ಬೆಂಗಳೂರು: ಟಿಪ್ಪುವನ್ನು ಉರಿಗೌಡ ಮತ್ತು ನಂಜೇಗೌಡ ಹೊಡೆದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು ಎಂಬ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ವಿವಿಧೆಡೆ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಅಶ್ವತ್ಥನಾರಾಯಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೋಲಾರದಲ್ಲಿ ಅಶ್ವತ್ಥನಾರಾಯಣ ಪ್ರತಿಕೃತಿ ದಹಿಸಿ ಆಕ್ರೋಶ
ಕೋಲಾರ: ಸಿದ್ದರಾಮಯ್ಯ ಕುರಿತು ಸಚಿವ ಅಶ್ವತ್ಥನಾರಾಯಣ ಹೇಳಿಕೆ ಖಂಡಿಸಿ ನಗರದ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಶ್ವತ್ಥನಾರಾಯಣ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಲಕ್ಷ್ಮಿ ನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಭಾವಚಿತ್ರಕ್ಕೆ ಚಪ್ಪಳಿಯಿಂದ ಹೊಡೆದ ಬಳ್ಳಾರಿ ಕಾರ್ಯಕರ್ತರು
ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಚಿವ ಅಶ್ವತ್ಥನಾರಾಯಣ ವಿವಾದಾತ್ಮಕ ಹೇಳಿಕೆ ಖಂಡಿಸಿ ಜಿಲ್ಲಾ ಕುರುಬ ಸಂಘ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳಿಂದ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಶ್ವತ್ಥನಾರಾಯಣ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿ, ರಾಜೀನಾಮೆಗೆ ಒತ್ತಾಯಿಸಿದರು. ಬಳಿಕ ಸರ್ಕಾರ ಹಾಗೂ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ, ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರಾಜೀನಾಮೆಗೆ ಆಗ್ರಹ
ಕೊಪ್ಪಳ: ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹಿಸಿ ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರ ತೊಲಗಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಕುರುಬ ಗೊಂಡ ಸಮಾಜದಿಂದ ಹೋರಾಟ
ಕಲಬುರಗಿ: ಸಿದ್ದರಾಮಯ್ಯ ಬಗ್ಗೆ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಖಂಡಿಸಿ ನಗರದಲ್ಲಿ ಕುರುಬ ಗೊಂಡ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಹೋರಾಟಗಾರರು, ಸಚಿವ ಅಶ್ವತ್ಥನಾರಾಯಣ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಸಚಿವ ಸಂಪುಟದಿಂದ ಅಶ್ವತ್ಥನಾರಾಯಣ ಅವರನ್ನು ಕೈಬಿಟ್ಟು, ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಧಿಕ್ಕಾರದ ಘೋಷಣೆ
ಚಿಕ್ಕಮಗಳೂರು: ಸಚಿವ ಅಶ್ವತ್ಥನಾರಾಯಣ ಹೇಳಕೆ ವಿರೋಧಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಶಿವಮೊಗ್ಗದಲ್ಲಿ ಪೊಲೀಸ್ ಠಾಣೆಗೆ ದೂರು
ಶಿವಮೊಗ್ಗ: ಸಿದ್ದರಾಮಯ್ಯ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಜಯನಗರ ಠಾಣೆಗೆ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ದೂರು ನೀಡಿದರು.
ಮೈಸೂರಿನಲ್ಲಿ ʼನನ್ನನ್ನೂ ಹತ್ಯೆ ಮಾಡಿʼ ಪೋಸ್ಟರ್ ಹಿಡಿದು ಕಾರ್ಯಕರ್ತರ ಪ್ರತಿಭಟನೆ
ಮೈಸೂರು: ಅಶ್ವತ್ಥನಾರಾಯಣ ಹೇಳಿಕೆ ಖಂಡಿಸಿ ಮೈಸೂರಿನಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. “ನನ್ನನ್ನೂ ಹತ್ಯೆ ಮಾಡಿ” ಎಂಬ ಪೋಸ್ಟರ್ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಕಪ್ಪು ಪಟ್ಟಿ ಧರಿಸಿ ಕೈಯಲ್ಲಿ ಭಿತ್ತಿ ಪತ್ರ ಹಿಡಿದು ಕಾಲ್ನಡಿಗೆ ಜಾಥಾ ನಡೆಸಿ ದೇವರಾಜ ಪೋಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ಮೆರವಣಿಗೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಸಚಿವ ಅಶ್ವತ್ಥ ನಾರಾಯಣ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Karnataka Budget 2023 : ಬಡ್ಡಿ ರಹಿತ ಸಾಲ 3 ರಿಂದ 5 ಲಕ್ಷಕ್ಕೆ ಹೆಚ್ಚಳ; ಬಜೆಟ್‌ನಲ್ಲಿ ಘೋಷಣೆ