Site icon Vistara News

Congress Politics : ಕಾಂಗ್ರೆಸ್‌ನಲ್ಲಿ ಮತ್ತೆ ಕುರ್ಚಿ ಕಿತ್ತಾಟ; ಸಿದ್ದು ಪರ ಆಪ್ತರ ವಾದ, ಡಿಕೆಶಿ ಟೀಮ್‌ ಗರಂ

Siddaramaiah DK Shivakumar

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದು ಕಡೆ ಗ್ಯಾರಂಟಿ ಯೋಜನೆಗಳ ಜಾರಿಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಮುಖ್ಯಮಂತ್ರಿ ಅಧಿಕಾರ ಅವಧಿ (Chief Minister term) ಹಂಚಿಕೆ ಬಗ್ಗೆಯೂ ಕಿಡಿ ಹತ್ತಿಕೊಂಡಿದೆ. ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಕಾಲವೂ ಮುಂದುವರಿಯಲಿದ್ದಾರೆ ಎಂದು ಅವರ ಆಪ್ತರು ಸಾಲು ಸಾಲಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಇತ್ತ ಡಿ.ಕೆ ಶಿವಕುಮಾರ್‌ (DK Shivakumar) ಅವರ ಬಣದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಅವರ ಪರವೂ ಬ್ಯಾಟಿಂಗ್‌ (Congress politics) ಶುರುವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಹೈಕಮಾಂಡ್‌ ಅಧಿಕಾರ ಹಂಚಿಕೆ ಸೂತ್ರವೊಂದನ್ನು ಮಾಡಿದೆ. 30 ತಿಂಗಳ ಅವಧಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದರೆ ಮುಂದಿನ ಅವಧಿಗೆ ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡುವ ಅಧಿಕಾರ ಹಂಚಿಕೆ ಸೂತ್ರ ಮಾಡಲಾಗಿದೆ ಎಂದು ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಯಾರೂ ಕೂಡಾ ಇದನ್ನು ಓಪನ್‌ ಆಗಿ ಹೇಳಿಕೊಳ್ಳುತ್ತಿಲ್ಲ. ಆದರೆ, ಆರಂಭದಿಂದಲೇ ಸಿದ್ದರಾಮಯ್ಯ ಅವರ ಆಪ್ತರು ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಎಂದು ಡಂಗುರ ಸಾರಿಕೊಂಡು ಬರುತ್ತಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ ಅವರ ಬಳಗದಲ್ಲಿ ಆಕ್ರೋಶ ಉಂಟು ಮಾಡಿದೆ.

ಸಿದ್ದರಾಮಯ್ಯ ಅವರ ಬಣದ ಈ ಪ್ರಚಾರದಿಂದ ಸಿಡಿದಿರುವ ಡಿ.ಕೆ.ಶಿವಕುಮಾರ್‌ ಬಣ, ಡಿಕೆಶಿ ಸಿಎಂ ಎಂಬ ಅಭಿಯಾನದಲ್ಲಿ ತೊಡಗಿದೆ.

ಡಿ.ಕೆ. ಶಿವಕುಮಾರ್‌ ಅವರೇ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಪದೇಪದೆ ಹೇಳುತ್ತಿರುವವರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಚಿವರಾಗಿರುವ ಡಾ. ಎಚ್‌.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್‌, ಕೃಷ್ಣ ಭೈರೇಗೌಡ, ಜಮೀರ್‌ ಅಹಮದ್‌ ಖಾನ್‌ ಮುಂಚೂಣಿಯಲ್ಲಿದ್ದಾರೆ. ಈ ಸಾಲಿಗೆ ಈಗ ಶಾಸಕ ಕೆ.ಎನ್‌. ರಾಜಣ್ಣ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ಅವರು ಹೊಸದಾಗಿ ಸೇರಿಕೊಂಡಿದ್ದಾರೆ.

ಮಹದೇವಪ್ಪ ಅವರನ್ನೇ ಕೇಳಿ ಎಂದ ಸಿದ್ದರಾಮಯ್ಯ

ಡಾ.ಎಚ್‌.ಸಿ. ಮಹದೇವಪ್ಪ ಅವರು ಶನಿವಾರವೂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗೋದು ಶತಸ್ಸಿದ್ಧ ಎಂದು ಮೂರು ಬಾರಿ ಪ್ರಮಾಣ ಮಾಡುವಂತೆ ಹೇಳಿದ್ದರು. ಅದಕ್ಕೆ ಸಚಿವ ಎಂ.ಬಿ. ಪಾಟೀಲ್‌ ಭಾನುವಾರ ಜತೆಗೂಡಿಸಿ, ಅಧಿಕಾರ ಬಿಟ್ಟುಕೊಡಬೇಕು ಎನ್ನುವ ವಿಚಾರದಲ್ಲಿ ಒಪ್ಪಂದ ಆದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಇತ್ತ ಮಾಧ್ಯಮದ ಮಂದಿ ನೇರವಾಗಿ ಸಿದ್ಧರಾಮಯ್ಯ ಅವರನ್ನೇ ಕೇಳಿದಾಗ, ಅದರ ಬಗ್ಗೆ ನನ್ನನ್ನೇನು ಕೇಳುತ್ತೀರಿ, ಎಚ್‌.ಸಿ. ಮಹದೇವಪ್ಪ ಅವರನ್ನೇ ಕೇಳಿ ಎಂದಿದ್ದಾರೆ. ಈ ರೀತಿ ಹೊಣೆಯನ್ನು ಹೆಗಲಿನಿಂದ ಜಾರಿಸಿದ್ದಾರೆಯೇ ಹೊರತು ಮಹದೇವಪ್ಪ ಹೇಳಿದ್ದರಲ್ಲು ಹುರುಳಿಲ್ಲ ಎಂದು ಹೇಳಿಲ್ಲ.

ಸಿದ್ದರಾಮಯ್ಯ ಪೂರ್ಣಾವಧಿ ಎಂದ ಕೆಎನ್‌ ರಾಜಣ್ಣ

ಈ ನಡುವೆ ತುಮಕೂರಿನ ಶಾಸಕ, ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಜಣ್ಣ ಅವರು ಸಿದ್ದರಾಮಯ್ಯ ಅವರೇ ಸಿಎಂ. ಅದರಲ್ಲಿ ಗೊಂದಲವೇನೂ ಇಲ್ಲ ಎಂದಿದ್ದಾರೆ.

ʻʻಸಿದ್ದರಾಮಯ್ಯ ಸಿಎಂ ಆಗಿ ಈ ಐದು ವರ್ಷ ಇರ್ತಾರೆ. ಮುಂದಿನ ಐದು ವರ್ಷವೂ ಇರುತ್ತಾರೆʼʼ ಎಂದು ರಾಜಣ್ಣ ಹೇಳಿದರು. ʻʻಅಧಿಕಾರ ಹಂಚಿಕೆ ವಿಚಾರ ಎಐಸಿಸಿ ಚರ್ಚೆ ಮಾಡುತ್ತದೆ. ಜನರ ವಿಶ್ವಾಸ ಏನಿದೆ ಅದರಂತೆ ನನ್ನ ವಿಶ್ವಾಸವಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಆಗಿ ಬಡವರ ಕಣ್ಣೀರು ಒರೆಸುತ್ತಿದ್ದಾರೆ. ನಂಬಿಕೆಗೆ ಅನುಗುಣವಾಗಿ ದ್ವನಿ ಇಲ್ಲದವರಿಗೆ ಧ್ವನಿ ನೀಡುತ್ತಾರೆ. ಅಂತವರು ಸಿಎಂ ಆಗಿ ಹೆಚ್ಚು ಕಾಲ ಇರಬೇಕು ಎನ್ನುವುದು ನಮ್ಮ ಆಸೆ‌ʼʼ ಎಂದಿರುವ ರಾಜಣ್ಣ, ಎಐಸಿಸಿಯವರು ನಾಳೆ ಬಿಡಿ ಎಂದರೆ ಬಿಡ್ತಾರೆ. ಅವರು ಏನ್ ನಿರ್ಣಯ ತೆಗೆದುಕೊಂಡಿದ್ದಾರೋ ಅದರಂತೆ ನಡೆಯುತ್ತಾರೆ ಎಂದರು.

ಅರ್ಧ ಅವಧಿಗೆ ಸಿಎಂ ಎಂದು ಯಾರೂ ಹೇಳಿಲ್ಲ ಎಂದ ಜಾರಕಿಹೊಳಿ

ದಾವಣಗೆರೆಯ ವಾಲ್ಮೀಕಿ ಪೀಠದಲ್ಲಿ ನಡೆದ ನಾಯಕ ಸಮುದಾಯದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ ಕೂಡಾ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.

ʻʻಸಿದ್ದರಾಮಯ್ಯ ಅರ್ಧಕ್ಕೆ ಸಿಎಂ ಅಂತ ಯಾರು ಹೇಳಿಲ್ಲ. ಅದ್ದರಿಂದ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.

ಸಿದ್ದರಾಮಯ್ಯ ಆಪ್ತರ ಹೇಳಿಕೆಗೆ ಡಿ.ಕೆ. ಸುರೇಶ್‌ ಕಿಡಿಕಿಡಿ

ಇತ್ತ ಸಿದ್ದರಾಮಯ್ಯ ಆಪ್ತರ ಹೇಳಿಕೆಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಹಾದೇವಪ್ಪ ಅವರಿಗೆ ಸಚಿವರ ಕೆಲಸ ಬಿಟ್ಟು ಬೇರೆಯದರ ಕಡೆ ಹೆಚ್ಚು ಆಸಕ್ತಿಯಿದೆ.. ನೆಮ್ಮದಿಯಿಂದ ಅಧಿಕಾರ ಎಂಜಾಯ್ ಮಾಡಲಿ ಎಂದು ಹೇಳುವ ಮೂಲಕ ಸಂಸದ ಡಿ.ಕೆ. ಸುರೇಶ್‌ ಟಾಂಗ್‌ ನೀಡಿದ್ದಾರೆ.

ಇದರ ನಡುವೆ ಡಿ.ಕೆ. ಶಿವಕುಮಾರ್‌ ಅವರ ಆಪ್ತರು ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂಬ ವಾದ ಮುಂದಿಡುತ್ತಿದ್ದಾರೆ. ಶನಿವಾರ ಚಿಕ್ಕಮಗಳೂರಿನ ಗೌರಿಗದ್ದೆಯ ಆಶ್ರಮದಲ್ಲಿ ಮಾತನಾಡಿದ ಚಿಕ್ಕಮಗಳೂರು ಶಾಸನಕ ತಮ್ಮಯ್ಯ ಅವರು ಡಿ.ಕೆ. ಶಿವಕುಮಾರ್‌ ಸಿಎಂ ಕಹಳೆ ಮೊಳಗಿಸಿದರು. ನಮಗೆಲ್ಲ ಅವಕಾಶ ಕೊಟ್ಟ ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು ಎಂದರು. ಆಶ್ರಮದ ವಿನಯ ಗುರೂಜಿ ಕೂಡಾ ಡಿ.ಕೆ. ಶಿವಕುಮಾರ್‌ ತುಂಬ ಒಳ್ಳೆಯ ವ್ಯಕ್ತಿ. ಅವರಿಗೆ ಉನ್ನತ ಹುದ್ದೆಗಳು ದೊರೆಯಲಿವೆ ಎಂದು ಆಶೀರ್ವದಿಸಿದರು.

ಬೆಂಕಿಗೆ ತುಪ್ಪ ಸುರಿದ ಬಿಜೆಪಿ

ಇತ್ತ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಿಚ್ಚು ಹತ್ತಿಕೊಂಡಿದ್ದರೆ ಅತ್ತ ಬಿಜೆಪಿ ನಾಯಕ ಆರ್‌. ಅಶೋಕ್‌ ಅವರು ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ಹುದ್ದೆ ಬಿಟ್ಟುಕೊಡಲ್ಲ. ಡಿ.ಕೆ. ಶಿವಕುಮಾರ್‌ ಬಡಿದಾಡಿದ್ದೇ ಬಂತು ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ : MB Patil: ನನ್ನ-ಡಿಕೆಶಿ ಸಂಬಂಧ ಚೆನ್ನಾಗಿದೆ, ಪ್ರತಾಪ್‌ ಸಿಂಹಗೆ ತಲೆ ಕೆಟ್ಟಿದೆ ಎಂದ ಎಂ.ಬಿ ಪಾಟೀಲ್‌

Exit mobile version