ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯನ್ನು(Election) ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಅದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಮತದಾರರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದ ಸಮಿತಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಸಮಿತಿಗೆ ಹಿರಿಯ ನಾಯಕರು ಕೊಟ್ಟ ಸಲಹೆಗಳ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ.
ಪ್ರಣಾಳಿಕೆಯಲ್ಲಿ ಪ್ರಸ್ತಾಪ ಆಗುತ್ತಿರುವ ಟಾಪ್ 7 ಅಂಶಗಳು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದ್ದು, ದಲಿತರು, ರೈತರು, ಯುವಕರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.
1.ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಜಾರಿ: ದಲಿತ ಸಮುದಾಯದಲ್ಲಿ ಬೃಹತ್ ವೋಟ್ ಬ್ಯಾಂಕ್ ಆಗಿರುವ ಎಡಗೈ ಸಮುದಾಯವನ್ನು ಉಳಿಸಿಕೊಳ್ಳಲು ಪ್ರಣಾಳಿಕೆಯಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಪರಮೇಶ್ವರ್‌ಗೆ ಈ ಬಗ್ಗೆ ಸಲಹೆ ನೀಡಿರುವ ಕೈ ಹಿರಿಯ ನಾಯಕರು, ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿ ಅದಕ್ಕೂ ಮೊದಲು ಲಂಬಾಣಿ ಮತ್ತು ಬಲಗೈ ಸಮುದಾಯದ ಮುಖಂಡರ ಜತೆ ಸಭೆ ನಡೆಸಲು ಸೂಚಿಸಿದ್ದಾರೆ. ಸದಾಶಿವ ಆಯೋಗದ ವರದಿಯಿಂದ ನಿಮ್ಮ ಸಮುದಾಯಗಳಿಗೆ ಅನ್ಯಾಯವಾಗಲ್ಲ, ನಿಮ್ಮನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಮನವರಿಕೆ ಮಾಡಿಕೊಡಲು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | ʼಬಿಲ್ಲವ ಸಮುದಾಯಕ್ಕೆ ಸರ್ಕಾರದಿಂದ ಮೋಸʼ: ಆದೇಶದ ಪ್ರತಿಯನ್ನು ಹರಿದು ಹಾಕಿದ ಸ್ವಾಮೀಜಿ
ಈ ಬಗ್ಗೆ 2018ರ ಚುನಾವಣೆಗೂ ಮೊದಲು ಮಾಜಿ ಸಚಿವ ಆಂಜನೇಯ ಅವರಿಗೆ ಟಾಸ್ಕ್ ಕೊಡಲಾಗಿತ್ತು. ಆದರೆ ಅಂದು ಅವರು ವಿಫಲರಾಗಿದ್ದರು. ಹೀಗಾಗಿ 2023ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ನಾಯಕರು ಒಲವು ತೋರಿದ್ದಾರೆ. ಇದರಿಂದ ಆ ಸಮುದಾಯದ ವೋಟ್ ಬ್ಯಾಂಕ್ ಹಿಡಿದಿಟ್ಟಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಆದರೆ ಇದರಿಂದ ಆಗುವ ಲಾಭಕ್ಕಿಂತಲೂ ನಷ್ಟವೇ ಜಾಸ್ತಿ ಎಂಬ ಆತಂಕ ಸಹ ಇದೆ. ಹಾಗೆಯೇ ಎಸ್‌ಸಿ ಸಮುದಾಯದಲ್ಲಿ ಶೈಕ್ಷಣಿಕ, ಆರ್ಥಿಕ ಮುಂದವರಿದ ಲಂಬಾಣಿ ಹಾಗೂ ಬಲಗೈ ಸಂಬಂಧಿತ ಜಾತಿಗಳ ಮತದಾರರು ಚುನಾವಣೆಯಲ್ಲಿ ಪಕ್ಷದ ವಿರುದ್ಧ ನಿಲ್ಲಬಹುದು ಎಂಬ ಆತಂಕವೂ ಇದೆ. ಹೀಗಾಗಿ ಸಮುದಾಯದ ಮುಖಂಡರನ್ನು ಮನವೊಲಿಸಲು ಸದಾಶಿವ ಆಯೋಗ ವರದಿ ಜಾರಿ ಮಾಡುವುದನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸೂಚನೆ ನೀಡಲಾಗಿದೆ.
2.ರೈತರಿಗೆ ಸಾಲಮನ್ನಾ ಗಿಫ್ಟ್: ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ರೈತರಿಗೆ 50 ಸಾವಿರ ರೂ.ಗಳವೆರೆಗೆ ಸಾಲಮನ್ನಾ ಭಾಗ್ಯ ಕೊಡುವ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿದೆ.
3.ಉದ್ಯೋಗ ಸೃಷ್ಟಿ, ಖಾಲಿ ಹುದ್ದೆ ಭರ್ತಿ: ಯುವ ಮತದಾರರನ್ನು ಸೆಳೆಯಲು ಉದ್ಯೋಗ ಸೃಷ್ಟಿ, ಖಾಲಿ ಹುದ್ದೆ ತುಂಬುವ ಭರವಸೆ ನೀಡುವ ಅಂಶಗಳು ಪ್ರಣಾಳಿಕೆಯಲ್ಲಿ ಸೇರಿವೆ.
4.ಸ್ತ್ರೀ ಶಕ್ತಿ ಸಂಘಗಳ ಟಾರ್ಗೆಟ್: ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಹಣ ಏರಿಕೆ, ಸಬ್ಸಿಡಿ ಕೊಡುವುದು.
5.ನೀರಾವರಿ ಯೋಜನೆ ಪೂರ್ಣಕ್ಕೆ ಟೈಮ್ ಬಾಂಡ್ ನಿಗದಿ, ಪ್ರತಿ ವರ್ಷ 1.50 ಲಕ್ಷ ಕೋಟಿ ಖರ್ಚು: ಕೃಷ್ಣಾ, ಕಾವೇರಿ, ತುಂಗಭದ್ರಾ ಯೋಜನೆಗಳಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಟೈಮ್ ಬಾಂಡ್ ನಲ್ಲಿ ಪೂರ್ಣ ಮಾಡುವುದು. ಪ್ರತಿ ವರ್ಷ ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂ.ಗಳಿಗೆ ಅಧಿಕ ಹಣ ಖರ್ಚು ಮಾಡುವುದು.
6.ಬ್ರಾಂಡ್ ಬೆಂಗಳೂರು ಮರುಸೃಷ್ಟಿ: ಬೆಂಗಳೂರು ಮೆಟ್ರೋ ಮೂರನೇ ಹಂತ ಪೂರ್ಣಗೊಳಿಸುವುದು, ನಗರದ ನಾಲ್ಕು ದಿಕ್ಕು ಸಂಪರ್ಕಿಸಲು ಸಬ್ ಅರ್ಬನ್ ರೈಲು ಯೋಜನೆಯನ್ನು ಟೈಮ್ ಬಾಂಡ್‌ನಲ್ಲಿ ಮುಗಿಸುವುದು, ಬಿಜೆಪಿ ಸರ್ಕಾರದ ಸಮಯದಲ್ಲಿ ಬೆಂಗಳೂರು ಬ್ರಾಂಡ್‌ಗೆ ಆಗಿರುವ ಧಕ್ಕೆ ಸರಿಪಡಿಸಿ ಬ್ರಾಂಡ್ ಬೆಂಗಳೂರು ಮರು ಸೃಷ್ಟಿ ಮಾಡುವುದು.
7.ಕಮಿಷನ್‌ಗೆ ಕಡಿವಾಣ, ಜನಸ್ನೇಹಿ ಆಡಳಿತ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಕಮಿಷನ್ ಆರೋಪಕ್ಕೆ ತೆರೆ ಎಳೆಯುವುದು. ಸರ್ಕಾರಿ ಕಚೇರಿಯಲ್ಲಿ 24×7 ಸಿಸಿ ಟಿವಿ ಅಳವಡಿಕೆ, ಅಧಿಕಾರಿಗಳು, ಜನಸ್ನೇಹಿಯಾಗಿ ಕೆಲಸ ಮಾಡುವ ಅಂಶಗಳು ಪ್ರಣಾಳಿಕೆಯಲ್ಲಿವೆ.
ಇದನ್ನೂ ಓದಿ | ಸಚಿವ ಮುನಿರತ್ನ ವಿರುದ್ಧ ಮಹಿಳಾ ಅಭ್ಯರ್ಥಿ ಘೋಷಿಸಿದ ಡಿಕೆಶಿ: ಮತ್ತೊಮ್ಮೆ ಫಲ ಕೊಡುತ್ತಾ ತಂತ್ರಗಾರಿಕೆ?