Site icon Vistara News

Congress Politics : ಶಾಮನೂರು ಕುಟುಂಬಕ್ಕೆ ಎಂಪಿ ಟಿಕೆಟ್‌ ನೀಡಲು ವಿರೋಧ; ಕಾಂಗ್ರೆಸ್‌ ಶಾಸಕನಿಂದಲೇ ಆಕ್ಷೇಪ

Prabha Mallikarjuna, Shamanuru Shivashankarappa SS Mallikarjuna

ದಾವಣಗೆರೆ: ಒಂದು ಕಡೆ ಶಾಮನೂರು ಶಿವಶಂಕರಪ್ಪ (Shamanuru Shivashankarappa ಅವರು ಲಿಂಗಾಯತ ಅಸ್ತ್ರವನ್ನು ಹಿಡಿದುಕೊಂಡು ಕಾಂಗ್ರೆಸ್‌ ನಾಯಕರನ್ನು ಕಟ್ಟಿ ಹಾಕಲು ಯತ್ನ ನಡೆಸುತ್ತಿರುವ ನಡುವೆಯೇ ಇದೀಗ ಶಾಮನೂರು ಕುಟುಂಬವನ್ನು ನಿಯಂತ್ರಿಸಲು ಕಾಂಗ್ರೆಸ್‌ನೊಳಗೂ (Congress Politics) ಪ್ರಯತ್ನ ನಡೆಯುತ್ತಿದೆ.

ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪ ಎತ್ತಿದ್ದ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದರು. ಈ ರೀತಿ ಬಹಿರಂಗವಾಗಿ ಪಕ್ಷ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಮನೂರು ಅವರಿಗೆ ತಿರುಗೇಟು ನೀಡುವ ಪ್ರಯತ್ನ ಆರಂಭವಾದಂತೆ ಕಾಣುತ್ತಿದೆ.

ಇದರಲ್ಲಿ ಪ್ರಮುಖವಾಗಿರುವುದು ಶಾಮನೂರು‌ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕು ಎಂಬ ಬೇಡಿಕೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟನ್ನು ಪಡೆಯಲು ಶಾಮನೂರು ಕುಟುಂಬ ಪ್ರಯತ್ನಿಸುತ್ತಿದೆ. ಇದನ್ನು ತಡೆಯಬೇಕು ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಬಹಿರಂಗ ಧ್ವನಿ ಎತ್ತಿದ್ದಾರೆ.

ಈ ಚುನಾವಣೆಯಲ್ಲಿ ಎಸ್.ಎಸ್‌. ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯೂ ಜೋರಾಗಿತ್ತು. ಪ್ರಭಾ ಮಲ್ಲಿಕಾರ್ಜುನ್‌ ಅವರು ಪ್ರಭಾವಿಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಹವಾ ಸೃಷ್ಟಿ ಮಾಡಿದ್ದಾರೆ. ಮಲ್ಲಿಕಾರ್ಜುನ್‌ ಅವರ ಎಲ್ಲ ರಾಜಕೀಯ ಮತ್ತು ಸಮಾಜಸೇವಾ ಚಟುವಟಿಕೆಗಳ ಕಾರ್ಯಭಾರವನ್ನು ಅವರೇ ಹೊತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರಿಗೆ ಟಿಕೆಟ್‌ ಕೊಡಿಸಬೇಕು ಎಂದು ಕುಟುಂಬ ಪ್ರಯತ್ನಿಸುತ್ತಿದೆ.

ಆದರೆ, ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಅವರು ಶಾಮನೂರು ಕುಟುಂಬಕ್ಕೆ ಟಿಕೆಟ್‌ ನೀಡಬಾರದು, ಹೊಸಬರಿಗೆ ಟಿಕೆಟ್‌ ನೀಡಿ ಎಂಬ ಆಗ್ರಹವನ್ನು ಮಂಡಿಸಿದ್ದಾರೆ.

ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್

ಪ್ರಭಾ ಮಲ್ಲಿಕಾರ್ಜುನ್ ಎಸ್.ಎಸ್.ಕೇರ್ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಹಾಗಂತ ಅವರು ಎಲ್ಲೂ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿಲ್ಲ. ಆದರೂ ಪ್ರಯತ್ನ ನಡೆಯುತ್ತಿರುವುದನ್ನು ಅರಿತ ಚನ್ನಗಿರಿ ಶಾಸಕರು ಈಗ ವಿರೋಧದ ಧ್ವನಿ ಎತ್ತಿದ್ದಾರೆ.

ಒಂದೇ ಮನೆಯಲ್ಲಿ ಶಾಸಕ, ಸಚಿವ, ಸಂಸದ ಅಂದರೆ ಜನ ಬೆಂಬಲ ನೀಡೋದು ಕಡಿಮೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಭಾ ಮಲ್ಲಿಕಾರ್ಜುನ್ ಗೆ ನನ್ನ ಬೆಂಬಲವಿಲ್ಲ ಎಂದ ಶಾಸಕ ಶಿವಗಂಗಾ ಬಸವರಾಜ್ ಸ್ಪಷ್ಟಪಡಿಸಿದ್ದಾರೆ

ʻʻರಾಜಕಾರಣದಲ್ಲಿ ಹೊಸ ಬ್ಲಡ್ ಬರಬೇಕು, ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕುʼʼ ಎಂದಿರುವ ಅವರು, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವಗೆ ಟಿಕೆಟ್ ಕೊಟ್ಟರೆ 2 ಲಕ್ಷ ಅಂತರದಲ್ಲಿ ಗೆಲ್ಲುತ್ತೇವೆ. ಆದರೆ, ಮಲ್ಲಿಕಾರ್ಜುನ್ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಹೈಕಮಾಂಡ್ ಮಲ್ಲಿಕಾರ್ಜುನ್ ಗೆ ಕೊಟ್ಟರೆ ಸಂತೋಷ. ಅದಲ್ಲವಾದರೆ ಹೊಸಬರಿಗೆ ಅವಕಾಶ ನೀಡಲಿ ಎಂದು ಶಾಸಕ ಬಸವರಾಜ್‌ ಹೇಳಿದ್ದಾರೆ.

ಶಾಮನೂರು ಅಭಿಪ್ರಾಯ ಸರಿಯಲ್ಲ ಎಂದ ಮಲ್ಲಿಕಾರ್ಜುನ್‌

ಶಾಮನೂರು ಶಿವಶಿಂಕರಪ್ಪ ಅವರು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದ್ದರೂ ಶಾಸಕ ಎಸ್‌.ಎಸ್.‌ ಮಲ್ಲಿಕಾರ್ಜುನ್‌ ಮಾತ್ರ ಆ ರೀತಿ ಏನೂ ಆಗಿಲ್ಲ ಎಂದಿದ್ದರು. ಇದರ ಹಿಂದೆಯೂ ರಾಜಕೀಯವಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ತನ್ನ ಪತ್ನಿಗೆ ಟಿಕೆಟ್‌ ಕೊಡಿಸಬೇಕು ಎಂದು ಪ್ರಯತ್ನಿಸುತ್ತಿರುವ ಮಲ್ಲಿಕಾರ್ಜುನ್‌ ಅವರು ಲಿಂಗಾಯತ ವಿವಾದ ಈ ಪ್ರಯತ್ನಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕಾಗಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಎನ್ನಲಾಗಿದೆ.

Exit mobile version