Site icon Vistara News

Congress President Poll | ಶೇ.99 ಮತದಾನ; ಖರ್ಗೆಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ ಸಿದ್ದು

AICC ELECTION ೮

ಬೆಂಗಳೂರು: ಎಐಸಿಸಿ ಅಧ್ಯಕ್ಷ ಗಾದಿ (Congress President Poll) ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ೫೦೩ ಮತಗಳಲ್ಲಿ ೫೦೧ ಮತಗಳು ಚಲಾವಣೆಯಾಗುವ ಮೂಲಕ ಶೇಕಡಾ ೯೯.೬ ಮತದಾನವಾದಂತಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಸ್ಪರ್ಧಿ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಕೆಪಿಸಿಸಿ ಸದಸ್ಯರಾದ ನಿವೇದಿತಾ ಆಳ್ವಾ, ಪ್ರಶಾಂತ ದೇಶಪಾಂಡೆ ವಿದೇಶದಲ್ಲಿದ್ದು, ಅವರಿಬ್ಬರಿಂದ ಮತದಾನ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 503 ಮತಗಳ ಪೈಕಿ‌ 501 ಮತದಾನ ಆಗಿದೆ.

ಯಾರು ಗೆಲುವು ಎಂದು ಹೇಳಲು ಆಗಲ್ಲ- ಡಿ.ಕೆ. ಶಿವಕುಮಾರ್
ಸೋಮವಾರ ಸಂಜೆ ೪ ಗಂಟೆಗೆ ಮತದಾನ ಅಂತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಚೆನ್ನಾಗಿ ನಡೆದಿದೆ. ಹೊರಗಡೆಯಲ್ಲಿ ಕರ್ತವ್ಯದಲ್ಲಿದ್ದವರು ಅಲ್ಲಿಯೇ ಮತದಾನ ಮಾಡಿದ್ದಾರೆ. ಬಿ.ವಿ. ಶ್ರೀನಿವಾಸ್, ನಾಗೇಂದ್ರ, ಡಿ.ಕೆ. ಸುರೇಶ್ ಹಾಗೂ ಜಯರಾಂ ರಮೇಶ್, ಆಂಜನೇಯಲು ಕ್ಯಾಂಪ್ ಸೈಟ್‌ನಲ್ಲಿ ಮತದಾನ ಮಾಡಿದ್ದಾರೆ.

ಇಬ್ಬರು ಮತದಾರರು ವಿದೇಶದಲ್ಲಿ ಇದ್ದಾರೆ. ರೆಹಮಾನ್ ಖಾನ್ ಅವರಿಗೆ ಕೋವಿಡ್ ಇರುವ ಕಾರಣಕ್ಕಾಗಿ ಅವರ ಪರವಾಗಿ ಪಿಆರ್‌ಒ ಮತದಾನ ಮಾಡಿದ್ದಾರೆ. ಕೆಪಿಸಿಸಿ ಸದಸ್ಯತ್ವದ ಅರಿವು ಎಲ್ಲರಿಗೂ ಗೊತ್ತಾಗಿದೆ. ಮುಂದಿನ ‌ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯತ್ವ ಆಗಲಿದೆ ಎಂಬ ವಿಶ್ವಾಸ ಇದೆ ಎಂದು ಡಿಕೆಶಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಗೆಲುವಿನ ಬಗ್ಗೆ ವಿಶ್ವಾಸ ಇದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಮತದಾನ ಮಾಡಿದವರಲ್ಲಿ ಅಭಿಪ್ರಾಯ ಕೇಳಿ, ಗುಪ್ತ ಮತದಾನ ನಡೆದಿದ್ದು, ಯಾರು ಗೆಲ್ಲುತ್ತಾರೆ ಎಂದು ಹೇಳಲು ಆಗದು ಎಂದು ಉತ್ತರಿಸಿದರು.

ಇದನ್ನೂ ಓದಿ | Bharat jodo | ಬಳ್ಳಾರಿಯ ಜೀನ್ಸ್‌ ಉದ್ಯಮದ ನೋವು ನಲಿವು ಕೇಳಿಸಿಕೊಂಡ ರಾಹುಲ್‌ ಗಾಂಧಿ, ಸಿಕ್ಕಿತು ಕೆಲವು ಗಿಫ್ಟ್‌!

ಮಲ್ಲಿಕಾರ್ಜುನ ಖರ್ಗೆಗೆ ಸಿದ್ದರಾಮಯ್ಯ ಹಾರೈಕೆ
ಮಲ್ಲಿಕಾರ್ಜುನ ಖರ್ಗೆಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ, “ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದ್ದಾರೆ. ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಗೆ ಬಂದು ಮತ ಚಲಾವಣೆ ಮಾಡಿದ್ದ ಸಿದ್ದರಾಮಯ್ಯ ಬಳಿಕ ಮನೆಗೆ ತೆರಳಿದ್ದರು. ಸಂಜೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, “ನಿಮಗೆ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದ್ದಾರೆ.

ಅನಾರೋಗ್ಯದಲ್ಲೂ ಬಂದು ಮತದಾನ
ಪಾರ್ಶ್ವವಾಯು ಪೀಡಿತರಾಗಿದ್ದರೂ ಮಲ್ಲಿಕಾರ್ಜುನ ಖರ್ಗೆ ಆಪ್ತ ಶಾಂತಗೌಡ ಜುಮ್ಮಾದ್ರಿ ಎಐಸಿಸಿ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಬಂದು ಮತದಾನ ಮಾಡಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಅವರಿಗೆ ನಡೆದಾಡಲೂ ಕಷ್ಟದ ಪರಿಸ್ಥಿತಿ ಇದೆ. ಹೀಗಿದ್ದರೂ ಅವರು ಬಂದು ತಮ್ಮ ಹಕ್ಕು ಚಲಾಯಿಸಿದರು.

ಜೇವರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡರಾಗಿರುವ ಶಾಂತಗೌಡ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ದಿ. ಧರಂಸಿಂಗ್ ಜತೆಗೆ ಹಲವು ವರ್ಷಗಳ ಒಡನಾಟವನ್ನು ಹೊಂದಿದ್ದಾರೆ. ಹೀಗಾಗಿ ಖರ್ಗೆಗೆ ಬಹಳ ಆತ್ಮೀಯರಾಗಿದ್ದಾರೆ. ಶಾಂತಗೌಡ ಜುಮ್ಮಾದ್ರಿ ಅವರು ಮತದಾನ ಕೇಂದ್ರಕ್ಕೆ ಬರುತ್ತಿದ್ದಂತೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಖರ್ಗೆ, ಆರೋಗ್ಯ ವಿಚಾರಿಸಿದರು. ಮತದಾನದ ಬಳಿಕ ಧನ್ಯವಾದ ಸಲ್ಲಿಸಿದರು. ಬಳಿಕ ಶಾಂತಗೌಡರನ್ನು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕರೆದುಕೊಂಡು ಹೋಗಿ ಕಾರಲ್ಲಿ ಕೂರಿಸಿದರು.

ಖರ್ಗೆಗೆ ಪುತ್ರ ಪ್ರಿಯಾಂಕ್‌ ಮತವೇ ಇಲ್ಲವೇ?
ಎಐಸಿಸಿ ಅಧ್ಯಕ್ಷ ಸ್ಥಾನದ‌ ಮತದಾರರ ಪಟ್ಟಿಯಲ್ಲಿ ಹಲವರ ಹೆಸರುಗಳೇ ಇರಲಿಲ್ಲ. ಇದು ಕಾಂಗ್ರೆಸ್‌ ನಾಯಕರೇ ಮಾಡಿಕೊಂಡ ಎಡವಟ್ಟು ಎಂಬುದು ಬಳಿಕ ಗೊತ್ತಾಗಿದೆ. ವಿಪರ್ಯಾಸವೆಂದರೆ ಎಐಸಿಸಿ ಅಧ್ಯಕ್ಷ ಚುನಾವಣೆಯ ಸ್ಪರ್ಧಾಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರ ಹೆಸರೂ ಮತಪಟ್ಟಿಯಲ್ಲಿ ಇರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆ ಬಗ್ಗೆ ಯಾರಿಗೂ ಸುಳಿವು ಇಲ್ಲದೇ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಎಐಸಿಸಿ ಚುಣಾವಣೆಗೆ ಪಿಸಿಸಿ ಸದಸ್ಯರಾದವರು ಮತದಾನ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ತಮ್ಮ ಆಪ್ತರಿಗೆ ಮತದಾನದ ಹಕ್ಕನ್ನು ಬಿಟ್ಟುಕೊಡಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಮೊದಲೇ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವಾರು ನಾಯಕರು ತಮ್ಮ ಹಕ್ಕುಗಳನ್ನು ಕಾರ್ಯಕರ್ತರು ಸೇರಿದಂತೆ ಹಲವರಿಗೆ ಬಿಟ್ಟುಕೊಟ್ಟಿದ್ದರು.

ಬಳಿಕ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಮತದಾರರ ಪಟ್ಟಿ ಬಹಳ ಮಹತ್ವ ಪಡೆದುಕೊಂಡಿತ್ತು. ಮತದಾನದ ಹಕ್ಕು ಬಿಟ್ಟು ಕೊಟ್ಟಿದ್ದ ಕೆಲ ಶಾಸಕರಿಗೆ ಬಳಿಕ ತಳಮಳ ಪ್ರಾರಂಭವಾಗಿದೆ. ಮತದಾನ ಮಾಡಲು ಕೆಲ ಶಾಸಕರು ಕೆಪಿಸಿಸಿ ಅಧ್ಯಕ್ಷರಿಂದ ನಾಮ ನಿರ್ದೇಶನಗೊಂಡು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಪ್ರಿಯಾಂಕ್‌ ಖರ್ಗೆ ಸೇರಿದ್ದರೇ ಇಲ್ಲವೇ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಎಐಸಿಸಿ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Congress President Poll | ಬಳ್ಳಾರಿಯಲ್ಲಿ ಮತ ಹಾಕಿದ ರಾಹುಲ್‌; ಖರ್ಗೆ, ಸಿದ್ದು, ಡಿಕೆಶಿ ಬೆಂಗಳೂರಲ್ಲಿ

ಬೆಳಗ್ಗೆ ಬಳ್ಳಾರಿಯಲ್ಲಿ ಮತದಾನ ಮಾಡಿದ್ದ ರಾಹುಲ್
ಭಾರತ್‌ ಜೋಡೋ ಪಾದಯಾತ್ರೆಯಲ್ಲಿರುವ ಕಾರಣ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ಬಳ್ಳಾರಿಯ ಸಂಗನಕಲ್ಲುವಿನಲ್ಲಿ ಮತದಾನ ಮಾಡಿದ್ದರು. ಇತ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ಮತದಾನ ಮಾಡಿದ್ದಾರೆ.

ಬಳ್ಳಾರಿಯ ಸಂಗನಕಲ್ಲುವಿನಲ್ಲಿಯೇ ಭಾನುವಾರ ವಾಸ್ತವ್ಯ ಹೂಡಿದ್ದ ರಾಹುಲ್‌ ಗಾಂಧಿ ಹಾಗೂ ೪೦ಕ್ಕೂ ಹೆಚ್ಚು ಸದಸ್ಯರು ಅಲ್ಲಿಯೇ ಮತದಾನ ಮಾಡಿದ್ದಾರೆ. ಸಂಗನಕಲ್ಲುವಿನಲ್ಲಿಯೇ ಮತದಾನಕ್ಕೆ ಮತಗಟ್ಟೆ ಕೇಂದ್ರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ರಾಹುಲ್‌ ಮತದಾನ ನೆರವೇರಿಸಿದ್ದರು.

Exit mobile version