ಬೆಂಗಳೂರು: ಅನ್ನಭಾಗ್ಯ ಯೋಜನೆಯಲ್ಲಿ ಹಂಚುವ ಸಲುವಾಗಿ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಯೋಜನೆಯನ್ನು ವಿಫಲಗೊಳಿಸಲು ಹೀಗೆ ಮಾಡಲಾಗುತ್ತಿದೆ ಎಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದರು. ಮಳೆಯಲ್ಲಿ ಮೇಕಪ್ ಹೋದರೂ ಪ್ರತಿಭಟನೆ ನಡೆಸಿದ ಕಾರ್ಯಕರ್ತರಿಗೆ ಡಿಸಿಎಂ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ !
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿಪಡಿಸಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ. ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ.
5 ಕೆ.ಜಿ ಯಷ್ಟು ನೀಡಲು ನಮ್ಮ ಬಳಿ ಅಕ್ಕಿ ಇದೆ. ಉಳಿದ 5 ಕೆ ಜಿಗೆ ಹೊಂದಿಸುತ್ತಿದ್ದೇವೆ. ಕೆಲವರು ನಮಗೆ ಅಕ್ಕಿ ಬದಲು ರಾಗಿ, ಜೋಳ ಕೇಳುತ್ತಿದ್ದಾರೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಬಡವರ ಅನ್ನದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ಮುಂಬರುವ ಸಂಸತ್, ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಾವು ಪುಕ್ಸಟ್ಟೆ ಅಕ್ಕಿ ನೀಡಿ ಎಂದು ಕೇಳುತ್ತಿಲ್ಲ. ಆದರೂ ಅವರು ತಮ್ಮ ನೀತಿ ಬದಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ನಮ್ಮ ಮೇಲೆ ಜನರನ್ನು ಎತ್ತಿಕಟ್ಟಲು ಕೇಂದ್ರ ಈ ರೀತಿ ಮಾಡಿದ್ದಾರೆ.
ಜನ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಯಡಿಯೂರಪ್ಪ ಅವರು, ಸರ್ಕಾರ ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರು ಸುಮ್ಮನಿರುವುದಿಲ್ಲ ಎಂದಿದ್ದಾರೆ. ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರೇ, ನಿಮ್ಮ ಪಕ್ಷ ಹೇಳಿದಂತೆ, ನೀವು ಇನ್ನೂ ಯಾಕೆ ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿಲ್ಲ, ರೈತರ ಆದಾಯ ಡಬಲ್ ಯಾಕೆ ಮಾಡಿಲ್ಲ? ಯುವಕರಿಗೆ ಯಾಕೆ ಉದ್ಯೋಗ ನೀಡಿಲ್ಲ? ಈ ಬಗ್ಗೆ ನೀವು ಮೊದಲು ಉತ್ತರ ನೀಡಿ, ಹೋರಾಟ ಮಾಡಿ. ಅದನ್ನು ಬಿಟ್ಟು ದಿನಬೆಳಗಾದರೆ ಯಡಿಯೂರಪ್ಪ, ಕಟೀಲ್, ಅಶೋಕ್ ಎಲ್ಲರೂ ಒಂದೊಂದು ವ್ಯಂಗದ ಮಾತು ಆಡುತ್ತಿದ್ದಾರೆ. ವಿರೋಧ ಪಕ್ಷವಾಗಿ ರಾಜಕೀಯವಾಗಿ ಟೀಕೆ ಮಾಡಿ ನಮ್ಮನ್ನು ತಿದ್ದಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನೀವು ಕೊಟ್ಟ ಮಾತಿನಂತೆ ಅಚ್ಚೆದಿನ ಬಂದಿಲ್ಲ, ಹೀಗಾಗಿ ನಾವು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ ಎಂದು ನಿಮ್ಮ ಅಧ್ಯಕ್ಷರಾದ ನಡ್ಡಾ ಹಾಗೂ ಪ್ರಧಾನಿ ವಿರುದ್ಧ ಮೊದಲು ಪ್ರತಿಭಟನೆ ಮಾಡಿ.
ನಾವು ಕೇಂದ್ರದ ಬಡ ವಿರೋಧಿ ನೀತಿ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಆಹಾರ ಬದ್ಧತೆ ವಿಚಾರದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬುದು ಕಾಂಗ್ರೆಸ್ ಸಂಕಲ್ಪ. ಇಂದು ಕೇಂದ್ರ ಸರ್ಕಾರದ ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಬಡವರ ಹೊಟ್ಟೆ ತುಂಬುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣದ ವಿರುದ್ಧ ಇಂದು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ. ಸೋನಿಯಾ ಗಾಂಧಿ ಅವರು ಯುಪಿಎ ಸರ್ಕಾರದ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ನಮಗೆ ಆಹಾರವನ್ನು ಸಂವಿಧಾನಬದ್ಧ ಹಕ್ಕಾಗಿ ನೀಡಿದರು. ಆ ಸಂವಿಧಾನದ ಹಕ್ಕಿನ ಮೂಲಕ ನಾವು ದೇಶದ ಜನರಿಗೆ ಅಕ್ಕಿ ಹಂಚಲಾಗುತ್ತಿದೆ. ಕೇಂದ್ರ ಸರ್ಕಾರ ಅಂದು ಪ್ರತಿ ಕೆ.ಜಿ ಅಕ್ಕಿಗೆ ಸುಮಾರು 28 ರೂ. ಉಳಿದ 3-4 ರೂ. ರಾಜ್ಯ ಸರ್ಕಾರ ಭರ್ತಿ ಮಾಡಿ ಬಡವರಿಗೆ ಅಕ್ಕಿ ಹಂಚಲಾಗುತ್ತಿದೆ.
ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆ ಜಾರಿ ಆಗಿದೆ. ಶಕ್ತಿ ಯೋಜನೆ ಜಾರಿಯಾದ ಒಂದು ವಾರದಲ್ಲಿ 3.30 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಜನ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಮೂಲ ಧರ್ಮ ಉಳಿಸುವ ಕೆಲಸ ಆಗುತ್ತಿದೆ. ಗೃಹಜ್ಯೋತಿ ಯೋಜನೆ ನೋಂದಣಿ ಆರಂಭವಾಗಿದೆ. ನೀವೆಲ್ಲರೂ ತಾಳ್ಮೆಯಿಂದ ನೋಂದಣಿ ಮಾಡಿಕೊಳ್ಳಿ, ಆತುರ, ಗಾಬರಿ ಬೇಡ. ನಿಮಗೆಲ್ಲರಿಗೂ ಈ ಯೋಜನೆ ಸಿಗಲಿದೆ. ಆತುರದಿಂದ ತಾಂತ್ರಿಕ ತೊಂದರೆ ಆಗಬಾರದು ಎಂದು ಗೃಹಲಕ್ಷ್ಮಿ ಯೋಜನೆಯನ್ನು ಕಾಲಾವಕಾಶ ಪಡೆದು ಜಾರಿ ಮಾಡಲಾಗುವುದು ಎಂದರು.
ಮಳೆ ಇದ್ದರೂ ಈ ಹೋರಾಟದಲ್ಲಿ ಭಾಗವಹಿಸಿ ಬಡವರ ಅನ್ನಕ್ಕೆ ಹೋರಾಟ ಮಾಡಿ ಇತಿಹಾಸ ನಿರ್ಮಿಸಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಧನ್ಯವಾದ ಸಲ್ಲಿಸಿದರು. ಮಳೆಯಲ್ಲೂ ಕಾರ್ಯಕರ್ತರು ಪ್ರತಿಭಟನೆಗೆ ಬಂದಿದ್ದೀರ. ಪಾಪ, ಮಹಿಳೆಯರ ಮೇಕಪ್ ಎಲ್ಲ ಹೊಯ್ತು. ನಮ್ಮ ಸಲೀಂ ಅಹ್ಮದ್ ಮೇಕಪ್ ಕೂಡ ಹೊಯ್ತು. ರಾಮಲಿಂಗರೆಡ್ಡಿ ಮೇಕಪ್ ಹಾಕಿಲ್ಲ ಎಂದು ಹಾಸ್ಯ ಧಾಟಿಯಲ್ಲಿ ಹೇಳಿದ ಡಿ.ಕೆ. ಶಿವಕುಮಾರ್, ಮಳೆಗೆ ಚಳಿಗೆ ನಾವು ಹೆದರಲ್ಲ. ಈ ಹೋರಾಟವನ್ನು ತಾಲೂಕು ಮಟ್ಟದಲ್ಲಿ ನಡೆಸಿ ಹಳ್ಳಿ ಹಳ್ಳಿ ಜನರಿಗೆ ಕೇಂದ್ರದ ಬಡವರ ವಿರೋಧಿ ನೀತಿ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಟ್ರಾನ್ಸ್‌ಪೋರ್ಟ್ ಕಾರಣದಿಂದ ಅಕ್ಕಿ ವಿತರಣೆ ತಡವಾಗಬಹುದು. ನಾವು ಪಶ್ಚಿಮ ಬಂಗಾಳ, ಆಂದ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢದ ಜತೆ ಮಾತನಾಡಿದ್ದೇವೆ. ಪಂಜಾಬ್‌ನಿಂದ ಅಕ್ಕಿ ತರಲು ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತದೆ. 2 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅಕ್ಕಿ ಸಿಗುತ್ತಿಲ್ಲ. ನಾವು ಕೇಂದ್ರ ಸರ್ಕಾರದ ಮೂರು ಏಜೆನ್ಸಿಗಳಿಂದ ಕೊಟೆಶನ್ ಕರೆದಿದ್ದೇವೆ. ಎಷ್ಟು ಅಕ್ಕಿ ಪೂರೈಸಲು ಸಾಧ್ಯ,ಬೆಲೆ, ಪ್ರಮಾಣದ ಬಗ್ಗೆ ಕೊಟೆಶನ್ ಕರೆದಿದ್ದೇವೆ.
ಬಡವರ ವಿಷಯದಲ್ಲಿ ದ್ವೇಶದ ರಾಜಕೀಯ ಮಾಡ್ತಾರಲ್ಲ ಇವರಿಗೆ ಮಾನ ಮರ್ಯಾದೆ ಮಾನವೀಯತೆ ಇದ್ಯಾ? ಇದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡಿದ್ದೇವೆ. ದುರುದ್ದೇಶದಿಂದ ಹೀಗೆ ಮಾಡಿದ್ದಾರೆ. ನಾವೇನು ಪುಕ್ಕಟ್ಟೆ ಕೇಳಿಲ್ಲ. ಒಪ್ಪಿಕೊಂಡು ಇಲ್ಲ ಅಂದುಬಿಟ್ರು. ಪ್ರಧಾನಿ ಮೋದಿಯವರು ಕೋಪರೇಟಿವ್ ಫೆಡರಲಿಸಿಮ್ ಅಂತಾರೆ. ಇದೆನಾ ಫೆಡರಲ್ ಸಿಸ್ಟಮ್? ಕೇಂದ್ರ ಸರ್ಕಾರ ಅಕ್ಕಿ ಎಲ್ಲಿಂದ ಖರೀದಿ ಮಾಡ್ತಾರೆ. ಅವರೇನು ಅಕ್ಕಿ ಬೆಳೆಯುತ್ತಾರಾ? ಫುಡ್ ಸೆಕ್ಯುರಿಟಿ ಆಕ್ಟ್ ತಂದಿದ್ದು ಯಾರು? ಆಕ್ಟ್ ತಂದಿದ್ದು ಮನ್‌ಮೋಹನ್ ಸಿಂಗ್‌ರವರು ಎಂದು ಹರಿಹಾಯ್ದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ. ಅವರ ಬಳಿ ಸ್ಟಾಕ್ ಇರುವ ಅಕ್ಕಿ ಕೇಳ್ತಾ ಇರೋದು. ಅವರು ಕೂಡ ಸ್ಟಾಕ್ ಕಡಿಮೆ ಮಾಡಿಕೊಳ್ಳಬಹುದು. ರಾಜ್ಯಗಳಿಂದ ಸಂಗ್ರಹ ಮಾಡಿದ ಅಕ್ಕಿ ಇದೆ. ನಾವೇನು ಪುಕ್ಸಟ್ಟೆ ಕೇಳುತ್ತಿಲ್ಲ. ಅವರು ನಿಗದಿ ಮಾಡಿದ ದರ ನಾವು ಕೊಡಲು ಸಿದ್ದವಿದ್ದೇವೆ. ಆದ್ರೂ ಬಿಜೆಪಿ ಕುತಂತ್ರದಿಂದ ಅಕ್ಕಿ ನೀಡುತ್ತಿಲ್ಲ. ನಾವು ಕೂಡ ಬೇರೆ ರಾಜ್ಯಗಳಲ್ಲಿ ಅಕ್ಕಿ ವಿಚಾರಣೆ ಮಾಡುತ್ತಿದ್ದೇವೆ. ಅಕ್ಕಿ ಲಭ್ಯತೆ ದೊರೆತ ಕೂಡಲೇ ಅನ್ನಭಾಗ್ಯ ಜಾರಿಗೆ ತರ್ತೇವೆ. ಬಿಜೆಪಿಗರು ರಾಜಕೀಯ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಮಾತನಾಡಲಿ. ರಾಜ್ಯಕ್ಕೆ ಬೇಕಾದ ಅಕ್ಕಿ ಕೊಡಿಸಲಿ ಎಂದರು.
ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಅಕ್ಕಿ ಕೊಡುವುದರಲ್ಲಿ ರಾಜಕೀಯ ಮಾಡೋದು ಬೇಡ. ಬಿಜೆಪಿಯವರಿಗೆ ನೈತಿಕಕತೆ ಇಲ್ಲ. ಕೊಟ್ಟ ಭರವಸೆ ಈಡೇರಿಸಿಲ್ಲ. ಅದಕ್ಕಾಗಿ ನಾವು ಹೋರಾಟ ಮಾಡ್ತಾ ಇದ್ದೇವೆ. ಕೊಟ್ಟ ಮಾತಿನಂತೆ ನಾವು ಅಕ್ಕಿ ಕೊಡ್ತೇವೆ ಎಂದರು. ಬಸ್ ನಲ್ಲಿ ಮಹಿಳೆಯರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಯೋಜನೆ ಇರಲಿದೆ, ಮಹಿಳೆಯರು ಒಂದೆ ಬಾರಿ ಪ್ರಯಾಣ ಮಾಡೋದು ಬೇಡ. ನಾನು ಎಂಡಿಗಳ ಜೊತೆ ಮಾತಾಡಿದ್ದೇನೆ. 3-4 ದಿನಗಳಲ್ಲಿ ಎಲ್ಲವೂ ಸರಿ ಮಾಡ್ತಾರೆ ಎಂದರು.
ಬಿಜೆಪಿ ಅವರು ಪ್ರತಿಭಟನೆ ಮಾಡ್ತಿದ್ದಾರೆ. 10 ಕೆಜಿಯಲ್ಲಿ ಒಂದು ಗ್ರಾಂ ಕಡಿಮೆ ಆದರೂ ಬಿಡಲ್ವಂತೆ. ಬಿಜೆಪಿಯವರು ಸೋನಾ ಮಸೂರಿ ಅಕ್ಕಿ ತಿಂತಾರೆ. ಬಡವರು ತಿನ್ನೋ ಅಕ್ಕಿ ಇವರು ತಿನ್ನಲ್ಲ. ಅಕ್ಕಿ ಬದಲು ದುಡ್ಡು ಕೊಡಬೇಕಂತೆ. ದುಡ್ಡನ್ನ ತಿನ್ನೋಕೆ ಆಗತ್ತಾ..? ಇವರ ಕುತಂತ್ರ ರಾಜಕೀಯದಿಂದಲೇ ಜನ ಇವರನ್ನ ಅಧಿಕಾರದಿಂದ ಕೆಳಗೆ ಇಳಿಸಿದಾರೆ. ಕೇಂದ್ರ ಸರ್ಕಾರ ದುರದ್ದೇಶದಿಂದ ಅಕ್ಕಿ ನೀಡುತ್ತಿಲ್ಲ ಎಂದರು.
ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ನಮ್ಮ ಮಹತ್ವಾಕಾಂಕ್ಷಿ ಯೋಜನೆ ತಡೆಯಲು ಪ್ರಯತ್ನ ನಡೆಯುತ್ತಿದೆ. ಆದರೆ ನಾವು ಯೋಜನೆ ಜಾರಿ ಮಾಡುತ್ತೇವೆ. ಎಥೆನಾಲ್ ಮಾಡಲು ಅಕ್ಕಿ ನೀಡಲಾಗುತ್ತೆ. ಆದರೆ ಬಡವರಿಗೆ ನೀಡಲು ಅಕ್ಕಿ ಕೊಡುವುದಿಲ್ಲ ಎಂದರು.
ಇದನ್ನೂ ಓದಿ: Rice Politics : ಡಿಕೆಶಿ ಮಾಟಮಂತ್ರ ಎಕ್ಸ್‌ಪರ್ಟ್, ಮಂತ್ರದಿಂದ ಅಕ್ಕಿ ತರಿಸಲಿ ಅಂದ ಆರ್ ಅಶೋಕ್