ಬೆಂಗಳೂರು: ರಾಜ್ಯ ಹಾಗೂ ಕೇಂದ್ರಸರ್ಕಾರದ ವಿರುದ್ಧ ಈಗಾಗಲೆ ಕೆಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಮೂರು ವಿಧದಲ್ಲಿ ಹೋರಾಟಗಳನ್ನು ರೂಪಿಸಿದೆ.
ಹಾಲಿನ ಉತ್ಪನ್ನಗಳ ದರವನ್ನು ಕೆಎಂಎಫ್ ಹೆಚ್ಚಳ ಮಾಡಿದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆಸಿದ ದಿಢೀರ್ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡಲಾಗಿದೆ.
ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಈಗಾಗಲೆ ಅನೇಕ ವಿಚಾರಗಳಿವೆ. ಇವುಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಜಾರಿ ಮಾಡಬೇಕಿದೆ. ರಾಜ್ಯದ ಜನರಿಗೆ ಸರ್ಕಾರದ ನಿಜಬಣ್ಣ ಬಯಲು ಮಾಡಬೇಕಿದೆ ಎಂದು ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | ನಾನೂ CM ಆಗುವ ಅವಕಾಶವಿದೆ: ಸಿದ್ದರಾಮಯ್ಯ ತವರಲ್ಲೆ ಡಿ.ಕೆ. ಶಿವಕುಮಾರ್ ಹೇಳಿಕೆ
ಮೊದಲ ಹಂತದಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಇ.ಡಿ. ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 21ರಂದು ರಾಜಭವನ ಮುತ್ತಿಗೆ ಹಾಕಲಾಗುತ್ತದೆ. ರಾಜ್ಯದ ಎಲ್ಲ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಭಾಗವಹಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಎರಡನೇ ಹಂತದಲ್ಲಿ ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಯಲಿದೆ. ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ಇತ್ತೀಚೆಗೆ ಅನೇಕ ವಸ್ತುಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಜನಸಾಮಾನ್ಯರು ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈಗಾಗಲೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಜನಸಾಮಾನ್ಯರು ಕಂಗಾಲಾಗಿದ್ದು, ಜಿಎಸ್‌ಟಿ ದರ ಹೆಚ್ಚಳದಿಂದ ಆಕ್ರೋಶ ಹೆಚ್ಚಳವಾಗಿದೆ. ಜಿಲ್ಲಾ ಮಟ್ಟದಲ್ಲಿ ಶಾಸಕರ ಮತ್ತು ಸ್ಥಳೀಯ ನಾಯಕರ ನೇತೃತ್ವದಲ್ಲಿ ಹೋರಾಟಗಳು ನಡೆಯಬೇಕು. ಜಿಎಸ್‌ಟಿ ದರ ಹೆಚ್ಚಳವನ್ನು ಹಿಂಪಡೆಯಲು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಪಡಿಸಬೇಕು ಎಂದು ನಿರ್ಧಾರವಾಗಿದೆ.
ಮೂರನೆ ವಿಧವಾಗಿ, ಮುಖ್ಯವಾಗಿ ಬೆಂಗಳೂರನ್ನು ಗಮನದಲ್ಲಿರಿಸಿ ಹೋರಾಟ ನಡೆಯಲಿದೆ. ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ. ಸುಪ್ರೀಂಕೋರ್ಟ್ ತೀರ್ಪನ್ನೂ ಲೆಕ್ಕಿಸದೆ ಕಾಲಹರಣ ಮಾಡುತ್ತಿದೆ. ಇದರ ವಿರುದ್ಧ ಜನಾಂದೋಲನವನ್ನು ರೂಪಿಸಬೇಕಿದೆ. ಬೆಂಗಳೂರಿನ ಹೋರಾಟಕ್ಕೆ ಶೀಘ್ರದಲ್ಲೆ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ | GST rate hike| 25 ಕೆಜಿಗಿಂತ ಹೆಚ್ಚಿನ ಆಹಾರ ಧಾನ್ಯಗಳ ಪ್ಯಾಕೇಟ್‌ಗೆ ಜಿಎಸ್‌ಟಿ ಇಲ್ಲ