ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿ ಸಿಗದಿದ್ದರಿಂದ ರೆಬೆಲ್ ಆಗಿ ಜೆಡಿಎಸ್ ಸೇರಿ ಈಗ ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ (Former MLC Ayanur Manjunath) ಈಗ ಮತ್ತೊಮ್ಮೆ ಚುನಾವಣೆಗೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ಒಳ ರಾಜಕೀಯದಲ್ಲಿ (Congress Politics) ಸಾಕಷ್ಟು ವಿರೋಧ ಎದುರಿಸುತ್ತಿರುವ ಮಧ್ಯೆಯೇ ಶಿವಮೊಗ್ಗ ನಗರದಲ್ಲಿ ಆಯನೂರು ಮಂಜುನಾಥ್ ಕಚೇರಿ ತೆರೆದಿದ್ದಾರೆ. ಈ ಮೂಲಕ ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಮತದಾರರ ನೋಂದಣಿ ನಿಮಿತ್ತ ಚುನಾವಣಾ ಕಾರ್ಯಾಲಯ ಆರಂಭ ಮಾಡಿದ್ದಾಗಿ ಹೇಳಿಕೊಂಡಿರುವ ಅವರು, ಬೆಂಬಲಿಗರ ಉಪಸ್ಥಿತಿಯಲ್ಲಿ ಕಾರ್ಯಾಲಯವನ್ನು ಉದ್ಘಾಟನೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಪೂರ್ವ ಬಿಜೆಪಿಯಿಂದ ಜೆಡಿಎಸ್‌ಗೆ ಜಿಗಿದಿದ್ದ ಆಯನೂರು ಮಂಜುನಾಥ್, ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಅವರಿಗೆ ಕಾಂಗ್ರೆಸ್‌ನಲ್ಲಿಯೇ ಸಾಕಷ್ಟು ವಿರೋಧ ಇದೆ. ಟಿಕೆಟ್ ಘೋಷಣೆಗೆ ಮುನ್ನವೇ ಕಾರ್ಯಾಲಯವನ್ನು ಆರಂಭ ಮಾಡಿರುವ ಅವರ ನಡೆಗೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರ್ಯಾಲಯ ಉದ್ಘಾಟನೆಗೆ ಕಾಂಗ್ರೆಸ್ ಮುಖಂಡರು ಗೈರಾಗಿದ್ದಾರೆ. ಹೀಗಾಗಿ ಆಯನೂರು ಮಂಜುನಾಥ್ ನಡೆ ಕುತೂಹಲ ಕೆರಳಿಸಿದೆ.
ಯಾರಿಗೆ ಟಿಕೆಟ್ ಎಂಬುದು ಪಕ್ಷದ ತೀರ್ಮಾನ: ಆಯನೂರು ಮಂಜುನಾಥ್
ನೈರುತ್ಯ ಪಧವೀದರ ಕ್ಷೇತ್ರ ಚಟುವಟಿಕೆ ದೃಷ್ಟಿಯಿಂದ ನೋಂದಣಿ ಕಾರ್ಯಾಲಯ ಪ್ರಾರಂಭ ಮಾಡಿದ್ದೇನೆ. ವಿಧಾನ ಪರಿಷತ್‌ಗೆ ಪುನಃ ಸ್ಪರ್ಧೆ ಮಾಡುವ ಇಚ್ಛೆ ಮಾಡಿದ್ದೇನೆ. ನನ್ನಂತೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ. ಈ ತಿಂಗಳ 30ರ ನಂತರ ಚುನಾವಣೆ ನೋಟಿಫಿಕೇಷನ್ ಪ್ರಾರಂಭವಾಗಲಿದೆ. ಕಚೇರಿಯ ಬಳಕೆಯನ್ನು ಪದವೀಧರ ಮತದಾರರು ಬಳಸಿಕೊಳ್ಳಬೇಕು. ಮೇಲ್ಮನೆಯ ಶಾಸಕರು ಪ್ರಭಾವಿ ಆಗಿ ಕೆಲಸ ಮಾಡುವ ಅಗತ್ಯ ಇದೆ. ಪುನಃ ಮೇಲ್ಮನೆಯ ಅವಕಾಶಕ್ಕಾಗಿ ಪಕ್ಷ ಅವಕಾಶ ನೀಡುತ್ತದೆ ಅಂದುಕೊಂಡಿದ್ದೇನೆ. ಎಲ್ಲ ಇಲಾಖೆಗಳಲ್ಲಿ ನೌಕರರು ಅನೇಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಕ್ಷ ಟಿಕೆಟ್ ನೀಡಿದರೆ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಟಿಕೆಟ್ ಸಿಗುವ ವಿಶ್ವಾಸ ಇದೆ
ಪಕ್ಷಕ್ಕೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ನೀಡುವ ಆತ್ಮವಿಶ್ವಾಸ ಇದೆ. ನನ್ನ ಹಿರಿತನದ ಆಧಾರದ ಮೇಲೆ ಟಿಕೆಟ್ ನೀಡುವ ವಿಶ್ವಾಸ ಇದೆ. ಕಾವೇರಿ ಹೋರಾಟ ವಿಚಾರಸರ್ಕಾರ, ಸಿಎಂ, ಡಿಸಿಎಂ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟಿನ ಆದೇಶ ನಮಗೆ ಅನುಕೂಲಕರವಾಗಿ ಬಂದಿಲ್ಲ. ನೀರು ಕೊರತೆಯಿದ್ದ ಸಂದರ್ಭದಲ್ಲಿ ನೀರು ಎಷ್ಟು ಬಿಡಬೇಕು, ಬಿಡಬಾರದು ಎಂದು ಹಿಂದಿನ ಆದೇಶ ಸಹ ಇದೆ ಎಂದು ಪ್ರಶ್ನೆಯೊಂದಕ್ಕೆ ಆಯನೂರು ಮಂಜುನಾಥ್ ಪ್ರತಿಕ್ರಿಯೆ ನೀಡಿದರು.