎಂ, ಡಿಸಿಎಂ ಸಮಸ್ಯೆಗಳನ್ನು ಸಾವಧಾನವಾಗಿ ಆಲಿಸಿದರು. ಈ ವೇಳೆ ಸರ್ಕಾರದ ಮುಂದಿನ ಕಾರ್ಯತಂತ್ರ ಹೇಗಿರಬೇಕು? ಇಬ್ಬರ ನಡುವೆ ಸಮನ್ವಯತೆ ಯಾವ ರೀತಿಯಲ್ಲಿರಬೇಕು? ಶಾಸಕರ ಮನವಿಗೆ ಸಚಿವರು ಸ್ಪಂದಿಸಬೇಕು, ಸಚಿವರ ಇತಿಮಿತಿಯನ್ನು ಶಾಸಕರು ಸಹ ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲದರ ನಡುವೆ ಕಾಂಗ್ರೆಸ್‌ ಗ್ಯಾರಂಟಿ (Congress Gaurantee Scheme) ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ಪ್ರತಿಷ್ಠೆಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು ಎಂಬಿತ್ಯಾದಿ ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: JDS Politics : ಲೋಕಸಭೆಗೆ ಜೆಡಿಎಸ್‌ 3 ಸೂತ್ರ; ಆ. 15ರಿಂದ ರಾಜ್ಯ ಪ್ರವಾಸ

ಸಚಿವರಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವ ಭರವಸೆ

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಹೈಕಮಾಂಡ್ ಟಾರ್ಗೆಟ್ ತಲುಪಬೇಕು ಎಂದರೆ ಮೊದಲು ಶಾಸಕರು ಮತ್ತು ಸಚಿವರ ನಡುವೆ ಸಮನ್ವಯ ಮೂಡಿಸುವ ಲೆಕ್ಕಾಚಾರ ಸಿಎಂ, ಡಿಸಿಎಂ ಅವರದ್ದಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಉಸ್ತುವಾರಿ ಸಚಿವರು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಹಿರಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ಭರವಸೆ ನೀಡಿದ್ದಾರೆ.

ಪ್ರಮುಖ ಚರ್ಚಿತ ವಿಷಯಗಳು

ಈ ಸಭೆಯಲ್ಲಿ ಶಾಸಕರು ತಮ್ಮ ಕ್ಷೇತ್ರಗಳಿಗೆ ವಿಶೇಷ ಅನುದಾನದ ಬಗ್ಗೆ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ಎಂಟು ತಿಂಗಳು ಯಾವುದೇ ವಿಶೇಷ ಅನುದಾನ ನೀಡಲು ಆಗುವುದಿಲ್ಲ. ಆದರೆ, ಯಾವುದೇ ಕಾಮಗಾರಿಗಳು, ಕ್ಷೇತ್ರಕ್ಕೆ ಸಿಗಬೇಕಾದ ಅನುದಾನ ಸಿಗಲಿದೆ ಎಂಬ ಭರವಸೆಯನ್ನು ಸಿಎಂ ನೀಡಿದ್ದಾರೆ.

ಯಾವುದೇ ಸಮಸ್ಯೆಗಳಿದ್ದರೂ, ಶಾಸಕರು ನೇರವಾಗಿ ಸಿಎಂ, ಡಿಸಿಎಂ ಅವರ ಗಮನಕ್ಕೆ ತರಬಹುದು. ಒಂದು ವೇಳೆ ಸಚಿವರು ಸ್ಪಂದಿಸದಿದ್ದರೆ ಸಿಎಂ ಕಚೇರಿಗೆ ಮಾಹಿತಿ ನೀಡಬಹುದು. ಬಹಿರಂಗ ಹೇಳಿಕೆ ನೀಡುವುದು, ಪತ್ರ ಬರೆಯುವುದು ಬೇಡ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಇದರ ಲಾಭವನ್ನು ಪ್ರತಿಪಕ್ಷಗಳು ಪಡೆಯುತ್ತವೆ ಎಂದು ಬುದ್ಧಿವಾದ ಹೇಳಲಾಗಿದೆ.

ನಾವು ಕೈಗೊಂಡ ಗ್ಯಾರಂಟಿ ಯೋಜನೆಗಳ ಸಹಿತ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Compassionate Employment : ಸರ್ಕಾರಿ ನೌಕರಿಯಲ್ಲಿ ʼಅನುಕಂಪʼ ತೋರದ ಸರ್ಕಾರ! ನೇಮಕಾತಿಗೆ ತಡೆ

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಲು ಜಿಲ್ಲಾ ಮಟ್ಟದ ಯಾವ ಸಮಸ್ಯೆಗಳು ಕಾರಣವಾಗಿದ್ದವು? ಈ ಬಾರಿ ಯಾರನ್ನು ಅಭ್ಯರ್ಥಿ ಮಾಡಿದರೆ ಗೆಲುವು ಸಾಧಿಸಬಹುದು? ಎಂಬ ಬಗ್ಗೆ ಸಹ ಈ ವೇಳೆ ಚರ್ಚೆ ನಡೆಸಲಾಗಿದೆ.

Exit mobile version