ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಕೆರಳಿದ ಕಾಂಗ್ರೆಸ್ ಪಡೆ, ನಾಳೆ(ಆ.19) ಬೆಳಗ್ಗೆ 11 ಗಂಟೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಗೆ (Congress Protest) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದು, ಪ್ರತಿಭಟನೆಯಲ್ಲಿ ಸಚಿವರು ಸ್ಥಳೀಯ ಶಾಸಕರು ಕೆಪಿಸಿಸಿ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗುವಂತೆ ಸೂಚನೆ ನೀಡಿದ್ದಾರೆ.
ನಾಳೆ ಪ್ರತಿಭಟನೆ ವಿಚಾರ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇಲ್ಲಸಲ್ಲದ ಆರೋಪ ಮಾಡಲು ಹೊರಟಿದ್ದಾರೆ. ಹಾಗಾಗಿ ಮುಖಂಡರಿಗೆ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೇವೆ. ಇದು ಶಾಂತಿಯುತ ಪ್ರತಿಭಟನೆ ಅಗಿದ್ದು, ಕೆಲ ಕಿಡಿಗೇಡಿಗಳು ಕಲ್ಲೊಡೆಯುವ ಕೆಲಸ ಮಾಡುತ್ತಾರೆ. ಹಾಗಾಗಿ ಸ್ವಲ್ಪ ಹುಷಾರಾಗಿ ಪ್ರತಿಭಟನೆ ಮಾಡಿ ಅಂತ ಹೇಳಿದ್ದೇನೆ. ನಮ್ಮದು ಗಾಂಧಿ ತತ್ವ, ಈ ದೇಶಕ್ಕೆ ಒಂದು ಸಂದೇಶ ಕೊಡಬೇಕು. ಎಐಸಿಸಿಗೆ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಕೊಡಬೇಕು, ಹಾಗಾಗಿ ಭೇಟಿ ಮಾಡಿದ್ದೆ ಎಂದರು.
ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಬಗ್ಗೆ ಪ್ರತಿಕ್ರಿಯಿಸಿ, ಗೇಟ್ ಚೆನ್ನಾಗಿ ಅಳವಡಿಕೆ ಮಾಡಿದ್ದಾರೆ. ಬಿಜೆಪಿಯವರಿಗೆ ಇದು ಉತ್ತರವಾಗಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಕಾರಜೋಳ, ಅಶೋಕ್, ಕುಮಾರಸ್ವಾಮಿ ಏನು ಮಾತಾಡಿದರೋ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನಿಂತಿದೆ. ಸಿದ್ದರಾಮಯ್ಯಗೆ ಕರೆ ಮಾಡಿ, ನಾವು ನಿಮ್ಮ ಜೊತೆಗಿದ್ದೇವೆ. ಕಾನೂನಿನ ಹೋರಾಟ ಮುಂದುವರಿಸಿ ಎಂದು ಹೈಕಮಾಂಡ್ ಧೈರ್ಯ ತುಂಬಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೂಚನೆ ಮೇರೆಗೆ ಕರೆ ಕೇಂದ್ರದ ನಾಯಕರು ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತ್ಮವಿಶ್ವಾಸದಿಂದ ಕಾನೂನು ಹೋರಾಟಕ್ಕೆ ಸಿಎಂ ಸಜ್ಜಾಗಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಕಾಂಗ್ರೆಸ್ ನಾಯಕರ ಆಕ್ಷೇಪಗಳೇನು?
ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಭಾರತ ಸರ್ಕಾರ ಸೆಪ್ಟೆಂಬರ್ 3, 2021 ರಲ್ಲಿ 17 ಎ ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕೆಂದು ನಿಯಮಾವಳಿ ರೂಪಿಸಿದೆ. ಅಂದರೆ ಪೊಲೀಸ್ ಅಧಿಕಾರಿ ಒಂದು ಹುದ್ದೆಯಲ್ಲಿ ಇರುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲು ಈ ಸೆಕ್ಷನ್ ಅಡಿ ಅನುಮತಿ ಪಡೆಯಬೇಕು. 17 ಎ ಸೆಕ್ಷನ್ ಇರುವುದೇ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವ ಸಲುವಾಗಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ಅನುಮತಿ ಪಡೆದಿದ್ದಾರೆ? ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಪ್ರಕರಣದಲ್ಲಿ ತಪ್ಪು ಮಾಡಿರುವವರ ವಿರುದ್ಧ ದಾಖಲೆ ಇರಬೇಕು ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ | Physical Abuse: ಮತ್ತೊಂದು ಪೈಶಾಚಿಕ ಕೃತ್ಯ; ಬಸ್‌ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಯಾರ ಮೇಲೆ ಆಪಾದನೆ ಬಂದಿದೆ ಅವರು, ಯಾವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಪೊಲೀಸರು ರಾಜ್ಯಪಾಲರಿಗೆ ನೀಡಬೇಕು. ಆಗ ಮಾತ್ರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸಾಧ್ಯ. ಭಾರತ ಸರ್ಕಾರವು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುಂಚೆ ಯಾವ, ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದಕ್ಕೆ ಪಟ್ಟಿಯನ್ನು ನೀಡಿದ್ದಾರೆ. ಇವುಗಳಲ್ಲಿ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ. ತನಿಖೆಗೆ ಅನುಮತಿ ಕೊಡಿ ಎಂದು ಮನವಿ ಮಾಡುವ ಅಧಿಕಾರ ಇರುವುದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೆ ಮಾತ್ರ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ ಎಂದು ಕಾಂಗ್ರೆಸ್ ಕಿಡಿಕಾರಿದೆ.