ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ ಎಂದು ಆರೋಪಿಸಿ ಹಾಗೂ ಇತ್ತೀಚೆಗೆ ನ್ಯಾಯಾಲಯದಲ್ಲಿ ರಾಹುಲ್ ಅರ್ಜಿ ತಿರಸ್ಕಾರದ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ (Congress Protest) ನಡೆಸಿತು.
ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮೌನ ಪ್ರತಿಭಟನೆ ಮಾಡಲು ಎಐಸಿಸಿ ಸೂಚನೆ ನೀಡಿತ್ತು. ಅದೇ ರೀತಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿ ಅನೇಕರು ಭಾಗವಹಿಸಿದ್ದರು.
ಬಾಯಿಗೆ ಬಟ್ಟೆ ಕಟ್ಟಿಕೊಂಡು, ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮದ್ಯಾಹ್ನ 2ಗಂಟೆಗೇ ಪ್ರತಿಭಟನೆ ಮುಗಿಸಿ ಹೊರಟರು. ಇದಕ್ಕೂ ಮೊದಲು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮೌನಪ್ರತಿಭಟನೆಯಲ್ಲಿ ಸಿಎಂ ಭಾಗಿಯಾಗಿದ್ದರು. ವಿಧಾನಸಭೆ ನಡೆಯುತ್ತಿದೆ, ಕೆಲ ಮಂತ್ರಿಗಳು,ಶಾಸಕರಿಗೆ ಕಳಿಸಿ ಕೊಟ್ಟಿದ್ದೇವೆ. ಮುಖಂಡರು, ಕಾರ್ಯಕರ್ತರು ಶ್ರಮಪಟ್ಟಿದ್ದೀರಿ. ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಅವರ ಕುತಂತ್ರದಿಂದ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹ ಮಾಡಿದರು. ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. 2024 ರಲ್ಲಿ ಬಿಜೆಪಿಯವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು ಕಷ್ಟ ಆಗಲಿದೆ. ರಾಷ್ಟ್ರದಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿಕೊಂಡಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಜನ ಕೊಟ್ಟ ಆಶೀರ್ವಾದವೇ ಇದಕ್ಕೆ ಸಾಕ್ಷಿ.
ಅವರು ಭಾರತ ಜೋಡೋ ಮಾಡಿದ ಕಡೆ ನಮ್ಮ ಶಾಸಕರು ಗೆದ್ದಿದ್ದಾರೆ. ಗುಂಡ್ಲುಪೇಟೆಯಿಂದ ರಾಯಚೂರುವರೆಗೂ ಜಯ ಆಗಿದೆ. ಇದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅವರಿಗೆ ಧ್ವನಿ ತುಂಬಲು ಹೋರಾಟ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ದೇಶದ ಬಡವರ ಧ್ವನಿ. ನನ್ನ ಧ್ವನಿ ಯಾರು ಸಹ ಮೊಟಕು ಮಾಡಲು ಆಗಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರ ಜನಪ್ರಿಯತೆ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರ.
ಕರ್ನಾಟಕ ರಾಜ್ಯದ ಜನತೆ ಅವರ ಜೊತೆ ನಿಂತಿದೆ. ಮೂರ್ನಾಲ್ಕು ಜಿಲ್ಲೆ ಬಿಟ್ಟು ಉಳಿದ ಕಡೆ ಹೋರಾಟ ನಡೆಯುತ್ತಿದೆ. ನನಗೆ ಏನೇ ಕೆಲಸ ಕಾರ್ಯ ಇದ್ದರೂ ಪಕ್ಷ ಮುಖ್ಯ. ಎಷ್ಟೇ ದೊಡ್ಡ ನಾಯಕರು ಇದ್ದರೂ ಮೊದಲು ಕಾರ್ಯಕರ್ತರು. ಗಾಂಧಿ ಕುಟುಂಬ ಮಾತ್ರ ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುತ್ತದೆ ಎಂದರು.
ಸುರ್ಜೇವಾಲ ಮಾತನಾಡಿ, ರಾಹುಲ್ ಗಾಂಧಿ ಜನರ ಹಣ ಉಳಿಸಲು ಹೋರಾಟ ಮಾಡ್ತಾ ಇದ್ದಾರೆ. ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಮಹಿಳೆಯರು, ಯುವಕರು, ಸೇರಿದಂತೆ ಎಲ್ಲರೂ ಖಾತೆ ಹೊಂದಿದ್ದಾರೆ. ಬ್ಯಾಂಕ್ ಹಣ ಲೂಟಿ ಮಾಡಿದ್ದಾರೆ. ಅದನ್ನ ರಾಹುಲ್ ಗಾಂಧಿ ಕೇಳಿದ್ದರು. ಮೋದಿ ಎಂಬ ಪದನಾಮ ಹೊಂದಿದವರು ಯಾಕೆ ಕಳ್ಳರು ಆಗಿದ್ದಾರೆ ಎಂದು ಕೋಲಾರದಲ್ಲಿ ಹೇಳಿದ್ದರು. ಲಲಿತ ಮೋದಿ, ವಿಜಯ ಮಲ್ಯ, ನೀರವ್ ಮೋದಿ, ಜಗತ್ತಿನ ಹಣ ಲೂಟಿ ಮಾಡಿಕೊಂಡು ಓಡಿ ಹೋದರು. ಬ್ಯಾಂಕ್‌ಗಳು ನಷ್ಟದಲ್ಲಿವೆ, ಜನ ಸಾಮಾನ್ಯರು ಡೆಪಾಸಿಟ್ ಮಾಡಿದ್ದ ಹಣ ಅದು.
ಇದನ್ನೂ ಓದಿ: Assembly Session: ಸಾಬರಿಗೆ ಕಾಂಗ್ರೆಸ್ ಸರ್ಕಾರದಲ್ಲೂ ರಕ್ಷಣೆ ಇಲ್ಲ: ಹುದ್ದೆ ನೀಡುವಲ್ಲಿ ಮೋಸ ಎಂದ ಎಚ್.ಡಿ. ರೇವಣ್ಣ
ರಾಹುಲ್ ಗಾಂಧಿ ಅವರಿಗೋಸ್ಕರ ಹೋರಾಟ ಮಾಡ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ರಾಹುಲ್ ಹೋರಾಟ ಮಾಡ್ತಿಲ್ಲ. ದೇಶದ ಜನಸಾಮಾನ್ಯರು, ಯುವಕರಿಗೋಸ್ಕರ, ಬ್ಯಾಂಕಿಂಗ್ ವ್ಯವಸ್ಥೆ ಕುರಿತು ರಾಹುಲ್ ಧ್ವನಿ ಎತ್ತಿದ್ದಾರೆ. ನೀರವ್ ಮೋದಿ, ಚೋಕ್ಸಿ ಸೇರಿ ಹಲವರು ಮೂವತ್ತು ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಅವರೆಲ್ಲಾ ವೈಯಕ್ತಿಕವಾಗಿ ಮೋದಿಯವರಿಗೆ ಗೊತ್ತು. ಇದನ್ನ ವಿಪಕ್ಷದವರು ಪ್ರಶ್ನೆ ಮಾಡಬಾರದಾ..?
ಲಲಿತ್ ಮೋದಿ ಇಂಗ್ಲೆಂಡ್‌ಗೆ ಓಡಿ ಹೋದ್ರು. ಅವರ ಮೇಲೆ ಒಂದೂ ಕಂಪ್ಲೇಂಟ್ ಆಗಲಿಲ್ಲ. ಗುಜರಾತ್‌ನ ಮೆಹ್ತಾ ಹನ್ನೊಂದು ಸಾವಿರ ಕೋಟಿ ಲೂಟಿ ಮಾಡಿ ಓಡಿ ಹೋದ್ರು. ಬ್ಯಾಂಕ್ ಗಳಲ್ಲಿ ನಮ್ಮ, ನಿಮ್ಮ ಹಣ ಇರೋದು. ನಾವೆಲ್ಲಾ ನಮ್ಮ ಹಣ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಿದ್ದೀವಿ. 2.52 ಲಕ್ಷ ಕೋಟಿ ಹಣ ವಂಚಕರಿಂದ ಲೂಟಿ ಆಗ್ತಿದೆ. ಇದನ್ನ ಬೊಮ್ಮಾಯಿ, ಕಟೀಲ್ ಪ್ರಶ್ನೆ ಮಾಡಿದ್ದಾರಾ? ಎನ್‌ಪಿಎ ಜಾರಿ ಮಾಡಿದ್ದಾರೆ, ಆ ಹಣವನ್ನ ಜನ ವಾಪಾಸ್ ತಗೆದುಕೊಳ್ಳಲು ಆಗಲ್ಲ. 10 ವರ್ಷಗಳ ಬಜೆಟ್ ನಷ್ಟು ಹಣ ಲೂಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅವರೆಲ್ಲಾ ದೇಶಬಿಟ್ಟು ಯಾಕೆ ಓಡಿಹೋದ್ರು? ಇದರ ವಿರುದ್ಧ ರಾಹುಲ್ ಗಾಂಧಿ ಹೋರಾಟ ಮಾಡ್ತಿದ್ದಾರೆ ಎಂದರು.