Site icon Vistara News

Congress Politics : ಪಕ್ಷದ್ರೋಹ ಆರೋಪ ; ನ್ಯಾಯಕ್ಕಾಗಿ ದೈವದ ಮೊರೆ ಹೊಕ್ಕ ಉಚ್ಚಾಟಿತ ಕಾಂಗ್ರೆಸ್‌ ನಾಯಕ

Congress leader

ಸುಳ್ಯ (ದಕ್ಷಿಣ ಕನ್ನಡ): ವಿಧಾನಸಭಾ ಚುನಾವಣೆ (Karnataka Assembly Election) ಮುಗಿದು ಕಾಂಗ್ರೆಸ್​ ಪಕ್ಷದ ಸರ್ಕಾರ (Congress Government) ಅಧಿಕಾರ ಹಿಡಿದಿದ್ದರೂ ಸುಳ್ಯ ತಾಲೂಕಿನಲ್ಲಿ ಆಂತರಿಕ ರಾಜಕೀಯ (Sullia Congress inner politics) ಇನ್ನೂ ಮುಗಿದಿಲ್ಲ. ಚುನಾವಣೆ ವೇಳೆ ಪಕ್ಷದ್ರೋಹದ ಆರೋಪದೊಂದಿಗೆ ಉಚ್ಚಾಟನೆಗೆ (Expulsion from Party) ಗುರಿಯಾದ ನಾಯಕರೊಬ್ಬರು ನ್ಯಾಯ ಕೋರಿ ದೈವದ ಮೊರೆ ಹೊಕ್ಕಿದ್ದಾರೆ. ಕಡಬ ಬ್ಲಾಕ್​ ಕಾಂಗ್ರೆಸ್‌ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ (Balakrishna Balleri) ಅವರೇ ದೈವದ ಮೊರೆ ಹೊಕ್ಕವರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ (Sullia Assembly constituency) ಕಾಂಗ್ರೆಸ್ ಟಿಕೇಟ್​ ವಿಚಾರದಲ್ಲಿ ಗೊಂದಲ ಉಂಟಾಗಿ ಕೊನೆಯ ಕ್ಷಣದಲ್ಲಿ ಟಿಕೇಟ್​ ಜಿ. ಕೃಷ್ಣಪ್ಪ ಅವರಿಗೆ ನೀಡಲಾಗಿತ್ತು. ಜಿ. ಕೃಷ್ಣಪ್ಪ ಅವರಿಗೆ ಟಿಕೆಟ್‌ ನೀಡಿದ್ದರಿಂದ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ನಂದ ಕುಮಾರ್‌ ಸಿಡಿದೆದ್ದಿದ್ದರು. ಇದರಿಂದಾಗಿ ನಂದಕುಮಾರ್ ಹಾಗೂ ಅವರಿಗೆ ಬೆಂಬಲ ನೀಡಿದ್ದ ಹಲವು ಮುಖಂಡರನ್ನು ಜೂನ್​ 10ರಂದು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಈ ವಿಚಾರ ಈಗ ಮತ್ತೆ ಜೀವ ಪಡೆದುಕೊಂಡಿದೆ.

ಮೀಸಲು ಕ್ಷೇತ್ರವಾಗಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಇಬ್ಬರು ಪ್ರಭಲ ಅಭ್ಯರ್ಥಿಗಳು ಟಿಕೇಟ್ ಆಕಾಂಕ್ಷಿಯಾಗಿದ್ದರು. ಜಿ. ಕೃಷ್ಣಪ್ಪ ಹಾಗೂ ಎಚ್​.ಎನ್​.ನಂದಕುಮಾರ್ ಇಬ್ಬರ ನಡುವೆ ಟಿಕೇಟ್​ಗಾಗಿ ತೀವೃ ಪೈಪೋಟಿ ನಡೆದಿತ್ತು. ಹೀಗಾಗಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದಲ್ಲಿ ಎರಡು ಗುಂಪುಗಳಾಗಿ ಎರಡು ಆಕಾಂಕ್ಷಿಗಳ ಪರ ಹಲವು ಮುಖಂಡರು ಟಿಕೇಟ್ ಫೈಟ್​ ನಡೆಸಿದ್ದರು.

ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಿರುವ ಬಾಲಕೃಷ್ಣ ಬಳ್ಳೇರಿ

ವಿವಾದ ಕೊನೆ ಕ್ಷಣದ ವರೆಗೂ ಬಗೆಹರಿಯದೇ ಇದ್ದಾಗ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾ ನಾಯಕರಾಗಿದ್ದ ರಮಾನಾಥ ರೈ ಅವರನ್ನು ಕಳುಹಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಕೂಡಾ ನಡೆಸಲಾಗಿತ್ತು. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರೆಗೂ ಈ ವಿವಾದ ಹೋಗಿ ಕೊನೆ ಕ್ಷಣದಲ್ಲಿ ಜಿ.ಕೃಷ್ಣಪ್ಪ ಅವರಿಗೆ ಬಿ ಫಾರ್ಮ್​ ನೀಡಲಾಗಿತ್ತು.

ಇದರಿಂದ ಹೆಚ್​.ಎನ್​.ನಂದಕುಮಾರ್ ಅವರಿಗೆ ಬೆಂಬಲಿಸಿದ್ದ ಹಲವು ಕಾಂಗ್ರೆಸ್​ ಮುಖಂಡರಿಗೆ ನಿರಾಶೆ ಆಗಿ ತಾವು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡಿದ್ದರು. ಕೊನೆ ಕ್ಷಣದಲ್ಲಿ ರಮಾನಾಥ ರೈ ಅವರು ಎಲ್ಲರ ಮನ ಒಲಿಸಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಮಾಡಿದ್ದರು.

ಆದರೆ ಚುನಾವಣೆ ಮುಗಿದ ಒಂದು ತಿಂಗಳ ಬಳಿಕ ಕಡಬ ಬ್ಲಾಕ್​ನ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ ಆಂಚನ್, ಆಶಾ ಲಕ್ಷ್ಮಣ್ ಸೇರಿ ಹನ್ನೆರಡು ಜನರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಈ ಬಗ್ಗೆ ತಮ್ಮನ್ನು ಸಮರ್ಥಿಸಿಕೊಂಡ ಇವರಿಗೆ ರಾಜ್ಯ ನಾಯಕರಿಂದ ಯಾವುದೇ ಉತ್ತರ ಸಿಗದ ಹಿನ್ನಲೆಯಲ್ಲಿ ಇದೀಗ ದೈವದ ಮೊರೆ ಹೋಗಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ಬಾಲಕೃಷ್ಣ ಬಳ್ಳೇರಿ

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರೋ ಜಿ.ಕೃಷ್ಣಪ್ಪ ಹಾಗೂ ಸುಳ್ಯ ತಾಲೂಕು ಕಾಂಗ್ರೆಸ್​ ಮುಖಂಡರ ವಿರುದ್ಧ ದೈವದ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಮೇಲೆ ಸುಳ್ಳೂ ಆರೋಪ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡು ಎಂದು ಪ್ರಾರ್ಥಿಸಿದ್ದಾರೆ.

ʻʻನಮ್ಮನ್ನು ಪಕ್ಷದಿಂದ ಪಕ್ಷ ವಿರೋಧಿ ನೆಪ ಹೇಳಿ ಉಚ್ಛಾಟನೆ ಮಾಡಲಾಗಿದೆ .ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕೃಷ್ಣಪ್ಪ ಅವರ ಕುಮ್ಮಕ್ಕಿನಿಂದ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಅವರೇ ಪಕ್ಷವನ್ನು ಸೋಲಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ನಾವು ಇನ್ನೋರ್ವ ಅಭ್ಯರ್ಥಿ ನಂದಕುಮಾರ್ ಅವರನ್ನು ಬೆಂಬಲಿಸದಿರಲು ಅವರೇನು ಕಾಂಗ್ರೆಸ್ ಪಕ್ಷದ ವ್ಯಕ್ತಿಯಲ್ಲವೇ? ಅವರನ್ನು ಬೆಂಬಲಿಸಿದ್ದೇವೆ ಎನ್ನುವ ಕಾರಣದಿಂದ ನಮ್ಮನ್ನು ಪಕ್ಷ ವಿರೋಧಿಗಳು ಎಂದು ಹೇಳಲಾಗುತ್ತಿದೆ. ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆʼʼ ಎಂದು ಉಚ್ಚಾಟಿತ ಕಾಂಗ್ರೆಸ್‌ ನಾಯಕ ಬಾಲಕೃಷ್ಣ ಬಳ್ಳೇರಿ ಹೇಳಿದ್ದಾರೆ.

Exit mobile version