ಬೆಂಗಳೂರು: ಈಗಾಗಲೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ 40% ಹಗರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ರಾಜ್ಯ ಸರ್ಕಾರ ಹೆಣಗಾಡುತ್ತಿರುವ ನಡುವೆಯೇ ಸಚಿವರ ಹೇಳಿಕೆಯೇ ಸಂಕಷ್ಟ ತಂದೊಡ್ಡಿದೆ.
ಪೊಲೀಸ್ ಇಲಾಖೆಯಲ್ಲಿ ಸ್ಥಳ ನಿಯೋಜನೆಗೆ 70 ಲಕ್ಷ ರೂ. ಲಂಚ ಪಡೆಯಲಾಗುತ್ತಿದೆ ಎಂಬ ಸಚಿವ ಎಂ.ಟಿ. ಬಿ. ನಾಗರಾಜ್ ಅವರ ಹೇಳಿಕೆಯನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಂಡಿದೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಚಿವ ಕೃಷ್ಣಭೈರೇಗೌಡ ಹಾಗೂ ಶಾಸಕ ಶಾಸಕ ಶರತ್ ಬಚ್ಚೇಗೌಡ ಅವರಿಂದ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಭ್ರರಷ್ಟಾಚಾರ ವ್ಯಾಪಕವಾಗಿ ಆಗುತ್ತಿದೆ ಎಂದು ವಿರೋಧ ಪಕ್ಷಗಳು, ಮಾಧ್ಯಮ ಎಲ್ಲವೂ ಹೇಳುತ್ತಿವೆ. ಸಚಿವ ಎಂಟಿಬಿ ನಾಗರಾಜ್ ಅವರು ಸರ್ಕಾರದ ಭಾಗ. ಈಗ ಅವರೇ ತುಂಬಾ ಸ್ಪಷ್ಟವಾಗಿ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. 40% ಕಮಿಷನ್ ಇದೆ ಎಂಬುದು ಜಗಜ್ಜಾಹೀರವಾಗಿದೆ. ಸಿಎಂ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ, ಧಮ್ ಇದ್ದರೆ ಇದನ್ನು ತನಿಖೆಗೆ ಒಳಪಡಿಸಿ. ಇದು ನಿಜ ಆಗಿದ್ದರೆ ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು.ಇಲ್ಲದಿದ್ದರೆ ಯಾರೂ ಮಂತ್ರಿಗಳು ಹೇಳಿದ್ದಾರೊ ಅವರು ರಾಜೀನಾಮೆ ಕೊಡಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.
ಈ 70-80 ಲಕ್ಷ ಯಾರಿಗೆ ಸೇರಿದೆ? ಸಿಎಂಗೆ ಸೇರಿದೆಯಾ? ಗೃಹ ಸಚಿವರಿಗೆ ಸೇರಿದೆಯಾ ಎಂಬುದು ಸ್ಪಷ್ಟವಾಗಬೇಕು. ಯತ್ನಾಳ ಅವರು ಸಿಎಂ ಗಾದಿಗೆ 2.5 ಸಾವಿರ ಕೋಟಿ ಬೇಕು ಎಂದು ಹೇಳಿದ್ದಾರೆ. ಮಾಧುಸ್ವಾಮಿ ಅವರೂ ಸರ್ಕಾರ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದ್ದಾರೆ. ಲೂಟಿ ಮಾಡುವುದೇ ಸರ್ಕಾರದ ಕೆಲಸ ಆಗಿದೆ. ಲೂಟಿ ಮಾಡಲು ರಜೆ ತೆಗೆದುಕೊಂಡಿಲ್ಲ. 40% ಕಮಿಷನ್ ವಿಚಾರಕ್ಕೆ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಆದರೆ ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಟ್ಟರು. ಈಗ ನಂದೀಶ್ ಸಾವು ಹೃದಯಾಘಾತದಿಂದ ಆಗಿಲ್ಲ. ಹಣ ಕೊಟ್ಟು ಒತ್ತಡದಿಂದ ಸಾವಾಗಿದೆ. ಅಷ್ಟೊಂದು ದುಡ್ಡು ಕೊಟ್ಟ ಮೇಲೆ ಸಹಜವಾಗಿ ಒತ್ತಡ ಇರುತ್ತದೆ. ನ್ಯಾಯಾಂಗ ತನಿಖೆ ಆದ್ರೆ ಮಾತ್ರ ಸತ್ಯ ಹೊರಗೆ ಬರುತ್ತದೆ ಎಂದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇನ್ಸ್‌ಪೆಕ್ಟರ್ ನಂದೀಶ್ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲಾಗದೇ ನಿಧನರಾಗಿದ್ದಾರೆ. ನಂದೀಶ್ 70-80ಲಕ್ಷ ಲಂಚ ಕೊಟ್ಟು ಆ ಸ್ಟೇಷನ್‌ಗೆ ಬಂದಿದ್ದಾರೆ. ಇನ್ಸ್ಪೆಕ್ಟರ್ ಪೋಸ್ಟ್ ಇತ್ತೀಚಿನ ದಿನಗಳಲ್ಲಿ ಒಂದು ವರ್ಷದ ಅವಧಿಗೆ ಮಾತ್ರ. 365ನೇ ದಿನವೇ ಅವರ ವರ್ಗಾವಣೆ ಆಗುತ್ತದೆ. ಬಕಪಕ್ಷಿಗಳ ತರಹ ಸರ್ಕಾರ ಕಾಯ್ದು ಒಂದು ವರ್ಷಕ್ಕೆ ವರ್ಗಾವಣೆ ಮಾಡುತ್ತದೆ. ವರ್ಗಾವಣೆ ಆದ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡುತ್ತದೆ. 70-80 ಲಕ್ಷಕ್ಕೆ ಮೂರು ರೂ. ಬಡ್ಡಿ ಅಂತ ಲೆಕ್ಕ ಹಾಕಿದರೆ 1.20 ಕೋಟಿ ಆಗುತ್ತದೆ. ಮುಂದಿನ ಪೋಸ್ಟ್‌ಗೆ ಬೇಕಾಗುವುದರಿಂದ ಮತ್ತೆ 80 ಲಕ್ಷ ಸಂಪಾದನೆ ಮಾಡಬೇಕು. ಒಂದು ವರ್ಷದಲ್ಲಿ 2 ಕೋಟಿ ರೂ. ಸಂಪಾದನೆ ಮಾಡಬೇಕು. ಈ ತರಹದ ಪರಿಸ್ಥಿತಿ ಬಿಜೆಪಿ ಸರ್ಕಾರದಲ್ಲಿ ನಿರ್ಮಾಣ ಆಗಿದೆ.ಒತ್ತಡದಿಂದ ಪೊಲೀಸರು ಕಪ್ಪ ಕಾಣಿಕೆಗಳನ್ನು ಸಲ್ಲಿಸುವಂತಾಗಿದೆ. ಪೊಲೀಸ್ ಸ್ಟೇಷನ್ ಗಳು ಟೋಲ್ ಗಳಾಗಿವೆ ಎಂದರು.
ಸುಪ್ರೀಂಕೋರ್ಟ್ ಪ್ರಕರಣ ದಾಖಲಿಸಿಕೊಳ್ಳಲಿ
ಈ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಎಂಟಿಬಿ ನಾಗರಾಜ್ ಅವರ ಆಡಿಯೋ ಲೀಕ್ ಬಗ್ಗೆ ಪ್ರಶ್ನೆ ಕೇಳಿದಾಗ, ‘ಈ ಸರ್ಕಾರ ಹುಟ್ಟಿರುವುದೇ ಆಪರೇಷನ್ ಕಮಲ ಎಂಬ ಭ್ರಷ್ಟಾಚಾರದಲ್ಲಿ. ಇದರಲ್ಲಿ ಎಂಟಿಬಿ ನಾಗರಾಜ್ ಅವರು ಕೂಡ ಸೇರಿದ್ದಾರೆ. ನಿನ್ನೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಮುಂದಾದಾಗ ಕೋಟಿ, ಕೋಟಿ ಹಣ ಸಿಕ್ಕಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ನಡೆದಿದೆ ಎಂದು ಹಿಂದೆ ಶಾಸಕ ಶ್ರೀನಿವಾಸ ಗೌಡರು ವಿಧಾನ ಸಭೆಯಲ್ಲಿ ತಿಳಿಸಿದರು. ಆದರೆ ಸರ್ಕಾರ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿತು. ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮಾಡುತ್ತಿದ್ದಾರೆ.
ಆಪರೇಷನ್ ಕಮಲದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಆ ಮೂಲಕ ಈ ಅಕ್ರಮ ಕೊನೆಗೊಂಡು ಪ್ರಜಾಪ್ರಭುತ್ವ ಉಳಿಯಬೇಕಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು. ಈ ಪ್ರಕರಣಗಳಿಗೆ ಪಿಎಂಎಲ್ಎ ಹಾಗೂ ಹಣಕಾಸು ಅವ್ಯವಹಾರ ಅನ್ವಯವಾಗುವುದಿಲ್ಲವೇ? ಹೀಗಾಗಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯನ್ನು ಬೆಳಕಿಗೆ ತರಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಟ್ವೀಟ್ ವಾರ್
ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದೆ. ಸಚಿವ MTB ನಾಗರಾಜ್ ಅವರು 40% ಸರ್ಕಾರದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ. ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳನ್ನು ನಡೆದಿರುವುದು ಸ್ಪಷ್ಟಪಡಿಸಿದ್ದಾರೆ. PayCM ಎಂದಾಕ್ಷಣ ಉರಿದು ಬೀಳುವ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಪೋಸ್ಟಿಂಗ್ ಪಡೆಯಲು 70, 80 ಲಕ್ಷ ನೀಡಿದ್ದು ಯಾರಿಗೆ? ಯಾರು ಈ ಡೀಲಿಂಗ್ ಮಾಡುವುದು? ಎಂದು ಕುಟುಕಿದೆ.
ಇದನ್ನೂ ಓದಿ | SCST ಮೀಸಲು | ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಡಿಕೆ ಇದೆ: ಎಂಟಿಬಿ ನಾಗರಾಜ್