Site icon Vistara News

Congress politics: ವಿಧಾನಸಭೆ ಸಚೇತಕರಾಗಿ ಅಶೋಕಪಟ್ಟಣ, ಪರಿಷತ್‌ಗೆ ಸಲೀಂ ಅಹಮದ್‌, ಜಯಚಂದ್ರ ದಿಲ್ಲಿಗೆ

Ashok Pattana Saleem Ahamad TB Jayachandra

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಹೊಸ ಸರ್ಕಾರ (Congress Government) ಅಸ್ತಿತ್ವಕ್ಕೆ ಬಂದ ನಂತರ ಮೊದಲ ವಿಧಾನಮಂಡಲ ಅಧಿವೇಶನ (Assembly session) ಸೋಮವಾರ (ಜುಲೈ 3) ಆರಂಭವಾಗಿದೆ. ಈ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್‌ ವಿಧಾನಸಭೆ (Legislative Assembly) ಮತ್ತು ವಿಧಾನ ಪರಿಷತ್‌ನಲ್ಲಿ (Legislative Council) ತನ್ನ ಸಚೇತಕರ ಆಯ್ಕೆಯನ್ನು ಘೋಷಿಸಿದೆ.

ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ (Chief whip) ಶಾಸಕ ಅಶೋಕ ಪಟ್ಟಣ ಅವರು ನೇಮಕಗೊಂಡಿದ್ದಾರೆ.‌ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ, ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ (TB Jayachandra delhi representative) ಅವರು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅಶೋಕ ಪಟ್ಟಣ ಅವರು ಸಿದ್ದರಾಮಯ್ಯ ಅವರ ಅತ್ಯಂತ ಆಪ್ತರಾಗಿದ್ದು, ಚೀಫ್‌ ವಿಪ್‌ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ವಿಧಾನ ಪರಿಷತ್‌ ಸಚೇತಕರಾಗಿ ಆಯ್ಕೆಯಾಗಿರುವ ಸಲೀಂ ಅವರು ಕಾಂಗ್ರೆಸ್‌ನ ನಿಷ್ಠಾವಂತ ನಾಯಕರಾಗಿದ್ದು, ಮೇಲ್ಮನೆಯಲ್ಲಿ ಪಕ್ಷದ ಶಾಸಕ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ.

ಜಯಚಂದ್ರಗೆ ಬಯಸಿದ್ದೇ ಸಿಕ್ಕಿತು

ತುಮಕೂರು ಜಿಲ್ಲೆಯ ಶಿರಾ ಶಾಸಕರಾಗಿರುವ ಟಿ.ಬಿ ಜಯಚಂದ್ರ ಅವರು ಸಚಿವರನ್ನು ಆರಂಭದಲ್ಲಿ ಸ್ಪೀಕರ್‌ ಗಾದಿಗೇರಿಸುವ ಪ್ಲ್ಯಾನ್‌ ಇತ್ತಾದರೂ ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಇದು ಕೊನೆಯ ಚುನಾವಣೆಯಾಗಿದ್ದು ಸಚಿವ ಗಾದಿಯ ನಿರೀಕ್ಷೆಯಲ್ಲಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಅವರಿಗೆ ಸಚಿವ ಖಾತೆಯೂ ಸಿಕ್ಕಿರಲಿಲ್ಲ.

ಇದೀಗ ಅವರನ್ನು ರಾಜ್ಯ ಸರ್ಕಾರದ ದಿಲ್ಲಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಕಾನೂನು ಪರಿಣಿತರಾಗಿರುವ ಟಿ.ಬಿ. ಜಯಚಂದ್ರ ಅವರು ದಿಲ್ಲಿಯ ವ್ಯವಹಾರಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂದು ನಿರೀಕ್ಷಿಸಲಾಗಿದೆ. ನಿಜವೆಂದರೆ, ಮಂತ್ರಿ ಸ್ಥಾನ ಸಿಗದೆ ಇದ್ದ ಬಳಿಕ ಜಯಚಂದ್ರ ಅವರು ದಿಲ್ಲಿ ಪ್ರತಿನಿಧಿಯ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲೇ ಇದ್ದರು. ಅದು ಈಗ ನಿಜವಾಗಿದೆ.

ಅಜಯ್ ಧರಂ ಸಿಂಗ್‌ಗೆ ಕೈ ತಪ್ಪಿದ ಸಚೇತಕ ಸ್ಥಾನ

ಈ ನಡುವೆ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ ಅವರ ಪುತ್ರ ಅಜಯ್‌ ಸಿಂಗ್‌ ಅವರು ಪಕ್ಷದ ಪ್ರಮುಖ ಹುದ್ದೆಗಳು ತಪ್ಪಿ ಹೋಗಿ ನಿರಾಸೆ ಅನುಭವಿಸಿದ್ದಾರೆ. ಅವರಿಗೆ ಮಂತ್ರಿಗಿರಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ.

ಇದನ್ನೂ ಓದಿ: Assembly Session Karnataka: ಇಂದಿನಿಂದ ಜಂಟಿ ಅಧಿವೇಶನ, ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕನ ಕುರ್ಚಿ ಖಾಲಿ

ಅಜಯ್‌ ಧರಂ ಸಿಂಗ್‌ ಅವರು ಹಿಂದಿನ ಸರ್ಕಾರದಲ್ಲಿ ವಿಧಾನಸಭೆಯ ಮುಖ್ಯ ಸಚೇತಕರಾಗಿದ್ದರು. ಈ ಬಾರಿ ಮಂತ್ರಿಗಿರಿ ಕೊಡದೆ ಇದ್ದಾಗ ಚೀಫ್‌ ವಿಪ್‌ ಸ್ಥಾನದಲ್ಲಾದರೂ ಮುಂದುವರಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೂಡಾ ಹುಸಿಯಾಗಿದೆ. ಅತ್ತ ಸಚಿವ ಸ್ಥಾನವೂ ಇಲ್ಲ ಇತ್ತ ಸಚಿವ ಸ್ಥಾನವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Exit mobile version